Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಮಂತ್ರ ಮಹಾತ್ಮೆ ಸುಳಾದಿ
(ಮಂತ್ರದೋಷ ತ್ಯಜಿಸಿ, ಮಂತ್ರ ಜಪ ಮಾಡತಕ್ಕ ವಿಸ್ತಾರ ವಿಚಾರ)
ರಾಗ ಹಿಂದೋಳ
ಧ್ರುವತಾಳ
ಮಂತ್ರ ಮಾಡೆಲೊ ಮನುಜಾ ಮನೋವಾಚಾಕಾಯದಲ್ಲಿ
ಸಂತತ ಮೂರು ಬಗೆ ಗುಣವ ತಿಳಿದು
ತಂತು ಬಲಿಸಿದಂತೆ ತ್ವಕುವೇಂದ್ರಿ ಮೊದಲಾದ
ಇಂತಿಪ್ಪ ಕರಣಂಗಳು ಪಿಂತೆ ಮಾಡಿ
ಚಿಂತ ಸಂತಾಪ ಲೇಪದೂರ ದುರ್ಜಯ ಸಿರಿ -
ಕಾಂತನ್ನ ಪಾದಪದ್ಮಕ್ರಾಂತನಾಗಿ
ಮುಂತೆ ಬರುವ ಜನುಮ ಕಳಕೊಂಬೊದೊಂದೆ ಮರಳೆ
ಪಿಂತೆ ದುಷ್ಕರ್ಮವೆಂಬೊ ಮಹಾಸಾಗರ
ಶಾಂತವಾಗುವದೊಂದು ಈರ್ವಗೆ ಯೋಗ
ಏಕಾಂತ ಭಕ್ತಿ ಸಂಪಾದಿಸಿ ಜಪಿಸು ಮಂತ್ರ
ಅಂತರಂಗದಲ್ಲಿ ಸದ್ಗುರು ರವಿಮಂಡಲ
ಮಂತ್ರಿಪ್ರಧಾನ ಮುಖ್ಯಪ್ರಾಣನಲ್ಲಿ
ಅಂತರಾತುಮ ಶ್ವೇತದ್ವೀಪ ನಿವಾಸಿಯಲ್ಲಿ
ಚಿಂತಿಸು ಉತ್ತರೋತ್ತರ ಶುಭ ತರಂಗ
ಮಂತ್ರಾರ್ಥವನ್ನೆ ತಿಳಿದು ಹೃದಯಾದಲ್ಲಿ ತತ್ತನ್ಮೂರ್ತಿಗ -
ಳಾಂತು ಧ್ಯಾನವಿಪ್ಪದೊ ತತ್ತತ್ಪ್ರಕಾರ
ಸಂತು ಸದ್ವಿಚಾರ ಮಾಡುವ ಬಗೆ ಅನಾ -
ದ್ಯಂತ ಕಾಲದಲ್ಲಿ ಪ್ರತ್ಯೇಕವೊ
ಸಂತಿವೆ ಪಂಚಾಶದ್ವರ್ಣಗಳೊಂದೊಂದು
ಅಂತು ಮೊದಲು ಇಲ್ಲದೆ ಗುಣ ಕಾಲದಿ
ಎಂತೆಂತು ವ್ಯಾಪ್ತಿಯುಂಟು ಅಲ್ಲಲ್ಲಿ ಪರಿ -
ಯಂತ ಸಮಸ್ತ ವರ್ಣ ಸಮವ್ಯಾಪ್ತಿಯು
ಚಿಂತಿಸು ಮೊದಲಾ ವರ್ಣ ಅತಿ ವಿಚಿತ್ರಾನಂದಾ -
ನಂತ ಗುಣ ಸಂಪೂರ್ಣವುಂಟಾಗಿದೆ
ಎಂತು ಪೇಳಲಿ ಒಂದೊಂದು ವರ್ಣದ ಮಹಿಮೆ
ಅಂತರ ಬಾಹಿರ ಭರಿತವಕ್ಕು
ಭ್ರಾಂತಿ ಇಲ್ಲವೊ ಕಾಣೊ ಪ್ರಳಯದಲ್ಲಿ ನಿತ್ಯ
ಎಂಥವೆಂದರೆ ಗುರುತು ಪೇಳಲೊಶವೆ
ಎಂಥವೊ ಚಕ್ಷುರಾದಿ ಇಂದ್ರಿಯಂಗಳು ಕಾಣವು
ಎಂಥವೊ ಜ್ಞಾನೈಕಗಮ್ಯದಿಂದಲಿ ಶಬ್ದ
ಇಂಥ ವರ್ಣಗಳಿಂದ ಭಾರತಾದಿ ಸರ್ವ
ಗ್ರಂಥಗಳಿಹವು ಅತಿ ವಿಸ್ತಾರ
ಪಂಙ್ತಿ ಭ್ರಮಣವಾಗೆ ಪಾಪ ಪ್ರಾಪುತ ಸ -
ತ್ಪಂಥವಾಗದು ಕಾಣೊ ಎಂದೆಂದಿಗೆ
ಇಂಥ ವರ್ಣಾತ್ಮಕ ವೇದಂಗಳೆನ್ನು ಅ -
ನಂತ ಸ್ವರಾತ್ಮಕ ಶಬ್ದ ಜನ್ಯಾ
ಇಂಥದ್ದೇ ಏನೆಂಬಿಯೊ ಹರಿ ಇಚ್ಛೆ ಇಂಥಾದ್ದೆ ಸ್ವ -
ತಂತ್ರ ಸ್ವಶಕ್ತಿ ಪುರುಷ ಅನಾಮಕ
ಸಂತು ಜನ ವರಣಾತ್ಮಕ ಏಕೈಕ ವಿಧವಾದ
ಮಂತ್ರ ಜಪಿಸಿ ಬದ್ಧವಾದ ಹೃದಯಾ -
ಗ್ರಂಥಿ ಬಿಡಿಸಿಕೊಂಡು ಕೈ ಹೊಯ್ದು ಕೈ ಹೊಯ್ದು
ಸಂತತಿ ಸಮೇತ ನಗುತ ನಗುತ
ಅಂತಕನಾಳಿಗೆ ಸೋಜಿಗ ತೋರುತ್ತ
ಅಂತಕ ದೇವನೆಂದು ಭಳಿರೆ ಎನೆ
ದಂತಿ ತೂಗುವಂತೆ ತೂಗುತ್ತ ನಡವುತ್ತ
ನಿಂತಲ್ಲಿ ನಿಲ್ಲದಲೆ ಹರಿಗೆರಗುತ್ತ
ಸಂತೋಷದಲ್ಲಿ ಪೋಗೆ ಮುಕ್ತಿಯಾ ಸಾರುವರು
ಮಂತ್ರಾಭಿಮಾನಿಗಳು ಜಯ ಜಯವೆನೆ
ಕಂತುಜನಕ ನಮ್ಮ ವಿಜಯವಿಟ್ಠಲನ ನಿ -
ರಂತರ ಜಪಿಸುವದು ಅನುಭವ ಸಿದ್ಧನಾಗಿ ॥ 1 ॥
ಮಟ್ಟತಾಳ
ವರಣಾಭಿಮಾನಿಗಳ ನೆನಿಸು ಆರಂಭದಲ್ಲಿ
ಸಿರಿ ಭೂಮಿ ದುರ್ಗಾ ವಾಣೀ ಭಾರತಿ ಷಟ್ ಸ್ತ್ರೀ -
ಯರು ಸೌಪರಣಿ ವಾರುಣಿ ರುದ್ರಾಣಿ
ಗುರು ಸಮ ನಾರಿಯರು ಚಂಡಿ ಚಾಮುಂಡಿಕ
ಸರುವ ನಾರಿಯರು ಅಭಿಮತದವರೆಂದು
ಪರಿಪರಿಯಿಂದಲಿ ಕೊಂಡಾಡುವರಿದಕೊ
ಹರಿ ರೂಪಗಳುಂಟು ಒಂದೊಂದು ನಾಮದಲಿ
ಕರಿಸಿಕೊಳುತಲಿವೆ ಅನಾದಿಯಲ್ಲಿ ಸಾಮ್ಯ
ಇರುತಿಪ್ಪದು ನೋಡಿ
ವರಣ ವ್ಯತ್ಯಾಸಗಳೆ ಸೃಷ್ಟಿ ಎನಿಸುವದು
ತರುವಾಯ ಕ್ರಮದಿಂದ ಕೂಡುವದೆ ವಿಲೀನ
ವರಣ ನಿಯಾಮಕ ವಿಜಯವಿಟ್ಠಲರೇಯ
ವರಣ ನಾಮಕಾ ವರಣರೂಪ ಭಿನ್ನ ॥ 2 ॥
ತ್ರಿವಿಡಿತಾಳ
ಆದಿಯಲ್ಲಿ ನೀನು ಮೂರು ಬೀಜಗಳಿಂದ
ಕ್ರೋಧನ್ನ ಸಂಹರಿಸು ಇದರೊಳು ತಿಳಿದು
ಭೇದ ಜ್ಞಾನದಿಂದ ಭಕ್ತಿಯ ಮಾಡಿ ಸಂ -
ಪಾದಿಸು ಪುಣ್ಯ ಪುರುಷ ಧ್ಯಾನವ
ಈ ದೇಹದಲ್ಲಿ ತಿಳಿದು ಮಂತ್ರಕ್ಕೆ ಮಹಾದೋಷ
ಕಾದಿಪ್ಪವು ಎಂಟು ನೀಕ್ಷಿಸು ಮನುಜಾ
ಶೋಧಿಸು ಪೆಸರುಗಳು ಮೃತ ಸುಪ್ತ ಮೂಕನೆಂ -
ಬೋದು ನಗ್ನಾ ವೀರ್ಯಹೀನ ಶೂನ್ಯ ಭುಜಂಗ
ವೃಥಾಯಿತಃ ಕ್ಷರಾಹಿ ಅರಿತವೆನ್ನಿ ಕೀಲಿತಾ
ಹೃದಯದಲಿ ಎಣಿಸು ಈ ಪರಿ ತೊರೆದು
ಸಾಧನ ಸಾಧ್ಯ ಸಿದ್ಧನಾಗೆಲೊ
ಪಾದ ಮಂತ್ರಗಳಿಂದ ಮಾಡಿದ ಜಪಕೆ ಕ -
ಲ್ಯಾದಿಗಳುಪಹತಿ ಬಾರದದಕೊ
ಈ ದೋಷ ಗುಣ ಮಂತ್ರ ಮಾಡಿದರೆ ವಿ -
ಷಾದವಲ್ಲದೆ ಲೇಶ ಲಾಭ ಕಾಣೊ
ಬಾಧೆಯಲ್ಲದೆ ಅವಗೆ ಎಂದಿಗೂ ಮನಸು ಪ್ರ -
ಸಾದವಾಗದು ಹಗಲಿರುಳು ಜಪಿಸೆ
ಹಾದಿ ಪಿಡಿದು ಪೋಗಿ ಮಹಾರಣ್ಯ ಸೇರಿದಂ -
ತಾದದಲ್ಲದೆ ನಿರ್ಭಯನಾಗನೊ
ಮೈದೋರನೋ ವರಣ ಮಂತ್ರದೇವತ ಸ್ವಾಮಿ
ಸಾಧು ಜ್ಞಾನಿಯ ಕೇಳು ಪುಶಿಯಲ್ಲವೊ
ಪಾದ ಮಸ್ತಕ ಸರ್ವಾಂಗ ಪರಿಪೂರ್ಣ ಜ್ಞಾ -
ನೋದದಧಿ ಹರಿಮಂತ್ರ ಸಂತೇ ಸರಕೆ
ವೇದವಂದಿತ ನಮ್ಮ ವಿಜಯವಿಟ್ಠಲರೇಯನ
ಪಾದವೆ ನೆರೆನಂಬು ಒಂದೆ ಮಂತ್ರವ ಜಪಿಸು ॥ 3 ॥
ಅಟ್ಟತಾಳ
ವಮನದೊಳಗೆ ಇದ್ದ ಷಡ್ರಸದಂತೆ ಈ
ಕ್ರಮವನ್ನು ತಿಳಿದು ಮಾಡದ ಮಂತ್ರ ಸಮಸ್ತ
ಅಮಿತ ತೇಜಸನಾಗಿ ಪ್ರಾರಂಭದಲ್ಲಿ ಹೃ -
ತ್ಕಮಲದ ವಿಚಾರ ವಿಸ್ತಾರ ಸಂಗ್ರಹಿಸಿ
ಗಮನಾಗಮನ ಸಂಧಿಕಾಲವೆ ಗ್ರಹಿಸಿ
ಅಮರೇಶಾದಿ ವಾಸ ಏಕಾದಶ ಭಾಗ
ದಮೆ ಶಮೆ ಗುಣದಿಂದ ದ್ವಾದಶ ಸಂಕೇತ
ಅಮಲಪ್ರಭಾ ಮೂರ್ತಿ ಹೃಷಿಕೇಶಗೆ ಮುಂಚೆ
ನಮಿಸಿ ನಿರ್ಮಳ ಮನದವನಾಗು ಸರ್ವದಾ -
ತುಮದೊಳು ಉಳದೇಂದ್ರಿಯಂಗಳು ಕೂಡಿಸಿ
ಅಮಮ ಪ್ರಾಣವ ಒಂದೊಂದು ತತ್ವದಲಿಟ್ಟು
ರಮೆ ರಮೆಯರಸ ಮಿಕ್ಕಾದ ತತ್ವೇಶರ
ರಮಣೀಯ ಮತಿಯಿಂದ ಮೇಲು ಮೇಲು ವ್ಯು -
ತ್ಕ್ರಮದಲ್ಲಿ ತಾಹದು ಮೂವತ್ತಾರು ಸಾರಿ
ಉಮೆಯರಸನ್ನ ಮಧ್ಯದಲಾಗ ಬಲಗೊಂಡು
ಚಮತ್ಚೃತಿಯಿಂದ ಜಿಹ್ವಾಗ್ರದಲಿ ನಿಲಿಸಿ
ತಮೊ ರಜ ಭಾಗ ವಿಶಿಷ್ಟ ಗುಣ ಬಿಟ್ಟು
ಸಮಬುದ್ಧಿಯಿಂದ ಮಂತ್ರಗಳ ಮಾಡುವದು
ತಿಮಿರದೋಷ ಭಾನು ವಿಜಯವಿಟ್ಠಲನಂಘ್ರಿ
ಕಮಲವ ಧ್ಯಾನಿಸು ಸರ್ವಾತ್ಮಕನೆಂದು ॥ 4 ॥
ಆದಿತಾಳ
ಜಪವ ಜಪಿಸು ಬಹು ಜತನ ಜಿತೇಂದ್ರಿಯದಿಂದ
ಸ್ವಪನ ಜಾಗ್ರತದಲ್ಲಿ ದೇಹ ದಂಡಿಸು ತಪದಿ
ತಪಿಸು ತ್ರಯ ತಾಪ ಧರಿಸಿ ಭೇದವಭೇದ ಜ್ಞಾನ
ಗುಪಿತವಾಗಿರಲಿ ಗುರುಗಳ ಉಪದೇಶದಿಂದ
ಜಪಮಣಿ ಖಂಡಾಖಂಡ ತುಲಸಿ ಪದುಮ ಮಿಗೆ
ಸುಪವಿತ್ರ ಹಸ್ತದಲ್ಲಿ ಪಿಡಿದು ಎಣಿಸಬೇಕು
ಕುಪಿತನಾಗದೆ ಮಣಿಸಂಯೋಗ ಮಂತ್ರೋಚ್ಚಾರ
ವಿಪರೀತವಾಗಗೊಡದೆ ನ್ಯಾಸಾವಿಷ್ಟ ಪೂರ್ವಕ
ಅಫಲಾಕಾಂಕ್ಷಿತದಲ್ಲಿ ರಚಿಸು ಇದೆ ಸೂಚಿಸು
ಉಪಶ್ರುತಿ ಪೇಳುವೆನು ಸಮುದ್ರ ದೇವಾಲಯ
ತಪಸಿ ಪರ್ವತ ನದೀ ವಿಪ್ರಸಮುದಾಯ
ನೃಪತಿ ಆಚಾರ್ಯ ಪುಣ್ಯಕ್ಷೇತ್ರ ಗೋಸಂಕುಲ
ಉಪದೇಶ ಗುರುವು ಶ್ರವಣ ಯಾಗ ವೈವಾಹ ಮಂ -
ಟಪ ದೀಪಾ ಉತ್ತುಮ ಸಂಗೀತ ಜ್ಞಾನಿ ಚಂದ್ರಾ
ತಪನ ಮಾತೃಪಿತೃ ಭ್ರಾತ್ರಾದಿ ಹಿರಿಯಾರು
ತಪನೀಯಾದಿ ವಿಭೂತಿ ವಸ್ತದ ಅಭಿಮುಖವಾಗಿ
ಜಪವ ಮಾಡೆಲೊ ಬಹು ಮರಿಯಾದಿ ಇಂದಲಿ
ತೃಪುತರಾಗುವರಿವರು ಅನೇಕ ಬಗೆಯಿಂದಾ
ಉಪಚಾರವಲ್ಲ ಕಾಣೋ ಸರ್ವಕ್ಕು ಗುರುಗಳ
ಉಪಸಮ್ಯದಲ್ಲಿ ಮುಖ್ಯ ಭೀತಸ್ಥನಾಗಿ ಬಾಳು
ಜಪ ನೂರಾರು ಸಾವಿರ ಲಕ್ಷಾಯುತ ಕೋಟಿ ಆ -
ತಪದೊಳು ಮಾಡಲ್ಯಾಕೆ ಬೆರಳು ಮಣಿಸಿ ಬಳಲಿ
ದಿಪುತ ಮನದಲ್ಲಿ ಹಿಂದೆ ನುಡಿದಂತೆ ಸ್ಮರಿಸಿ ವಂದೆ
ಜಪವ ಮಾಡಿದರೆ ಮುಕ್ತಿ ಕರತಳದಲ್ಲಿ
ಸಪರಿವಾರ ಸಹಿತಾ ಪೋಗುವರು ಸಾಧನದಿಂದ
ಚಪಲಪ್ರಕಾಶ ನಮ್ಮ ವಿಜಯವಿಟ್ಠಲ ಒಲಿದು
ಅಪರೋಕ್ಷ ಮಾಡಿಕೊಡುವ ಒಂದೊಂದು ಮಂತ್ರಕ್ಕೆ ॥ 5 ॥
ಜತೆ
ಒಂದೊಂದು ಮಣಿಯಲ್ಲಿ ಒಂದೊಂದು ಭಗವದ್ರೂಪ
ಪೊಂದಿವೆ ಜಪಿಸೋದು ವಿಜಯವಿಟ್ಠಲನ ಮಂತ್ರಾ ॥
ತ್ರಿವಿಡಿತಾಳದಲ್ಲಿ ಮಂತ್ರದೋಷಗಳ ವಿಚಾರ ಪ್ರಮಾಣಗ್ರಂಥ - " ವಿಷ್ಣುತಿಲಕ ತಂತ್ರ "
ಶ್ಲೋಕ -
ಮೂಕಃ ಸುಪ್ತೋ ಮೃತೊ ನಗ್ನೋ ವೀರ್ಯಹೀನ ವೃಥಾಹಿತಃ ।
ಭುಜಂಗ ಕೀಲಿತಂ ಶೂನ್ಯೊ ದಶದೋಷಾ ಪ್ರಕೀರ್ತಿತಾ ॥