ಏನೆಂದು ಸ್ತುತಿಸಲಿ ದೇವ ರಂಗಯ್ಯ ನಿನ್ನ ಜಾಣ-
ತನವ ನೀನೆ ಬಲ್ಲೆ ಶ್ರೀ ರಂಗಯ್ಯ ಪ.
ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ ನೀನು
ಕುತ್ಸಿತ ತಮನ ಕೊಂದೆ ರಂಗಯ್ಯ
ಸ್ವಚ್ಛ ಕೂರುಮನಾದೆ ರಂಗಯ್ಯ ಭಕ್ತ
ರಿಚ್ಛೆಯ ಪಾಲಿಸಿದೆ ಶ್ರೀ ರಂಗಯ್ಯ1
ಆದಿವರಾಹ ನೀನಾದೆ ರಂಗಯ್ಯ ನೀನು
ಪೋದ ಮೇದಿನಿಯ ತಂದೆ ರಂಗಯ್ಯ
ಭೇದಿಸಿ ಕಂಬದಿ ಬಂದೆ ರಂಗಯ್ಯ ಪ್ರ-
ಹ್ಲಾದನ ಕಾಯ್ದೆ ಶ್ರೀ ರಂಗಯ್ಯ 2
ಬಲಿಯನ್ನು ವಂಚಿಸಿದಂಥ ರಂಗಯ್ಯ ನೀನು
ನೆಲವ ಓರಡಿ ಮಾಡ್ದೆ ರಂಗಯ್ಯ
ಬಲವಂತ ಭಾರ್ಗವನಾದೆ ರಂಗಯ್ಯ ನೀನು
ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ 3
ಜಲಧಿಯನು ಕಟ್ಟಿದೆ ರಂಗಯ್ಯ ಹತ್ತು-
ತಲೆಯವನ ಕುಟ್ಟಿದೆ ರಂಗಯ್ಯ
ಮಲೆತ ಮಾವನ ಕೊಂದೆ ರಂಗಯ್ಯ ಯದು-
ಕುಲವನುದ್ಧರಿಸಿದೆ ಶ್ರೀ ರಂಗಯ್ಯ 4
ಸತಿಯರ ಮೋಹಿಸಿದೆ ನೀನು ರಂಗಯ್ಯ ಬಲು
ಚತುರ ಬೌದ್ಧನಾದೆ ರಂಗಯ್ಯ
ಖತಿಯಿಂದ ಹಯವೇರಿದೆ ರಂಗಯ್ಯ ದು-
ರ್ಮತಿಯ ಕಲಿಯ ಕೊಂದೆ ಶ್ರೀ ರಂಗಯ್ಯ 5
ತ್ರಿಭುವನದೊಳಧಿಕÀ ರಂಗಯ್ಯ ನೀನು
ಉಭಯ ಕಾವೇರಿವಾಸ ರಂಗಯ್ಯ
ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀ-
ನಭಯವಿತ್ತೆನ್ನ ಕಾಯೊ ಶ್ರೀ ರಂಗಯ್ಯ 6
ವಾದಿರಾಜಗೊಲಿದೆ ರಂಗಯ್ಯ ನೀನು
ಮೋದಿ ಹಯವದನನಾದೆ ರಂಗಯ್ಯ
ಸಾಧಿಸಿ ಖಳರ ಕೊಂದೆ ರಂಗಯ್ಯ ವಿ-
ನೋದÀದಿ ವೇದವ ತಂದೆ ಶ್ರೀ ರಂಗಯ್ಯ 7
***