ಶ್ರೀ ವಿಜಯದಾಸರ ಕೃತಿ
ರಾಗ ಹಿಂದೊಳ ತಾಳ ಆದಿ
ನೋಡಿದೆ ಗಿರಿಯ ತಿರ್ಮಲನ ನಿತ್ಯ
ಮೂಡಲ ದಿಕ್ಕಿನಲಿಪ್ಪ ನಿರ್ಮಲನಾ ಪ
ನೀರೇರ ಕೂಡಾಡಿದವನಾ ದೇವ
ನೀರೊಳಗೆ ಸದನವ ಬಿಗಿದವನಾ
ನೀರದ ಶ್ಯಾಮ ವರ್ಣನನಾ ಭವ
ನೀರಜ ಭವವಂದ್ಯಾ ದಯಾಸಾಗರನಾ 1
ನೀರು ಪಾದದಲಿ ಪೆತ್ತವನಾ ಮಹಾ
ನೀರು ದಾಟಿ ಮಕ್ಕಳ ತೋರಿದವನಾ
ನೀರಧಿ ಬಿಗಿದ ಪ್ರಬಲನಾ ಅಂದು
ನೀರುಪತಿಯ ಭಂಗವ ಮಾಡಿದವನಾ 2
ನೀರು ಕಟದ ನಿಃಸಂಗನಾ ಸರ್ವ
ನೀರು ಸೇದುವನಾಗಿ ಜಗವ ಸುತ್ತುವನ
ನೀರೊಳಗಾಡುವ ನೀರಜನಾ
ಓರ್ವ ನೀರೇಳ ನಾರಿಯ ಮಾಡಿದ ಗುಣನಾ 3
ನೀರಜೋದರ ನಿರ್ಮೋಹನನಾ ಏಳು
ನೀರಜ ದಳದಲ್ಲಿ ಪೊಳೆವ ಚನ್ನಿಗನಾ
ನೀರು ಬಯಲು ಮಾಡಿದವನಾ ಅನ್ನ
ನೀರೊಳಗಿದ್ದು ಜಗವ ಪೊತ್ತವನಾ 4
ನೀರಜಪಾಣಿ ವಲ್ಲಭನಾ ತೇಜ
ನೀರನ್ನ ತತ್ವ ವ್ಯಾಪಿಸಿಕೊಂಡವನಾ
ನೀರೆ ಗತಿಯ ಮಾಡಿದವನಾ ನಮ್ಮ
ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ 5
***
ನೀರಜೋದರ ನಿರ್ಮೋಹನನಾ ಏಳು
ನೀರಜ ದಳದಲ್ಲಿ ಪೊಳೆವ ಚನ್ನಿಗನಾ
ನೀರು ಬಯಲು ಮಾಡಿದವನಾ ಅನ್ನ
ನೀರೊಳಗಿದ್ದು ಜಗವ ಪೊತ್ತವನಾ 4
ನೀರಜಪಾಣಿ ವಲ್ಲಭನಾ ತೇಜ
ನೀರನ್ನ ತತ್ವ ವ್ಯಾಪಿಸಿಕೊಂಡವನಾ
ನೀರೆ ಗತಿಯ ಮಾಡಿದವನಾ ನಮ್ಮ
ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ 5
***
ಎಷ್ಟೊಂದು ಪ್ರಾಸಬದ್ಧವಾಗಿದೆ. ಹಾಗೆಯೇ ಕೇಳಲೂ ಸಹ ಅಷ್ಟೇ ಸುಮಧುರ. ಆದರೆ ಎಷ್ಟು ಸಲ ಓದಿದರೂ/ಕೇಳಿದರೂ ಅರ್ಥ ಮಾತ್ರ ಆಗುವುದಿಲ್ಲ. ಅರ್ಥ ತಿಳಿದು ದೇವರನಾಮವನ್ನು ಕೇಳಿದಾಗ ಆಗುವ ಆನಂದ ಅಪಾರ ಮತ್ತು ಈ ದೇವರನಾಮದ ಕರ್ತೃ ವಿಜಯದಾಸರ ಮೇಲೆ ನಮಗಾಗುವ ಹೆಮ್ಮೆ ಅನಂತ. ಆ ಶ್ರೀನಿವಾಸನ ಮೇಲಿನ ಭಕ್ತಿ ದ್ವಿಗುಣವಾಗಲಿ ಹಾಗೂ ಶ್ರೀನಿವಾಸನ ಕೃಪೆ ಎಲ್ಲರಿಗೂ ಲಭಿಸಲಿ ಎಂದು ಅಷ್ಟಾವಧಾನಿ ಡಾ. ಕಬ್ಬಿನಾಲೆ ಭಾರದ್ವಾಜ್ ರವರು ಈ ಪದ್ಯದ ಅರ್ಥ/ಭಾವಾರ್ಥ ತಿಳಿಸಿದ್ದಾರೆ. ಅವರಿಗೆ ಧನ್ಯವಾದಗಳು.
ಬೆಟ್ಟದ ಮೇಲಿನ ಶ್ರೀನಿವಾಸನನ್ನು ನೋಡಿದೆಯಾ?
- ಗೋಪಿಕೆಯರ ಜೊತೆಗಿದ್ದವನನ್ನು, ದ್ವಾರಕಾವಾಸನನ್ನು, ನೀಲಮೇಘಶ್ಯಾಮನನ್ನು, ಶಿವ ಬ್ರಹ್ಮವಂದಿತನನ್ನು ನೋಡಿದೆಯಾ?
- ಗಂಗೆಯ ಜನಕನನ್ನು, ಸಮುದ್ರದಾಚೆಗೆ ಹೋಗಿ ದೇವಕಿಯ ಮೊದಲ ಮಕ್ಕಳನ್ನು ತಂದುತೋರಿದವನನ್ನು, ಸಮುದ್ರಕ್ಕೆ ಸೇತುವೆ ಕಟ್ಟಿದವನನ್ನು, ಸಮುದ್ರರಾಜನ ಗರ್ವಭಂಗಮಾಡಿದವನನ್ನು ನೋಡಿದೆಯಾ?
- ಕೂರ್ಮಾವತಾರಿಯನ್ನು, ಮತ್ಸ್ಯಾವತಾರಿಯನ್ನು, ವಟಪತ್ರದಲ್ಲಿ ಮಲಗಿದವನನ್ನು, ಅಹಲ್ಯೆಯ ಶಾಪವನ್ನು ಕಳೆದವನನ್ನು ನೋಡಿದೆಯಾ?
- ಕಮಲನಾಭನನ್ನು (ಬ್ರಹ್ಮಾಂಡೋದರ), ಮೋಹರಹಿತನನ್ನು, ಏಳನೆಯದಾದ ಸಹಸ್ರಾರಚಕ್ರದಲ್ಲಿ ಕಾಣಿಸುವವನನ್ನು, ಪ್ರಳಯಜಲದಿಂದ ಸೃಷ್ಟಿಯನ್ನು ಗೈದವನನ್ನು, ಆಹಾರದಲ್ಲಿ ಅಡಕವಾಗಿರುವವನನ್ನು, ಭೂಮಿಯನ್ನು ಎತ್ತಿದ ವರಾಹಸ್ವಾಮಿಯನ್ನು ಕಂಡೆಯಾ?
- ಲಕ್ಷ್ಮೀದೇವಿಯ ಗಂಡನನ್ನು, ಅಗ್ನೇರಾಪಃ ಎಂಬಂತೆ ಆಪೋನಾರಾಯಣತತ್ವನನ್ನು, ನೀರಿಗೆ ಗತಿಯನ್ನು ಉಂಟುಮಾಡುವ ಸೂರ್ಯನನ್ನು, ನಮ್ಮ ಭೂಲೋಕದ ಶೇಷಗಿರಿಯ ಶ್ರೀನಿವಾಸನನ್ನು ಕಂಡೆಯಾ?!
- ಅನ್ವಯಾರ್ಥ: ಡಾ.ಕಬ್ಬಿನಾಲೆ ಭಾರದ್ವಾಜ್. June 2021
*****
ಜಸ್ಟ್ scroll down ಮಾಡಿ ಇತರ ದೇವರನಾಮಗಳನ್ನು ಕೇಳಲು.