ಶ್ರೀ ವೈಕುಂಠದಾಸಾರ್ಯ ವಿರಚಿತ
ಬೇಲಾಪುರದ ಶ್ರೀ ಚನ್ನಕೇಶವ ದೇವರ ಸ್ತೋತ್ರ ಸುಳಾದಿ
ರಾಗ : ಆನಂದಭೈರವಿ
ಧ್ರುವತಾಳ
ನೋಡೆಲೆ ಮನವೇ ಜಗದೀಶನ ಲಾವಣ್ಯಾಂಬುಧಿಯನನುದಿನ
ಬೇಡು ಬೇಡಿದನೊಲಿದೀವ ದಾನಿಗಳರಸನ
ಕೂಡೆಲೆ ಮನವೇ ಸುಖನಿಧಿಯ ಅಜಭವೇಂದ್ರಾದಿ ಸುರೇಶ
ಕೇಡಿಲ್ಲದ ನಿಜಪದ ಆವನೊಲವೆ
ಆಡಾತನ ದಾಸರೊಳಗೆ ದುರಿತ ಕೋಟಿಗಳನು ನೀಗೆ
ರೂಢಿಗೆ ದಕ್ಷಣವಾರಣಾಸಿ ಎನಿಪ ಬೇಲಾಪುರದಲಿ
ಬೇಡಿದನೀವೆನು ಭಕುತಜನರಿಗೆಂದು ಕರುಣದಲಿ
ಗಾಡಿಗಾರ ಚನ್ನಕನಾದ ವೈಕುಂಠವಿಠ್ಠಲ ಆಆಆಆ ಬಂದೈಧಾನೆ
॥೧॥
ಆದಿತಾಳ
ಮೆರೆವ ಮುಕುಟ ಮುತ್ತಿನಮೂಗುತಿ
ಕರ್ಣದೊಳು ನಿರುಪಮ ರತ್ನದೋಲೆರಾಜಿತ
ವರದಾಕರಚತುಷ್ಟದಲಿ ಶಂಖ ಚಕ್ರ ಗಧೆ ಪದುಮ
ಸರಸಿಜ ಸಂಸ್ಕೃತಿಯು ಪೀತಾಂಬರದ
ಸಿರಿ ವೈಕುಂಠವಿಠ್ಠಲ ಬೇಲಾಪುರದ
ಕರುಣಾಕರ ಚನ್ನಕೆಶವ ನಿನ್ನ ಮಹಿಮೆಗೆ ನಮೋ ನಮೋ॥೨॥
ರೂಪಕತಾಳ
ಕಮಲಜಾರಾಧಿತಾಂಘ್ರಿ ಕಮಲಾ ಆರಾಧಿತಾಂಘ್ರಿ
ಕಮಲಾಕುಚ ಕುಂಕುಮಾಂಕಿತ ಪದ
ಅಮರನದಿಯ ಪಡೆದ ಚರಣ ಕಂಜ
ಅಮಿತ ಮಹಿಮಾ ಎನ್ನ ದೇಹ ಮನಿಯೊಳಗನುದಿನ ನಿಲಿಸಯ್ಯ
ನಮೋ ಬೇಲಾಪುರದ ಚನ್ನಕೇಶವ ವೈಕುಂಠವಿಠ್ಠಲಾ
ಅಮಿತ ಮಹಿಮಾ ಎನ್ನ ದೇಹಮನೆಯೊಳನುದಿನ ನಿಲಿಸಯ್ಯಾ॥೩॥
ಝಂಪೆತಾಳ
ನಿನ್ನ ಕೀರುತಿ ಕಿವಿಗೆ ನಾಮಾ ಎನ್ನ ಚಾರು ಲಾವಣ್ಯ
ಎನ್ನ ಕಣ್ಣಿಗೆ ಆ ಆ ಇದೆ ಸಾರವಯ್ಯ
ಸಿರಿ ವೈಕುಂಠವಿಠ್ಠಲ ಬೇಲಾಪುರಧೀಶ ಚಾರು ಲಾವಣ್ಯ॥೪॥
ತ್ರಿವಿಡಿತಾಳ
ಸರಸಿಜೋದ್ಭವಶೂಲಿ ಸುರಪಮುಖ್ಯ
ಸುರಾಸುರರು ಶರಧಿಮಥನದಲ್ಲಿ ನೆರೆದಿರಲು
ಪರಮಪುರುಷ ಪುರುಷೋತ್ತಮನೆಂದು ಅಂದು ಇಂದಿರೆ
ಹರುಷದಿ ಮಾಲೆ ಹಾಕಿದಳಾಗಿ
ಪರಮಪುರುಷ ವೈಕುಂಠವಿಠ್ಠಲ ಎಂದು ಇಂದಿರೆ॥೫॥
ಅಟ್ಟತಾಳ
ಅಲ್ಪಮತಿಯು ನಾನೆತ್ತ ಸ್ವಾಮಿ ನಿನ್ನ ಮಹಿಮೆ ಎತ್ತ
ಶ್ರೀಪತಿಯೆ ನಿನ್ನ ಮಹಿಮೆ ಎತ್ತ
ಬಲುಪಾಪಿ ದುರ್ವಿಷಯ ಲಂಪಟನು ನಾನು ನಿನ್ನ ಮಹಿಮೆ ಎತ್ತ
ಬೇಲೂರಪತಿ ಚನ್ನಕೇಶವ ವೈಕುಂಠವಿಠ್ಠಲ ಶ್ರೀಪತಿಯೇ॥೬॥
ಏಕತಾಳ
ಶರಣಾಗತ ಪರಿಪಾಲಕನೆಂಬ
ಬಿರುದು ಕೇಳಿ ನಿನ್ನಯ ಸಿರಿಚರಣಕ್ಕೆ
ಶರಣುಹೊಕ್ಕೆನು ಎನ್ನವಗುಣ ಅಪರಾಧ
ಮರೆಯೊ ಶ್ರೀವೈಕುಂಠವಿಠ್ಠಲ
ಕರುಣಾಕರ ಕೇಶವ ನಿನ್ನ
ಮೂರುತಿಗೆ ನಮೊ ನಮೋ॥೭॥
ಜತೆ
ಸಿರಿ ವೈಕುಂಠವಿಠ್ಠಲ ಬೇಲಾಪುರಧೀಶ
ಕರುಣಾಕರ ಕೇಶವ ನಿನ್ನ ಮಹಿಮೆಗೆ ನಮೋ ನಮೊ॥೮॥
****