Audio by Vidwan Sumukh Moudgalya
ಶ್ರೀ ವಿದ್ಯಾರತ್ನಾಕರತೀರ್ಥರ ರಚನೆ
ರಾಗ : ಮುಖಾರಿ ಆದಿತಾಳ
ಗೋಪಾಲ ಪಾಲಿಸೊ
ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ
ಗೋಪಾಲ ಪಾಲಿಸೊ ॥ಪ॥
ನಾರಿಜನರುಟ್ಟ ಸೀರೆ ಸೆಳೆದು ತಾ
ಭಾರಿ ಮರವನ್ನೇರಿ ವಿನೋದವ
ತೋರಿದ ಸುರರಿಪು ವೈರಿಯೇ ಎನ್ನಯ
ಕೋರಿಕೆ ನಡಸಲಿನ್ಯಾರಿಗೆ ಬೇಡಲೊ ॥೧॥
ತುಂಗಫಣಿಫಣ ಶೃಂಗದೊಳು ಚರ-
ಣಂಗಳ ಕುಣಿಸು ಭುಜಂಗಮವರನಿಗೆ
ಭಂಗಪಡಿಸಿ ಕೃಪಾಪಾಂಗದಿ ಸಲಹಿದ
ಮಂಗಳಮಹಿಮ ರಥಾಂಗಧರ ಬಾಲ ॥೨॥
ಬಂಧು ಬಳಗ ನೀನೆಂದು ತಿಳಿದು ಮ
ತ್ತೊಂದನೆಣಿಸದೆ ಇಂದಿರಾರಮಣನೆ
ಎಂದೆಂದಿಗೂ ಸಲಹೆಂದು ನಾ ಬೇಡುವೆ
ಮಂದರಧರ ಮುಚುಕುಂದವರದ ಸಿರಿ॥೩॥
ಖಿನ್ನ ನಿಜ ಜನರನ್ನು ಸಲಹುವ
ಪನ್ನಗಶಯನ ಪ್ರಸನ್ನ ಹೃದಯನಾಗಿ
ಎನ್ನ ಮನೋರಥವ ಪೂರೈಸುವ
ರನ್ಯರು ಯಾರಯ್ಯ ಚಿನ್ಮಯ ಮೂರುತಿ ॥೪॥
ಕಾಮಜನಕನೆ ನಾಮಗಿರಿ ಸಿರಿ
ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ
ಕಾಮಧೇನು ಚಿಂತಾಮಣಿ ಎನ್ನಯೋಗ-
ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ ॥೫॥
****