ಶ್ರೀವಿಜಯದಾಸಾರ್ಯ ವಿರಚಿತ ಪಂಚ ಮಹಾಭೂತಗಳ ಸುಳಾದಿ
ರಾಗ ಷಣ್ಮುಖಪ್ರಿಯ
ಧ್ರುವತಾಳ
ಎತ್ತಣ ಭೂತಂಗಳೊ ಎಲ್ಲಿ ಪೊಕ್ಕರೆ ಬಿಡವು
ಹತ್ತಿಕೊಂಡಿಪ್ಪವು ನಾನಾ ಜನುಮ
ಸುತ್ತಿದ ಕಾಲಕ್ಕು ತೊಲಗದೆ ವ್ಯಾಪ್ತವಾಗಿ
ಅತ್ತಲಿತ್ತ ಪೋಗದೆ ಇರುತಿಪ್ಪವು
ಮೃತ್ತಿಕೆ ನೀರು ಬೆಳಕು ಘಾಳಿ ಬಯಲು ಎಂಬೊ
ಮತ್ತೆ ನಾಮಗಳಿದಕೆ ಸರ್ವಕಾಲ
ಉತ್ತರೋತ್ತರದಿಂದ ಗುಣಗಳು ಅಧಿಕವುಂಟು
ಜತ್ತಾಗಿಪ್ಪವು ಒಂದನ್ನೊಂದು ಬಿಡದೆ
ಹೊತ್ತು ಹೊತ್ತಿಗೆ ಲೋಕ ಪೇಳುವದಾಡುವದು
ಬಿತ್ತುವದು ಬೆಳೆಯುವದು ಚರಿಸುವದು
ತುತ್ತು ಮಿಕ್ಕಾದ ಚೇಷ್ಟೆ ಈ ಭೂತಗಳಿಂದ
ನಿತ್ಯದಲಿಯಾಗುವದು ಬೊಮ್ಮಾಂಡದಿ
ಮುತ್ತು ಮಾಣಿಕ ಹೇಮ ರಜತ ನಾನಾ ದ್ರವ್ಯ
ಮೊತ್ತಂಗಳಲ್ಲಿ ಈ ಭೂತಂಗಳು
ಸುತ್ತಿಕೊಂಡಿಪ್ಪವು ಬ್ರಹ್ಮಾಂಡ ಬಾಹಿರಕ್ಕೆ
ಹತ್ತು ಹತ್ತು ಮಡಿ ಆವರ್ಕದಿ
ಕಿತ್ತಿ ಬಿಸಾಟಲಳವೆ ರುದ್ರಾದ್ಯರಿಗಾದರು
ಬತ್ತದಯ್ಯಾ ಕರ್ಮವುಳ್ಳ ತನಕ
ಉತ್ತಮೋತ್ತಮರಿದಕೆ ಆಶ್ರಯವಾಗಿಪ್ಪರು
ಪ್ರತ್ಯೇಕ ಗುಣ ತಾರತಮ್ಯದಿಂದ
ಅತ್ಯಂತ ಜಗದ್ಭರಿತ ವಿಜಯವಿಟ್ಠಲರೇಯ
ಕರ್ತನಾಗಿ ಪಂಚಭೂತಗಳ ಪೊಂದಿಸಿಪ್ಪ ॥ 1 ॥
ಮಟ್ಟತಾಳ
ಈ ಭೂತಗಳಿಂದ ವೈಭವವಾಗುವದು
ಈ ಭೂತಗಳಿಂದ ವೈಭೋಗ ದೊರಕುವದು
ಈ ಭೂತಗಳಿಂದ ಶೋಭನ ಒದಗುವದು
ಈ ಭೂತಗಳಿಂದ ಲಾಭವೆ ಬರುವದು
ಈ ಭೂತಗಳಿಂದ ಸೌಭಾಗ್ಯ ತುಳುಕುವದು
ಈ ಭೂತಗಳಿಂದ ಭೂ ಭೂಷಣ ಕಾಣೊ
ಈ ಭೂತಗಳಿಂದ ಪ್ರಭಾವವೆನಿಸುವ
ಈ ಭೂತಗಳಘ ಪ್ರಭಾವ ಯಿರಲಾಗಿ
ಶೋಭಿಸುವರು ವಿಪ್ರ ಭೂಭುಜ ಮಿಕ್ಕವರು
ಈ ಭೂತಗಳಿಂದ ಸಾಭಿಮಾನವೆ ವುಂಟು
ಈ ಭೂತಗಳಿಂದ ಲೋಕಕ್ಕೆ ಕಾರಣ
ವಿಭೂತಿವಂತ ವಿಜಯವಿಟ್ಠಲರೇಯ
ಈ ಭೂತಗಳಿಂದ ಭೂಭಾರ ಇಳುಹುವ ॥ 2 ॥
ತ್ರಿವಿಡಿತಾಳ
ಒಬ್ಬಗೈದು ಭೂತ ಹೊಡೆದಿರಲು ಅವನ
ಉಬ್ಬಿಸಿ ಮತ್ತೈದು ಭೂತಂಗಳ
ಅಬ್ಬರದಲಿ ತಂದು ಕಟ್ಟಿಹಾಕಲು ನೆರದ
ನಿಬ್ಬಣದ ಭೂತಂಗಳು ಒಂದಾಗಿ
ಗಬ್ಬಿನಲಿ ಇದ್ದಾ ಕೆಲವು ಕಾಲಕೆ ಮದದ
ಗಬ್ಬು ತಾಕಲು ಹತ್ತು ಭೂತಾ ಕೂಡೆ
ಇಬ್ಬಗೆಯಿಂದಲಿ ಒಂದೊಂದು ಕೂಡಲು
ಹಬ್ಬಿತು ಭೂತದ ಬಳಗೆ ಸಂಖ್ಯ
ನಿಬ್ಬಿಡೀಕೃತವಾದ ಭೂತದೊಳಗೆ ಬಿದ್ದು
ಕಬ್ಬು ಬಾಯಲಿ ಕಚ್ಚೆ ಜಂಬೂಕನು
ಉಬ್ಬಸ ಬಟ್ಟಂತೆ ಭೂತಗಳ ಮೋಹ
ಇಬ್ಬಗೆಯನು ನೋಡಿ ಹೀನವಾದ
ಮಬ್ಬಿನ ಕಡೆಗೆ ಈ ಭೂತಗಳಟ್ಟದೆ
ಕಬ್ಬುಲ ದಾಟುವ ಉಪಾಯ ಹರಿ ಚರ -
ಣಾಬ್ಜ ಕೊಂಡಾಡಿ ಕೊಳುತಲಿಪ್ಪೆ
ಒಬ್ಬರ ಮನೆಯಲ್ಲಿ ದ್ರವ್ಯ ಕದ್ದವನಲ್ಲ
ಒಬ್ಬರ ವಸ್ತಿಕೆ ಪೋಗಲಿಲ್ಲಾ
ಉಬ್ಬೀಗ ಉತ್ತುಮರ ಸರಿಯೆಂದು ಹಿಗ್ಗುತ
ಬೊಬ್ಬಾಟದಲಿ ಪೇಳಿಕೊಳ್ಳಲಿಲ್ಲವೊ
ಕಬ್ಬುನಾಲಿಯ ಬಳಿಯ ಕುಳಿತು ಮಲಕೆ ಮೀರಿದ
ಅಬ್ಬು ಕುಡಿದವರ್ಯಾರೊ ಮಾನವರು
ಒಬ್ಬರ ಶ್ರೇಯಸ್ಸು ನೋಡಿ ಧರಿಸಲಾರದೆ
ಹಬ್ಬದಲ್ಲ್ಯುಪವಾಸ ಬಿದ್ದವನಂತೆ
ಹುಬ್ಬಿನ ಗೋಸುಗ ಕಣ್ಣು ತೆಗಸಿಕೊಂಡು
ದೊಬ್ಬಿಸಿ ಕೊಳುತಾ ತಾ ಬದುಕಿದಂತೆ
ಇಬ್ಬಳ ಮಣಿ ಕೊಟ್ಟು ತಿಪ್ಪಿ ಮೇಲಿನ ಬೂದಿ
ಬೊಬ್ಬುಳಿ ಗಿಡ ಕೊಯ್ದು ಹರಹಿದಂತೆ
ಒಬ್ಬರ ಪೋಗಲಾಡುವದೇನು ನೀರಿನ
ಬೊಬ್ಬುಳಿ ಸಮ ಕಾಣೊ ಈ ಶರೀರ
ಶಬ್ದದಿಂದಲಿ ಪುಣ್ಯ ಪೋಗುವದು ಪಾಪ -
ದಬ್ಧಿಯೊಳಗೆ ಮುಣುಗೆ ಪೊರಗಾಗರು
ಅಬ್ಧಿಶಯನ ನಮ್ಮ ವಿಜಯವಿಟ್ಠಲನಂಘ್ರಿ
ದಭ್ರವಾದರು ಭಜಿಸುವೆನೆಂಬುವ ಧನ್ಯ ॥ 3 ॥
ಅಟ್ಟತಾಳ
ಒಂದು ಪಿಶಾಚಿ ಹಿಡದವ ಮನಸಿಗೆ
ಬಂದಂತೆ ಒರಲುವ ಕಂಡಲ್ಲಿ ತಿರುಗುತ್ತ
ಒಂದಲ್ಲ ಎರಡಲ್ಲ ಐದು ಭೂತಂಗಳು
ಒಂದೇ ಪ್ರಕಾರವು ಅನಾದಿ ಕಾಲದ -
ಲಿಂದ ಹಿಡಿದರೆ ತಮ್ಮ ಪುಣ್ಯಕೆ ಏ -
ನಂದದೆ ಸರಿ ಪ್ರತಿಕೂಲರಾಗುವರು
ಬಾಂಧವ ತಾನಾಗಿ ಹರಿ ವಲಿದು ನಿತ್ಯ
ಗಂಧವಾದರು ತನ್ನ ಪರವಾದ ಸ್ತೋತ್ರಗ -
ಳಿಂದವಾಗಲಿ ಮತ್ತಾಗದೆ ಪೋಗಲಿ
ಸಂಧಿಸಿ ಕೊಂಡಿದ್ದು ಭೂತಗಳೊಳು ತಾನೆ
ನಿಂದು ಈ ಪರಿಯಿಂದ ನಡಿಸಿದ ಯಿದರಿಂದ
ನಂದವಾದರೆ ಯೇನು ಆಗದಿದ್ದರೆ ಯೇನು
ಮಂದಿಗವನ ಚಿಂತೆ ವ್ಯರ್ಥ ಹಚ್ಚಿಕೊಂಡು
ನಿಂದಿಸುವ ಬಗೆ ಅವಗತಿ ಮಾರ್ಗ
ಮುಂದೆ ಕಾಣದೆ ಪೋಗಿ ಮೂರ್ಖರಾಗುವರು
ಎಂದಿಗಾದರು ಯಮರಾಯನ ಸಭೆಯಲ್ಲಿ
ಬಂದು ಇವನ ಕರ್ಮಕ್ಕೆ ಅಡ್ಡಬಾಹನೆ
ತಿಂದನ್ನ ಮೈಗೆ ಹತ್ತದಂತೆ ಇಪ್ಪದು
ಛಂದವಲ್ಲವಿದು ತಿಳಿದ ಪ್ರಾಜ್ಞರಿಗೆ
ಕಂದುಗೊರಳಪಿತ ವಿಜಯವಿಟ್ಠಲರೇಯ
ಬಂಧನದೊಳಗಿರುವ ಭಕ್ತರಿಗಂದವನ್ನ ॥ 4 ॥
ಆದಿತಾಳ
ನಿರ್ದೋಷ ಹರಿಯೊಬ್ಬ ಆ ತರುವಾಯ ಸಿರಿ
ತದ್ದಾಸರು ಬ್ರಹ್ಮ ವಾಯು ಭಾರತಿ
ಶುದ್ಧರಿವರು ಕಾಣೊ ಉಳದಾದವರು ಮಹ -
ರುದ್ರಾದ್ಯರೆಲ್ಲರು ಸದ್ದೋಷಿಗಳು ಕಾಣೊ
ವಿದ್ಯಾವಂತರಹುದು ನಮಗಿಂದಧಿಕರು
ಪದ್ಮ ಬಾಂಧವರ ನೋಡೆ ಇವರು ನೀಚರಾದರು
ಬುದ್ಧಿಯ ಹಳಿಯರು ಹೊರ ಬೀಸಿ ಬಿಸಾಟರು
ಇದ್ದ ಮಾನವರಿನ್ನು ಸುಮ್ಮನಿರದೆ ನಿತ್ಯ
ಪೊದ್ಧಿದ ಸುಕೃತ ಪೋಗಲಾಡಿಕೊಂಬರು
ಸದ್ಯ ಸಂಸಾರವೆಂಬ ಮಾಯವಾದ ಪಾಶ -
ಬದ್ಧರಲ್ಲಿ ಶಿಲ್ಕಿ ಚರಿಸುವ ಮಾನವರು
ದುರ್ದೋಷಿಗಳು ಕಾಣೊ ಗುಣವ ಪೇಳುವದೇನು
ಕದ್ದು ತಂದವನಲ್ಲ ಅನ್ಯರ ಮನೆ ಸೇರಿ
ಸುದ್ಧಿಗಳಾಡಿಕೊಂಡು ಪೊಟ್ಟಿ ಪೊರೆದವನಲ್ಲಾ
ಸಿದ್ಧವಾದ ಮತ ಸಜ್ಜನರ ಸಮ್ಮತ
ಇದ್ದದೆ ಭೂತಂಗಳು ಪೇಳುತಲಿವೆ ಕೇಳು
ಕೃದ್ಧವ ತಾಳಿ ಜನರು ಪ್ರತಿಕೂಲವಾಗಿ ಅಪ -
ಶಬ್ಧ ನುಡಿದರೆ ಇತರ ಜನರಿಗೇನು
ಈದ್ಧರಿಯೊಳಗಿದ್ದ ಭೂತವಾದರು ಬಂದು
ಪೊದ್ದಿದರೇನಯ್ಯ ಹರಿನಾಮ ನುಡಿವದು
ಕ್ಷುದ್ರವೃತ್ತಿಯ ಪೋಗಿ ಕುಲಗೇಡಿಯಾಗಿದ್ದರೆ
ಒದ್ದು ಬಿಡಲಿಬೇಕು ಗುಣವಂತರಾದವರು
ಸಿದ್ಧ ಮಹಿಮ ನಮ್ಮ ವಿಜಯವಿಟ್ಠಲರೇಯ
ಭದ್ರ ಕೊಡುತಿಪ್ಪ ಭೂತವುಳ್ಳವನಿಗೆ ॥ 5 ॥
ಜತೆ
ಎಲ್ಲ ಭೂತಗಳೊಡೆಯ ವಿಜಯವಿಟ್ಠಲ ನೊಬ್ಬ
ಬಲ್ಲಿದ ಒಲಿದರೆ ಅನ್ಯಭೂತಗಳಿಲ್ಲ ॥
****