ಸತ್ಯ ಸಂಕಲ್ಪ ನೀನಹುದೆಲೊ ಜಗದೊಳು
ಭೃತ್ಯವತ್ಸಲ ಹರಿಯೆ ಪ.
ಭಕ್ತರೊಡೆಯ ಹರಿ ನಿತ್ಯ ತೃಪ್ತನೆ
ವ್ಯಾಪ್ತ ಜಗದಿ ಹರಿಯೆ ದೊರೆಯೆ ಅ.ಪ.
ಜನನ ಮರಣ ವಿದೂರನೆ ದೇವಕಿ
ತನಯ ರುಕ್ಮಿಣೀಶ
ಘನಭವ ವನಧಿಯ ದಾಟಿಸಿ ಸಲಹೋ
ವನಜ ನಯನ ದೇವ ಸತತದಿ 1
ಕಮಲಾಕ್ಷ ಕಮಲೇಶ ಕಮಲಪಾಣಿ ಪದ
ಕಮಲವೆನಗೆ ತೋರೊ
ಕಮಲನಾಭ ಹೃತ್ಕಮಲದಿ ನಿಲ್ಲೊ
ಕಮಲಮುಖನೆ ದೇವ ಶ್ರೀಹರಿ 2
ಭಕ್ತಕಮಲ ಬಂಧು ವ್ಯಾಪ್ತ ದಯಾಸಿಂಧು
ಉತ್ತಮನೆ ನೀನೆಂದು
ಎತ್ತ ನೋಡಲು ಸುರರೆತ್ತಿ ಕೈ ಪೊಗಳಲು
ಮತ್ತೆ ನಿನಗೆ ಸರಿಯೆ ಜಗದೊಳು 3
ಶ್ರೀನಿವಾಸನೆ ಕಾಯೊ ಮಾನನಿಧಿಯೆ ಎನ್ನ
ಹೀನ ಕರ್ಮವ ಕಳೆಯೊ
ಶ್ರೀನಿಧಿ ದ್ರೌಪದಿ ಮಾನ ಕಾಯ್ದನೆ
ಗಾನಲೋಲ ಕೃಷ್ಣ ನರಹರಿ 4
ಸಂಕರ್ಷಣನೆ ಮನ ಪಂಕಜದಲಿ ನಿಂತು
ಶಂಕಿಸದಲೆ ಕಾಯೊ
ಪಂಕಜಮುಖ ಹರಿ ಗೋಪಾ-
ಲಕೃಷ್ಣವಿಠ್ಠಲ ಶಂಖ ಚಕ್ರಧರನೆ ಪೊರೆಯೊ ನೀ5
****