ಶ್ರೀ ಪ್ರಸನ್ನ ತೀರ್ಥರ ಕೃತಿ
ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ |
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ | ಅ ಪ |
ಕೊಳಲನೂದುವಾ ಕೃಷ್ಣ ಕೊಳಲನೂದುವ |
ಜಾರನೆಂದು ಸಣ್ಣಮಾತನಾಡಿದ್ದಾಯಿತು| ಚೋರನೆಂದು ಬಹಳ ದೂರು
ಮಾಡಿದ್ದಾಯಿತು |
ಮೂರು ನಿಮಿಷ ಅವನ ಮರೆಯಲಾಗದಾಯಿತು |
ಬೀರುತಿರುವ ಮೋಹಜಾಲ ಸಡಲದಾಯಿತು | ೧ |
| ಬಾರೆ ಸಖಿ |
ಯಾವನೀತನೆಂದು ಚಿಂತೆ ಮಾಡಿದ್ದಾಯಿತು | ಗೋವಳನಿವನಲ್ಲವೆಂದು ನಿರ್ಧರಾಯಿತು |
ಯಾವನಾದರೇನು ಇವನ ಕ್ಷಣವು ಕಾಣದೆ |
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು | ೨ |
| ಬಾರೆ ಸಖಿ |
ಮಂದಹಾಸದಿಂದ ಸಕಲ ಜಗವ ಬೆಳಗುವ |
ಚಂದ್ರನು ತಾನಿವನ ನೋಡಿ
ಬಹಳ ನಾಚುವ | ಸಾಂದ್ರವಾಯಿತಂತರಿಕ್ಷ ಮಧುರ ನಾದದಿ|
ಮಂದ ಮಾರುತ ತಾ ತಲೆಯನಾಡುವ | ೩ |
| ಬಾರೆ ಸಖಿ |
ನಾದದ ಸುಧೆ ಸಾಗರದಲಿ ತೇಲುವಂತಿದೆ | ಮಾಧವ ತಾ ಸುಧೆಯ ರಸವನೆರಚುವಂತಿದೆ |
ಬಾಧಿಸುತಿಹ ಭವದ ತಾಪವಡಗಿದಂತಿದೆ| ಮಾದರಿಫಲ ರಾಸಕ್ರೀಡೆ ತೋರುವಂತಿದೆ | ೪ |
| ಬಾರೆ ಸಖಿ |
ಸಕಲ ಲೋಕನಾಥನೀತನೆಂದು ತಿಳಿಯಿತು | ಸಕಲವನರ್ಪಿಸುವುದೊಂದೆ
ಮಾರ್ಗ ಉಳಿಯಿತು |
ಲಕುಮಿ ಮುರುಳಿ ರೂಪದಲ್ಲಿ
ಇಹುದು ಹೊಳೆಯಿತು |
ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು | ೫ |
| ಬಾರೆ ಸಖಿ |
No comments:
Post a Comment