ನಿತ್ಯಾನಮಿಪೆ ನಿಮ್ಮುತ್ತಮ ಪದಕೆ ಶ್ರೀ
ಸತ್ಯಾಬೋಧ ಗುರುವೆ ಪ.
ಚಿತ್ತದಲ್ಲಿ ಶ್ರೀ ವತ್ಸಾಂಕಿತನ ಪದ
ನಿತ್ಯಾ ಸ್ಮರಿಪ ಮುನಿಯೆ ಅ.ಪ.
ಚಿದಾತ್ಮವಾದ ನಿಮ್ಮುದಾರ ಕೀರ್ತಿಗೆ
ಸದಾ ಉದಯವಹುದು
ಇದನರಿಯದ ಅಧಮರಿಂದಲಿ
ಒದಗುವುದೆ ಕುಂದು
ವಿಧವಿಧಾನ್ನವ ಬುಧರಿಗಿತ್ತಂಥ
ನಿಧಾನಿ ನೀನೆಂದು
ಇದೆ ವಾರ್ತೆ ಕೇಳೆದೂರಿಗೆ ಬಂ
ದದಾನರಿತೆನಿಂದು 1
ವೃಂದಾವನಸ್ಥನೆ ಮಂದರಿಗರಿದೆ ನಿ
ಮ್ಮಂದಿನ ಕೀರುತಿಯು
ಒಂದನರಿಯದ ಮಂದಮತಿಯು ನಾ
ಬಂದೆ ನಿಮ್ಮ ಬಳಿಯು
ಕುಂದುಗಳನೆಣಿಸದೆ ಸಂದೇಹ ಮಾಡದೆ
ಇಂದು ಪೊರೆದು ಆಯು
ಮುಂದೆ ಕೊಟ್ಟು ಗೋಪಿಕಂದನ ಪಾದ
ದ್ವಂದ ತೋರಿ ಕಾಯೋ 2
ಕೃಪಾಳು ನಿಮ್ಮಂಥ ತಪಸಿಗಳು ಉಂಟೆ
ತಪಾನ ನಿಶಿ ತೋರ್ದೆ
ಶ್ರೀ ಪತಿ ರಾಮನ ಆಪಾದಮಸ್ತಕ
ರೂಪ ನೋಡಿ ದಣಿದೆ
ಭೂಪತಿಯಿಂದಲಿ ಈ ಪರಿಭವನವ
ನೀ ಪ್ರೀತಿಯಿಂ ಪಡೆದೆ
ಗೋಪಾಲಕೃಷ್ಣವಿಠ್ಠಲನ ಧ್ಯಾನಿಸುತ ಸ್ವ
ರೂಪಾನಂದ ಪಡೆದೆ 3
****