ಹಚ್ಚಡವಗೆಯ ಬೇಕಮ್ಮಾ | ಬಹುಕೊಳೆ
ಮುಚ್ಚಿ ಕೊಂಡಿಹುದು ನೋಡಮ್ಮಾ ಪ.
ಸ್ವಚ್ಛವ ಮಾಡುತ ಅಚ್ಯುತನಂಘ್ರಿಗೆ ಬೆಚ್ಚಗೆ ಹೊದಿಸಲು
ಇಚ್ಛೆಯ ಮಾಡುತ ಅ.ಪ.
ಏಳು ಪದರವಿಹುದೊ | ಬಹು ಕಾಲದಿಂ
ಬಾಳುತ ಬಂದಿಹುದೂ
ಕಾಲಕಾಲಕೆ ಬದಲಾವಣೆ ಪೊಂದುತ
ಬೀಳುತೇಳುತ ಬೆನ್ನು ಬಿಡದಿರುತಿಹುದೊ 1
ಹೊರಗಡೆ ನವ ದುರ್ಗಂಧಾ | ಒಳಗಡೆ ಇನ್ನು
ಅರುಹಲಾರದ ಕಲ್ಮಷಾ
ಸುರರೆಲ್ಲ ಇದಕಿನ್ನು ಸರಿ ಇಲ್ಲವೆಂಬೋರು
ಮರುತಾಂತರ್ಯಾಮಿಗೆ ಸರಿತೋರುವಂದದಿ 2
ಎಪ್ಪತ್ತೆರಡು ಸಾಸಿರಾ | ನೂಲುಗಳಿಂದ
ವಪ್ಪಾಗಿ ಹೊಲಿದ ಪಾರ
ಕಪ್ಪು ಕೆಂಪು ಬಿಳಿ ವಪ್ಪೆ ಬಣ್ಣಗಳಿಂದ
ಸರ್ಪಶಯನ ಸತತ ಸಲಹಿ ಕೊಡುವಂಥ 3
ನಿರ್ಮಲೋದಕವ್ಯಾವುದೇ | ಇದನೊಗೆಯಲು
ಸಮ್ಮತ ಶಿಲೆಯಾವುದೇ
ಬೊಮ್ಮನೈಯ್ಯನ ಸುe್ಞÁನ ಸುಕೊಳದೊಳು
ವಮ್ಮನಸಿನೊಳದ್ದಿ ವದ್ದೆ ಮಾಡುತಲಿನ್ನು 4
ವ್ಯಕ್ತಿ ವೈರಾಗ್ಯ ಶಿಲೇ | ಶ್ರೀ ಹರಿಗುರು
ಭಕ್ತಿ ಎರಡು ಕೈಗಳೇ
ಎತ್ತಿ ವಗೆದು ಎಲ್ಲಾ ಕಶ್ಮಲ ಕಳೆಯುತ
ಮತ್ತೆ ಜಾಲಾಡಿ ಹಿಂಡಿಕೆ ಮಾಡಿ ಶುಭ್ರದಿ 5
ಎತ್ತಿ ತಂದು ಕೊಡುವುತಾ | ಮತ್ತೆ ಕೊಳೆ
ಹತ್ತದಂದದಿ ನೋಡುತಾ
ಉತ್ತಮವಾದ ಮೈದಾನದೊಳಗೆ ಹರಹಿ
ನೆತ್ತಿ ಜ್ಯೋತಿಯ ಘನ ದೀಪ್ತಿಯಲ್ಲೊಣಗಿಸು 6
ಶುದ್ಧ ಸಾತ್ವಿಕವರ್ಣದೀ | ಹೊಳೆವಂಥ ಈ
ಶುದ್ಧ ಹೊದ್ದಿಕೆ ಸ್ಥಾನದೀ
ಮುದ್ದುಕೃಷ್ಣನು ತನ್ನ ಪರಿವಾರ ಸಹಿತದಿ
ಪೊದ್ದಿಕೊಂಡಿಪ್ಪ ಬಲು ಭದ್ರವ ಮಾಡುತ 7
ಹಿಂದೆ ಮುಂದಿನ ಭಯವೆಲ್ಲಾ | ತಪ್ಪುವುದಿನ್ನು
ಸಂದೇಹಪಡಲು ಸಲ್ಲಾ
ತಂದೆ ಮುದ್ದುಮೋಹನ್ನ ಗುರುಗಳು ಪೇಳಿದ
ಒಂದೆ ವಾಕ್ಯವ ಆನಂದದಿ ನಂಬುತ 8
ನೂತನ ಹಚ್ಚಡವೂ | ನೂಲುಗಾರ
ಜಾತಿಯರರಿಯರಿವೂ
ಪ್ರೀತಿಯೋಳ್ ಗೋಪಾಲಕೃಷ್ಣವಿಠ್ಠಲ ಕೊಟ್ಟ
ಖ್ಯಾತಿಯೊಳ್ ಬಾಳಿ ಶ್ರೀನಾಥನ್ನ ಪೊಂದುವೋ 9
****