Audio by Mrs. Nandini Sripad
ಮಧುರೆ (ಅಳಗಿರಿ) ಮಹಾತ್ಮೆ ಸುಳಾದಿ
ರಾಗ ಹಂಸಾನಂದಿ
ಧ್ರುವತಾಳ
ವೃಷಭಾಚಲ ನಿವಾಸಾ ಋಷಿ ಜನ ಮನೋಲ್ಹಾಸಾ
ಪಶುಪತಿ ಪಾಲಕ ರಕ್ಕಸ ಮಸ್ತಕ ಶೂಲಾ
ನಿಶಕರವದನ ರಂಜಿಸುವ ಸಿರಿ ಸದನ
ಅಸಮ ಪ್ರತಾಪ ಸಂತಾಮ ಸಜ್ಞಾನಾ ದಿನಪಾ
ನಿಶಿಚರ ದಾಹಕ ನಾಗಶಯನಾ ವಾಹನ ಗಹನ
ವೃಷಭಾಸುರ ಮರ್ದನಾ ಶೋಭಿಸುವ ಗಿರಿವರ್ಧನ
ಬಿಸಿಜ ದಳನಯನ ಕುಸುಮೇಶಾನಯ್ಯನೆ
ವಸುಧಿಗಧಿಕ ಅಳಿಗಿರಿವಾಸ ತಿರ್ಮಲೇಶಾ
ಪೆಸರಾದ ವಿಜಯವಿಠಲ ಸೌಂದರ್ಯನೆ ನ -
ಮಿಸುವೆ ನಿತ್ಯಾ ಪಾಲಿಸು ಎನ್ನಾ ಒಡಿಯಾ ॥ 1 ॥
ಮಟ್ಟತಾಳ
ಮುನಿ ಮಂಡುಕ ನೆಂಬುವನು ಬಲು ಹರುಷದಲಿ
ವನಜಾಕ್ಷನ ಪಾದಾವನು ಕಾಂಬುವೆನೆಂದೂ
ಅನುನಯದಲಿ ಸಾಧನ ಕೇವಲವಾಗಿ
ಮನ ಮಾಡಿದನು ಪ್ರಾವಣ ಗತಿಯಿಂದಲಿ
ಘನ ವೃಷಭಾದ್ರಿ ಸಾಧನ ಅಳಗಿರಿ ತಿಮ್ಮಾ
ಎನ್ನ ಮನದೊಡಿಯಾ ಶ್ರೀವಿಜಯವಿಠಲರೇಯಾ
ನೆನೆವರ ಮಾತನು ಸಲ್ಲಿಸುವನೂ ॥ 2 ॥
ರೂಪಕತಾಳ
ಮುನಿ ಇಲ್ಲಿ ಬಹುಕಾಲಾ ಕುಳಿತು ತಪವನೆಸಗೆ
ವನಜನಾಭನು ಬಂದನು ಮೆಚ್ಚಿ ಕರುಣದಲ್ಲಿ
ಮಣಿಮಯವಾದ ಭೂಷಣವಾಸಾದಿಂದ ದರು -
ಶನವಿತ್ತ ತ್ರಿರೂಪವನು ತೋರಿಸುತ್ತಲಿ
ದನುಜಾರಿ ಅಳಗಿರಿ ತಿಮ್ಮ ವಿಜಯವಿಠಲ
ಮಿನುಗುವ ಮಧುರಿ ಪಟ್ಟಣ ನಿಲಯ ದೇವ ॥ 3 ॥
ಝಂಪೆತಾಳ
ಇತ್ತಲೀಪರಿ ಇರಲಿತ್ತ ಬೊಮ್ಮನು ತನ್ನ
ತೆತ್ತಿಗರ ಕೂಡಾಲಿತ್ತ ವಾಲಗ ಒಂದು
ಸುತ್ತಿ ಬರುತಾ ಮುನಿಪೋತ್ತುಮಾ ನಾರದನೂ
ವಿಸ್ತರಿಸಿದನು ಈ ಪೃಥ್ವಿ ಮಹಿಮೇ
ಉತ್ತುಮಾಂಗಾ ತೂಗಿ ತೆತ್ತೀಸ ಕೋಟಿ ದೇ -
ವತಿಗಳ ಕೂಡ ನಲಿಯುತ್ತಾ ಬಂದೂ
ಹತ್ತು ಮಡಿ ಯಂದದಲಿ ಕೃತ್ತು ಮಾಡಿದನು ನ -
ಗುತ್ತಲಿ ವೃಷಭಪರ್ವತದೆಡಿಯಾ
ತೊತ್ತಿನಾ ಮಗಗೊಲಿದ ವಿಜಯವಿಠಲ ದೇ -
ವೋತ್ತಮ ಅಳಗಿರಿಯಾ ಅತ್ಯಂತ ಮಹಿಮಾ ॥ 4 ॥
ತ್ರಿವಿಡಿತಾಳ
ಮೊದಲು ಶ್ರೀಹರಿ ದಾನಾ ವದಗೀ ಬೇಡಿದಂದೂ
ತುದಿನಖಾ ಪೋಗಿ ಸೋಕಿದಾ ಸಮಯದಲ್ಲಿ
ಮುದದಿಂದ ಬಹಿರಾವರುಣುದಕಾ ಬರಲು ಅಜನೂ
ಪದವ ತೊಳಿಯೆ ನೂಪುರದಾ ಒಳಗೆ ಜಲಾನಿಲ್ಲೇ
ಸದರವಿಲ್ಲಾದಲೆ ಉಳಿದ ಜಲವಿತ್ತ ಪ -
ರಿದುದ ಶಿವ ನಿರ್ಮಾಲ್ಯಾ ನದಿ ಜಾನ್ಹವಿ ಎನಿಸೀತೀ
ಉದುಕಾವೆನಿಸಾಲಿಲ್ಲಾ ಸದಮಲವೆನ್ನಿರೋ
ಪದುಮಾ ಸಂಭವನಾ ಯಾಗದಾ ಉಪಚಾರಕ್ಕೆ
ವದಗೀದಾಳಿಂದಿ ಶೈಲದ ತಪ್ಪಾಲಲ್ಲಿಗೇ
ಪದುಮನಾಭನು ಕರುಣಾದಲಿ ಇಲ್ಲಿಗೆ ಬರಲೂ
ಚದುರಾ ಅಳಿಗಿರಿರಾಯಾ ವಿಜಯವಿಠಲರೇಯಾ
ಮಧುರಾಪುರದ ಸೌಂದರ್ಯದ ಪುರುಷ ಪುಣ್ಯಾತ್ಮಾ ॥ 5 ॥
ಅಟ್ಟತಾಳ
ಕೃತು ಮಾಲಾವಾದಾಳು ಪಿತಾಮಹಾ ನೋಡಲು
ಅತಿಶಯದಲಿ ವೇಗವತಿ ಎನಿಸಿಕೊಂಡು
ಕ್ಷಿತಿಯೊಳೊಬ್ಬಾ ಮಂದಮತಿ ಬಂದು ಸೇವಿಸೆ
ಚತುರಾರ್ಥ ಸುಲಭಾ ಭಕುತಿಯಿಂದ ಮಾಡಲು
ಪ್ರತಿಗಾಣೆಯಲ್ಲಿ ಭರತಖಂಡದೊಳಿದಿಕ್ಕೆ
ಶ್ರುತಿ ರಾಮಾಯಣಾ ಭಾರತ ಪಂಚರಾತ್ರಾಗಮಾ
ತತಿಯೊಳರಿದಾರು ಮತಿವಂತಾರಿಗರಿದೂ
ಗತಿ ಪ್ರದಾಯಕ ಸುರತತಿಪಾಲಕ ದಿತಿ -
ಸುತ ವೃಷಭಾಸುರಹತ ಅಳಗಿರಿವಾಸ
ಪತಿತಪಾವನ ಸಿರಿ ವಿಜಯವಿಠಲರೇಯಾ
ಸತತ ಸೌಂದರ್ಯ ಮೂರುತಿ ಎನಿಸುವ ನಾಮಾ ॥ 6 ॥
ಆದಿತಾಳ
ವಟ ಬೀಜಾದಂತೆ ಪುಣ್ಯ ಘಟಿಸೋದು ಇಲ್ಲಿ ಒಂದು
ಘಟಿಕಾವಿದ್ದರೆ ಇಂದು ಸಟಿಯಲ್ಲಾ ಶುದ್ಧಾವೆನ್ನಿ
ನಿಟಿಲನೇತ್ರನು ಸುರಕಟಕ ಹರುಷಾದಲ್ಲಿ
ನಟಣೆ ಮಾಡುತ್ತ ಸ್ತವ ಪಠಿಸುತ್ತಾ ಪಾಡುವರೂ
ಪಟುತರವಾಗಿ ಜ್ಞಾನ ಕುಟಿಲ ರಹಿತದಿಂದ
ಧಿಟ್ಟ ಅಳಗಿರಿ ಮಧುರಾ ಪುಟಭೇದನಿ ನಿವಾಸ
ವಟಪತ್ರಶಾಯಿ ವಿಜಯವಿಠಲನ್ನಾ ನಾಮರಸಾ
ತ್ರಿಟಿಯಾದರೂ ಬಿಡದೆ ಗುಟುಗುಟು ಸವಿದುಂಡು
ಕಠಿಣ ಪದವೀಯ ಸಂಕಟ ಒದದು ಸುಖಿಯಾಗೀ ॥ 7 ॥
ಜತೆ
ಮೂರು ಯೋಜನಾ ಕ್ಷೇತ್ರಯಾತ್ರಿ ಮುದದಿಂದ ಮಾಡುವದು
ಚೋರಾರ ಗುರು ವಿಜಯವಿಠಲಾ ತಿರ್ಮಲ ಒಲಿವಾ ॥
********