ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ
ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ.
ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು
ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು
ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ
ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು 1
ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ
ಜೂಟ ಸಖನಂಘ್ರಿಗೆ ಪಾರ್ಥನು ಈ ಬಯಲಾದನು
ಸೂಟಿಯೆನಗಾಯಿತು
ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ
ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು 2
ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ
ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು
ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ
ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು 3
ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ
ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ
ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ
ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ 4
ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ-
ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ
ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ-
ವನವಾಯಿತು ಎಲ್ಲಾ ಕುಲಕೋಟಿಯು 5
****