Showing posts with label ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ gopalakrishna vittala. Show all posts
Showing posts with label ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ gopalakrishna vittala. Show all posts

Monday, 2 August 2021

ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ankita gopalakrishna vittala

ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ಪ.


ಶ್ರೇಷ್ಠ ಗುರುಗಳ ಆಜ್ಞೆಯಿಂದ ಮನ

ಮುಟ್ಟಿ ನಡೆಸುವ ದಾಸವೃತ್ತಿಯು ಅ.ಪ.


ವಂದನೆ ನಿಂದ್ಯಗಳನ್ನು ಗಮನಿಸದೆ

ಇಂದಿರೇಶನ ಪದಕರ್ಪಿಸುತ

ಮಂದಭಾಗ್ಯರ ಮಾತನೆ ಗಣಿಸದೆ

ಬಂದ ಭಯಗಳ ದೂರೋಡಿಸುತಲಿ 1

ಆಶಪಾಶಗಳ ನಾಶಗೈಸಿ ಮನ

ಕ್ಲೇಶಪಡದೆ ಸಂತೋಷಿಸುತ

ವಾಸುದೇವ ಆನಂದಪೂರ್ಣ ಸ

ರ್ವೇಶ ನಿನಗೆ ನಾ ದಾಸನೆಂತೆಂಬುದು 2

ಗೆಜ್ಜೆ ಕಾಲಿಗೆ ಕಟ್ಟಿ ತಾಳವ

ಲಜ್ಜೆಯ ತೊರೆದು ಬಾರಿಸುತ

ಮೂರ್ಜಗದೊಡೆಯ ಜಗಜ್ಜನ್ಮಾಧಿಕಾರಣನೆಂದು

ಘರ್ಜಿಸುತಲಿ ಸಂಚಾರಮಾಳ್ಪುದೆ 3

ಇಂದು ನಾಳೆಗೆಂಬೋ ಮಂದಬುದ್ಧಿಯ ಬಿಟ್ಟು

ಬಂದದರಿಂದಾನಂದಿಸುತ

ತಂದೆ ಮುದ್ದುಮೋಹನದಾಸರ ಪದ

ದ್ವಂದ್ವವ ಭಜಿಸುತ ಮುಂದೆ ಸಾಗುವುದು 4

ಗುರುಗಳ ಕರುಣದಿ ಅಂಕಿತ ಪಡೆಯಲು

ದೊರೆವುದು ದಾಸತ್ವದ ಸಿದ್ಧಿ

ಅರಿಯದೆ ವೇಷವ ಧರಿಸಿ ಮೆರೆದರೆ

ಸಿರಿವರ ಮೆಚ್ಚನು ಗುರುವು ಒಲಿಯನು 5

ಉಚಿತ ಧರ್ಮಕರ್ಮಗಳನೆ ಮಾಡುತ

ಖಚಿತ e್ಞÁನ ಮನದಲಿ ತಿಳಿದು

ವಚನದಿ ಹರಿನಾಮಗಳನೆ ನುಡಿಯುತ

ಶುಚಿರ್ಭೂತರಾಗಿ ಆನಂದಪಡುವುದು 6

ದುಷ್ಟರ ತೊರೆದು ಶಿಷ್ಟರೊಳಾಡುತ

ಶ್ರೇಷ್ಠವಾದ ದಾಸತ್ವದಲಿ

ಬಿಟ್ಟು ಪ್ರಪಂಚವ ಸೃಷ್ಟೀಶ ಗೋಪಾಲ

ಕೃಷ್ಣವಿಠಲನು ಶ್ರೇಷ್ಠದಿ ಭಜಿಪುದು 7

****