Showing posts with label ಭಯ ನಿವಾರಣವಾದ ಹರಿಯ ನಾಮಗಳು varaha timmappa. Show all posts
Showing posts with label ಭಯ ನಿವಾರಣವಾದ ಹರಿಯ ನಾಮಗಳು varaha timmappa. Show all posts

Friday, 27 December 2019

ಭಯ ನಿವಾರಣವಾದ ಹರಿಯ ನಾಮಗಳು ankita varaha timmappa

by ನೆಕ್ಕರ ಕೃಷ್ಣದಾಸ
ಶಂಕರಾಭರಣ ರಾಗ ತ್ರಿವಿಡೆ ತಾಳ

ಭಯನಿವಾರಣವಾದ ಹರಿಯ ನಾಮಗಳು
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ||ಪ||

ವಸುದೇವಾತ್ಮಜ ಕೇಶವ ದೇವಕಿ
ಬಸುರೊಳಗುದಿಸಿದ ನಾರಾಯಣನು
ಎಸೆದು ನಿಂದನು ಗೋಕುಲದೊಳು ಮಾಧವ
ಕುಸುಮನಾಭನು ಗೋವಿಂದ ನಂದ ನಂದನಕಂದ ||೧||

ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು
ತೊಟ್ಟಿಲ ಶಿಶುವಾಗಿ ಮಧುಸೂಧನ
ಮೆಟ್ಟಿಕೊಂದನು ತ್ರಿವಿಕ್ರಮ ಶಕಟನ
ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ ||೨||

ಬೆಣ್ಣೆಯ ಮೆದ್ದನು ಮಿಣ್ಣಗೆ ಶ್ರೀಧರ
ಕಣ್ಣಿಯ ಕರುವನು ಹೃಷಿಕೇಶನು
ಉಣ್ಣಬಿಟ್ಟನು ತಾಯ ಮೊಲೆಗೆ ಪದ್ಮನಾಭ
ಸಣ್ಣವ ಕ್ಷಣದೊಳು ದಾಮೋದರನಾದ ||೩||

ವಾಸುದೇವನು ದ್ವಾರಾವತಿವಾಸನೆನಿಸಿದ
ಸಾಸಿರ ನಾಮನು ಸಂಕರುಷಣನು
ಅಸುರನಾಗಿಯೆ ಪ್ರದ್ಯುಮ್ನನೆಸೆದನು
ದೋಷರಹಿತನಾದ ಅನಿರುದ್ಧನು ||೪||

ಉತ್ತಮನಾಗಿಯೆ ಪುರುಷೋತ್ತಮನೆಸೆದನು
ಅರ್ಥಿಯಿಂದಲೆ ಅಧೋಕ್ಷಜನಾಮದಿ
ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ
ಮುಕ್ತಿದಾಯಕನಾದನಚ್ಯುತನಾಮದಿ ||೫||

ಕಡಲನಡುವೆ ಜನಾರ್ದನನೆನಿಸಿ ತಾನು
ಹಡಗನು ಸೇರಿಯೆ ಬಂದನುಪೇಂದ್ರನು
ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ
ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ ||೬||

ಇಪ್ಪತ್ತು ನಾಲ್ಕು ನಾಮದ ಸ್ವಾಮಿಯ
ತಪ್ಪದೆ ಒಂಬತ್ತು ಪೂಜೆಯಗೊಂಬನು
ಸರ್ಪಗಿರಿಯ ವರಾಹ ತಿಮ್ಮಪ್ಪರಾಯನು
ಒಪ್ಪುಗೊಂಡನು ಮಧ್ವರಾಯನಾಗಮದೊಳು ||೭||
********