ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಹಬ್ಬವ ಮಾಡಬನ್ನಿರೆ ಮನದ
ಭ್ರಾಂತಿಗಳನೆಲ್ಲ ಕಳೆಯ ಬನ್ನಿರೆ
ಕಾಂತೀಯರೆಲ್ಲ ಸೇರಿ ಮಾಡಬನ್ನಿರೆ
ಶ್ರೀಕಾಂತನ ಒಲುಮೆ ಪಡೆಯಬನ್ನಿರೆ||ಪಲ್ಲ||
ಬೆಳಗು ಜಾವದಲಿ ಏಳುತ್ತಲಿ
ನಳಿನನಾಭನ ಧ್ಯಾನ ಮಾಡುತ್ತಲಿ
ಎಳ್ಳು ಹಚ್ಚಿ ಸ್ನಾನ ಮಾಡುತ್ತಲಿ
ನಲ್ಲೆಯರೆಲ್ಲ ನಲಿದಾಡುತ್ತಲಿ||೧||
ಅಂಗಳವನ್ನೆ ಸ್ವಚ್ಛ ಮಾಡುತ್ತಲಿ
ರಂಗವಾಲಿಗಳ್ಹಾಕಿ ನೋಡುತ್ತಲಿ
ತಳಿರು ತೋರಣವನ್ನೆ ಕಟ್ಟುತ್ತಲಿ
ಬಳಲದೆ ಕಾರ್ಯವ ಮಾಡುತ್ತಲಿ||೨||
ಎಳ್ಳಿನ ದೀಪಗಳ ಹಚ್ಚುತ್ತಲಿ
ಎಳ್ಳಿನ ದಾನವ ನೀಡುತ್ತಲಿ
ಎಳ್ಳಿನ ಭಕ್ಷಗಳ ಮಾಡುತ್ತಲಿ
ಎಳ್ಳು ಬೆಲ್ಲವ ಸೇರ್ಸಿ ಹಂಚುತ್ತಲಿ||೩||
ಎಳ್ಳಿನ ಕಹಿಯನ್ನ ಬಿಡಿರೆನ್ನುತ
ಬೆಲ್ಲದ ಸವಿಯನ್ನೆ ಸವಿರೆನ್ನುತ
ಉಲ್ಲಾಸದಿಂದ ಎಲ್ಲ ಜನರು ಸೇರುತ್ತ
ಮಲ್ಲ ಮರ್ಧನ ಹರಿಯ ನೆನೆಯುತ್ತ||೪||
ಸಂಕ್ರಾಂತಿ ಹಬ್ಬದ ಸಂಭ್ರಮವು
ದಕ್ಷಿಣಾಯನ ಕಾರ್ಯ ಮುಗಿಯಿತೆಂದು
ಸ್ನಾನ ಜಪ ತಪಗಳ ಮಾಡುತ್ತಲಿ
ಜ್ಞಾನಿಗಳೊಡನೆ ಸೇರುತ್ತಲಿ||೫||
ಉತ್ತರಾಯಣ ಮಹ ಶ್ರೇಷ್ಠವೆಂದು
ಮಂಗಳ ಕಾರ್ಯಗಳಗೆ ಯೋಗ್ಯವೆಂದು
ಕಾದರು ಭೀಷ್ಮಾಚಾರ್ಯರಂದು
ಮೋದದಿ ಹರಿಪಾದ ಸೇರಲೆಂದು||೬||
ಹೊಸ ಧಾನ್ಯಗಳನೆ ತಂದು ಮಾಡುತ್ತ
ಹೊಸ ಬಟ್ಟೆಗಳನೆ ಹಾಕಿ ನಲಿಯುತ್ತ
ಹಣ್ಣು ಕಬ್ಬು ಬೋರೆ ಫಲವ ತಂದು
ಸಣ್ಣ ಮಕ್ಕಳಿಗೆ ಹಣ್ಣ ನೆರೆಯುತ್ತ||೭||
ಬದನಿ ಕಬ್ಬು ಬಾಳೆಫಲವ ತಂದು
ಮುದದಿ ಬೀರಿಸಿ ಬರಬೇಕೆಂದು
ಸದಮಲ ಹೃದಯದಿ ಎಳ್ಳು ಬೆಲ್ಲ
ಮುದದಿಂದ ಹಂಚಿದರು ನಾರೇರೆಲ್ಲ||೮||
ಭೋಗ ಭಾಗ್ಯಗಳ ನೀಡೆನ್ನುತ
ಭೋಗಿಶಯನನಭಜೀಸುತ್ತ
ನಾಗಶಯನನ ಧ್ಯಾನ ಮಾಡುತ್ತ
ಮಧ್ವೇಶಕೃಷ್ಣನ ನಿತ್ಯನೆನೆಯುತ್ತ||೯||
***