ಜ್ವರಹರಾಹ್ವಯನೆ ಶ್ರೀನಾರಸಿಂಹ
ಘೋರನಾಮಯ ಕಳೆದು - ಆರೋಗ್ಯವೀಯೊ ll ಪ ll
ರೋಗ ಹರ ನೀನೆಂದು - ಆಗಮವು ಪೇಳುವುದು
ಯೋಗ ಭೋಗದ ರೂಪಿ - ಭೋಗಿ ಗುರು ಬಿಂಬಾ l
ವಾಗೀಶ ಮುನಿವಂದ್ಯ - ಭೋಗಿ ಶಯನನೆ ದೇವ
ರೋಗ ಹರಿಸುವುದರಿದೆ - ರೋಗಾರ್ತ ಶಿಶುಗೇ ll 1 ll
ನಾಗ ಗಿರಿಯಲಿ ವಾಸ - ನಾಗಭೂಷಣ ಸೇವ್ಯ
ನಾಗಾರಿ ವಾಹನನೆ - ಯೋಗಿ ವಂದ್ಯಾ l
ಶೀಘ್ರದಲಿ ಶಿಶುವ ನಿ - ರೋಗಿಯೆನಿಸುವುದಯ್ಯ
ಬಾಗಿ ಬೇಡುವೆ ಹರಿಯೆ - ಭಾಗವತ ಪ್ರಿಯ ll 2 ll
ಈ ವಸುಮತಿಯ ಸಕಲ - ಜೀವರಂತರ್ಯಾಮಿ
ದೇವ ನರಹರಿ ಜ್ವರ ಹ - ರಾಹ್ವಯನು ಯೆನಿಸೀ l
ಕಾವತಿರೆ ಭಯವೇನು - ತೀವ್ರ ಪಾಲಿಪುದಿವನ
ಗೋವ ಪಾಲಿಪ ಗುರು - ಗೋವಿಂದವಿಟ್ಠಲ ll 3 ll
***