ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ತಪ್ಪಾರಿಸುವರೆ ನೀ ನಮ್ಮ ಸುಮ್ಮನುಂಡಾಡುವ ಬಾಲಕ ನಿಮ್ಮ ಅಮ್ಮ ಅಪ್ಪನೆಂದಾಡುದೆ ನಾ ತಮ್ಮ ಕಂ ಕಿಮೆಂದಾಡಕರಿಯೆ ನಾವಮ್ಮ 1
ಓದಿ ತಿಳಿಯಲರಿಯೆ ಶಾಸ್ತ್ರವೇದ ಭೇದಿಸಲರಿಯೆ ನಾ ನಿಮ್ಮ ಬೋಧ ಹಾದಿ ತಿಳಿಯುದೆ ಬಲು ತಾ ಅಗಾಧ ಇದೆ ಪಾಲಿಸಬೇಕಯ್ಯ ಸುಪ್ರಸಾದ2
ಭಕ್ತಿ ಮಾಡಲರಿಯೆ ನಿಮ್ಮ ದೃಢ ಯುಕ್ತಿ ತಿಳಿಯಲರಿಯದೆ ನಾ ಮೂಢ ಶಕ್ತಿ ಸಾಮಥ್ರ್ಯನ್ನೊಳು ನೋಡಬ್ಯಾಡ ಯುಕ್ತಾಯುಕ್ತ ನೋಡದಿರು ಎನ್ನ ಕೂಡ3
ಪತಿತಪಾವನನೆಂಬ ನಿನ್ನ ಬಿರುದು ಎತ್ತ ಓಡಿಹೋಗಬಲ್ಲದದು ಚಿತ್ತ ನೆಲೆಗೊಂಡು ಬಂದು ನಿಮ್ಮ ಬೆರೆದು ಮತ್ತ ಒರೆದು ನೋಡುವದಿದೆ ಅರೆದು 4
ಶರಣ ಹೊಕ್ಕ ಮ್ಯಾಲೆಲ್ಲಿಹುದೈಯ ಮರಣ ಚರಣಕಮಲಕ್ಕೊಪ್ಪಿಸಿಹೆ ನಾ ಹರುಣ ಅರಿತು ಮಾಡುವ ನಿಮ್ಮ ದಯ ಕರುಣ ತರಳ ಮಹಿಪತಿ ನಿಮ್ಮಣುಗ ಪೂರ್ಣ 5
***