Showing posts with label ಏಸೇಸು ಜನ್ಮಂಗಳು gopala vittala ankita suladi ಪ್ರಾರ್ಥನಾ ಸುಳಾದಿ ESESU JANMANGALU PRAARTHANA SULADI. Show all posts
Showing posts with label ಏಸೇಸು ಜನ್ಮಂಗಳು gopala vittala ankita suladi ಪ್ರಾರ್ಥನಾ ಸುಳಾದಿ ESESU JANMANGALU PRAARTHANA SULADI. Show all posts

Sunday, 8 December 2019

ಏಸೇಸು ಜನ್ಮಂಗಳು gopala vittala ankita suladi ಪ್ರಾರ್ಥನಾ ಸುಳಾದಿ ESESU JANMANGALU PRAARTHANA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ 

 ರಾಗ ನೀಲಾಂಬರಿ 

 ಧ್ರುವತಾಳ 

ಏಸೇಸು ಜನ್ಮಂಗಳು ಎನಗೆ ಬಂದು ಪೋದವು
ನಾಶವಾಗಲಿಲ್ಲ ಮನದ ಆಶೆ
ಬೇಸರವಾಗಲಿಲ್ಲ ವಿಷಯಂಗಳಿಂದ ಬುದ್ಧಿ
ಸಾಸಿರದೊಳಗೊಂದು ಪಾಲಾದರು
ನಾಶ ಗೈಸಿತು ಹೀಗೆ ನಾನಾ ಹಿಂದಿನ ಜನ್ಮ
ಈ ಶರೀರವು ಧರಿಸಿ ಇಲ್ಲೆ ಬಂದೆ
ಭೂಸುರರ ಜನ್ಮದಿ ಬಂದೆ ಬಹು ಸುಕೃತ 
ರಾಶಿ ಪುಣ್ಯಗಳು ಕೆಡಲಾಗಿ
ವಾಸೆ ಮತ್ತೇನಿದಕೆ ಬಾಳಿದದಕೆ ವಿಷಯ
ರಾಶಿ ಘಳಿಸಿ ಉಂಡದ್ದೆ ಮಹಾಫಲವೇ
ದೇಶ ಕಾಲ ನೋಡಲು ಅನುಕೂಲವಾಗಿಹದು
ವಾಸುದೇವನೆ ನಿನ್ನ ಇಚ್ಛೆ ಒಂದೇ
ಏಸು ಮಾತು ನಾನು ಆಡಿದರೇನು ನಿನ್ನ
ದಾಸರ ದಾಸತನ ಉಂಟಾಗಿತ್ತೆ
ಈ ಸಮಯವೆ ನೋಡು ಎನ್ನ ಉದ್ಧರಿಸಲಿ
ದೋಷರಹಿತ ಜ್ಞಾನಾನಂದಪೂರ್ಣ
ಲೇಶವಾದರು ಎನಗೆ ನಿನ್ನ ತಿಳಿಯೋ ವಿಷಯದಲ್ಲಿ
ಸಂಶಯ ಎಂಬೊದುಂಟೇನು ಸರ್ವೇಶ್ವರಾ
ಸಂಶಯ ಮಿಶ್ರ ಜ್ಞಾನಿ ಆನಲ್ಲಹುದಲ್ಲವೊ 
ವಿಶೇಷವಾಗಿ ನೀನು ಅರಿಯದಿದ್ದೇ
ನೀ ಸ್ವತಂತ್ರನು ನಿನಗೆ ಬೇಕು ಬೇಡೆಂಬರಿಲ್ಲ
ಈ ಸಥೆ ಮಾತು ನೀ ಕೊಟ್ಟದ್ದಲ್ಲೆ
ಈಷಣತ್ರಯದಲ್ಲಿಗೆಳೆವದೆನ್ನ ಮನ ಸ -
ರ್ವೇಶನೆ ನಿನ್ನ ಕಡೆ ಮಾಡಬಹುದೋ
ನಾಶರಹಿತ ಶ್ರೀಶ ಗೋಪಾಲವಿಠ್ಠಲ 
ಶಾಶ್ವಿತವಾಗಿ ವಾಸವಾದ ಮೂರ್ತಿ ॥ 1 ॥

 ಮಠ್ಯತಾಳ 

ಕಾಣೆನೋ ಕಾಣೆನೋ ಕಡೆ ಗಟ್ಟಿಸುವರ
ಜ್ಞಾನ ಪೇಳುವರ ಕಾಣೆ ಖೂನ ವರಿತು ಇನ್ನು
ಗೇಣು ಮುಂದಕೆ ಸಾಗಿ ಮೊಳ ಹಿಂದಾಗುವದು
ಕಾಣಿ ಪೋದರೆ ಎನ್ನ ಪ್ರಾಣ ಒಪ್ಪಿಸುವೇನೋ
ಹೀನ ಜಯಾದಿಗಳೇನು ತಿಳಿಯಲಿಲ್ಲ
ಶ್ವಾನ ಬುದ್ಧಿಯವನೋ ನಾನು ಕುಯೋಚಿಸುವೆ
ಜ್ಞಾನವಂತರ ಸಂಗ ಏನೆಂತಾಗುವುದೋ
ಗೋಣು ಹಿಸುಕುವ ಜನರ ಸಂಗವು ಬಹಳ
ಶ್ರೀನಿವಾಸ ಶ್ರೀಶ ಗೋಪಾಲವಿಠ್ಠಲನಾ 
ನಿನ್ನವರವನೋ ಏನು ಮಾಡಿಸಿದರೂ ॥ 2 ॥

 ರೂಪಕತಾಳ 

ಇಂದ್ರಿಯಂಗಳನಿತ್ತೆ ಅದಕೆ ವಿಷಯಂಗಳಿತ್ತೆ
ಒಂದರ ಸಾಧನಂಗಳು ಒಂದಕ್ಕಾಗುವೆ ಅಯ್ಯಾ
ಚಂದದಿ ನಿನ್ನ ಕಥೆಯ ಕೇಳ್ವ ಕರ್ಣ
ಮಂದಿಯ ವಾರ್ತೆ ಕೇಳಲಿ ಮರುಳಾದವೊ
ಸುಂದರ ನಿನ್ನ ಮೂರ್ತಿಯ ನೋಳ್ಪ ಅಕ್ಷಿಗಳು
ಸೌಂದರ್ಯ ಸ್ತ್ರೀಯರ ನೋಡ ತಿರುಗಿದವಯ್ಯ
ಇಂದಿರಾಪತಿ ಮುಡಿದ ಗಂಧ ನಿರ್ಮಾಲ್ಯ ಬಿಟ್ಟು
ಇಂದೀವರ ಮುಖಿಯರ ಮೊಗಕೆ ಗಂಧೇಂದ್ರಿ ವೆರಗಿತು
ಹೊಂದಿ ನಿನ್ನಾಲಿಂಗನ ಮಾಳ್ಪ ಸ್ಪರಿಶೇಂದ್ರಿಯ
ಮಂದ ಸ್ತ್ರೀಯರ ಮೈಯ್ಯಾಲಿಂಗನಿಗೆಳೆವದು
ಅಂದದಿ ಸುಜನರರ್ಪಿಸಿ ಅನ್ನಂಗಳ ಬಿಟ್ಟು
ಮಂದ ಜನರ ಮನೆಯ ರಸಂಗಳ ಬಯಸುವೆ
ಇಂದ್ರಿಯಂಗಳು ಎಲ್ಲ ಈ ಪರಿ ವೆಚ್ಚಾಗೆ
ಮುಂದೆನ್ನ ಗತಿಯೇನು ಮುಕ್ಕುಂದನೆ
ಕಂದರ್ಪಜನಕ ಗೋಪಾಲವಿಠ್ಠಲರೇಯಾ 
ಬಂಧು ಕರುಣಸಿಂಧು ಗತಿ ನೀನೆ ಎಂದು ॥ 3 ॥

 ಝಂಪೆತಾಳ 

ಮದುವೆ ಆಗುವದಕೆ ಮಾಡಿದ ಸಾಧನವು
ವಧೆಯ ನಂತರ ಉತ್ತರಕ್ರಿಯಕೆ ಆದಂತೆ
ಉದರಗೋಸುಗ ಮಾಡಿ ಇಟ್ಟ ಅನ್ನವನೊಯ್ದು
ಉದರದ ಮೇಲೆ ಇಡಲು ಕ್ಷುಧೆ ಪೋಪದೇ
ಬಧಿರನ ಮುಂದೆ ಗಾಯನವ ಮಾಡಿದಂತೆ
ಬದುಕು ಎನ್ನದಯ್ಯ ಕೊನೆಗೆ ನೋಡಾ
ಒದಗಿ ಬಾಹೋ ಪಯಣದ ಗತಿ ತಪ್ಪದು
ಉದಯ ರಾತ್ರಿ ಮಧ್ಯೆ ಆವದರಿಯೇ
ಇದೆ ಸಮಯ ಮೀರಿದರೆ ಮುಂದ್ಯಾರು ಅನ್ಯಾರು
ನದಿಗಳ ಥೆರೆಯಂತೆ ಜನನ ಮರಣ
ವಿಧಿಕುಲವು ಸುಮ್ಮನೆ ಬಾಹೋದಿಲ್ಲವೂ
ವಿಧಿಜನಕನನ್ನು ತಿಳಿವದು ಇಲ್ಲವೆ 
ಸುದರಶನ ಪಾಂಚಜನ್ಯ ಚಕ್ರಪಾಣಿ
ಮಧುಸೂದನ ಮಹದಾದಿ ದೈವ
ಕದನ ಕರ್ಕಶ ಮಲ್ಲರ ವೈರಿ ಹೃಷಿಕೇಶ
ಅದುಭೂತ ಮಹಿಮನೆ ಅಲೌಕಿಕ
ಬುಧಜನಪ್ರೀಯ ಗೋಪಾಲವಿಠ್ಠಲ 
ವಿಧಿ ನಿಷೇಧಕೆ ನೀನೇ ನಿಯಾಮಕ ॥ 4 ॥

 ತ್ರಿಪುಟತಾಳ 

ಚಿಂತಾಮಣಿಗಾದರು ಬೆಲೆಯ ಕಂಡವರುಂಟು
ಕಂಥಿಗೆ ಬೆಲೆಯುಂಟೆ ನಾನಾ ಛಿದ್ರ
ಕಂಥಿಯೊಳಗೆ ಮಣಿಯ ಕಟ್ಟಿದ ಕಾರಣ
ಸಂತ ಜನರು ಬಂದಿದೇ ನೋಳ್ಪರು
ಸಂಥಿಯ ಜನರೆಲ್ಲ ಕಂಥಿಯ ನೋಳ್ಪರ
ಸಂತರು ನೋಳ್ಪಂತೆ ನೋಡುವರು
ಕಂಥಿ ಬಿಡಿಸಿ ಮಣಿಯ ಕಡಿಗೆ ಮಾಡಿದರೆ
ಚಿಂತೆ ಯಾಕೆನ್ನ ಚಿಂತಾಮಣಿ ಚಿಂತಿಪದು
ಕಂಥೆಯಲ್ಲ್ಯಭಿಮಾನ ಎನಗಿದ್ದ ಕಾರಣ
ಸಂತೆ ಜನರು ಇಟ್ಟ ಬೆಲೆಗೆ ಬಳಲುವರಯ್ಯಾ
ಅಂತರ್ಮುಖರೆ ಅದರ ನಿಜ ಬಲ್ಲರಲ್ಲದೆ
ಚಿಂತಿತವಾಗುವದೆ ಸರ್ವರಿಗು
ಶಾಂತಮೂರುತಿ ಶ್ರೀಶ ಗೋಪಾಲವಿಠ್ಠಲ ನೀ
ನಿಂತಲ್ಲಿ ಸಕಲ ನಿಧಾನ ಉಂಟು ॥ 5 ॥

 ಅಟ್ಟತಾಳ 

ಚೇತನನ್ನ ನೀನು ಜಡ ಮಾಡುವಿ ಅ -
ಚೇತನ ಪಿಡಿದಿನ್ನು ಚೇತನ ಮಾಡುವಿ
ಪಾತಕ ಪಾವನ ಎರಡು ನಿನ್ನಾಧೀನ
ಯಾತರವನು ಅಲ್ಲ ಎಲ್ಲ ನಿನ್ನಾಧೀನ
ಕೋತಿಯ ಮರಿ ತಾನು ಕಚ್ಚಿಕೊಂಡಿದ್ದಂತೆ
ಆ ತೆರವೆ ಅಯ್ಯ ನಿನ್ನ ಹಿಡಿತ ಬಲು -
ಪ್ರೀತಿಬಡಿಸು ಬಲು ಯಾತನೆ ಬಿಡಿಸಿನ್ನು
ಖ್ಯಾತಿ ವಿಖ್ಯಾತಿಯು ನಿನ್ನದೋ ಸರ್ವೇಶ
ಸ್ವಾತಿಹನಿಯ ಕಪ್ಪಚಿಪ್ಪು ಬಯಸಿದಂತೆ
ಆ ತೆರದಲ್ಲಿ ನಿನ್ನ ಕರುಣಾರಸದ ಬಿಂದು
ಯಾತರಿಂದಾಗಲಿ ಎರೆವದಿಂದೆನ್ನಲ್ಲಿ
ಆತುರನಾಗಿ ಕೈಸೋತು ನಿಲ್ಲಿಸಿಯಿಪ್ಪೆ
ಜ್ಯೋತಿರ್ಮಯ ಮೂರ್ತಿ  ಗೋಪಾಲವಿಠ್ಠಲ ನೀ 
ಪ್ರೀತನಾಗುವ ಸಾಧನವಾನ್ಯಾತರಿಂದಲಿ ತೋರೊ ॥ 6 ॥

 ಆದಿತಾಳ 

ಕೊರುವವನಾಗಿನ್ನು ಕಾಣಲಿಲ್ಲ
ಕರವು ತುರುವು ಆಗಿ ಕಾಣಲಿಲ್ಲ
ಮರದಿದ್ದ ಮದಡೇರಿ ಕಾಣಲಿಲ್ಲ
ಎರಡು ಪಕ್ಕದಿ ಹಾರಿ ಕಾಣಲಿಲ್ಲ
ಮರವಾಗಿ ಮನೆಯಾಗಿ ಕಾಣಲಿಲ್ಲ
ಎರಳ್ಯಾಗಿ ಕಪಿಯಾಗಿ ಕಾಣಲಿಲ್ಲ
ನೊರಜಾಗಿ ನೆಗಳಾಗಿ ಕಾಣಲಿಲ್ಲ
ಪುರ ನಿರ್ಮಿಸಿ ನಿನ್ನ ಕಾಣಲಿಲ್ಲ
ಗಿರಿ ಗುಹಗಳ ತಾಕಿ ಕಾಣಲಿಲ್ಲ
ಪರಿಪರಿ ವ್ರತ ಉಪವಾಸಂಗಳ ಮಾಡಿ
ಬರಿದೆ ದಂಡಿಸಿ ತನು ಕಾಣಲಿಲ್ಲ
ಬರಿದೆ ಪೋದವು ನಾನಾ ಜನ್ಮಂಗಳು
ಮರಳು ಅಹಂಕಾರದಿ ಮಾಯಕೆ ಸಿಲ್ಕಿನ್ನು
ಅರಿದವ ನೀನಲ್ಲ ನೀನಾರೊ ಆನ್ಯಾರೊ
ಮರುಳಂಗೆ ಶೈವಾಚರಣಿಗೆರಗಿ ಇನ್ನು
ತಿರುಗಿ ಶ್ರೀಚರಣಕ್ಕೆರಗಿ ನಡದೆನಲ್ಲ
ತರಳನ ಅಪರಾಧ ತಾಳಿದೆ ನಿನಗಿನ್ನು
ಸರಿವುಂಟೆ ಸರಿವುಂಟೆ ಕರುಣಾನಿಧೆ
ಎರಡು ವಿಂಶತಿ ವತ್ಸರವಾಯಿತು ಈ
ಹರಣ ಧರಿಸಿ ಕರುಣಾಕರನೆ 
ಇರುವ ಬಗೆಗೆ ಎಚ್ಚರಿಸಿದದಕೆ ಎನ್ನ
ಬರಿದೆ ಕಾಲವು ಪೋಗಗೊಡಲಾಗದು
ಗುರುದೇವತಾ ಪ್ರೀತಿ ಆಗಿ ಸಕಲ ಕರ್ಮಾ-
ಚರಣಿಯ ಮಾಡಿಸೊ ಹರೆ ಹರೆ 
ಪರಮದಯಾನಿಧೆ ಗೋಪಾಲವಿಠ್ಠಲ 
ಇರಳು ಹಗಲು ನಿನ್ನ ಸ್ಮರಣೀಯ ನೀಡೊ ॥ 7 ॥

 ಜತೆ 

ಸಕಲಕ್ಕೂ ನಿನ್ನ ಬೇಡುವದೇನು ವಿಷಯದಾ -
ಸಕುತಿಯ ಬಿಡಿಸೊ ಗೋಪಾಲವಿಠ್ಠಲರೇಯಾ ॥
********