ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಕೃಷ್ಣ ಕಾರುಣ್ಯ ಮಹಿಮಾ ಸುಳಾದಿ
ರಾಗ ನಾದನಾಮಕ್ರಿಯಾ
ಧ್ರುವತಾಳ
ದೀನ ಮಾನವನಿಗೆ ನೀನೇನು ಕರುಣಿಸಿದರೂ
ತಾನಿಲ್ಲದೆ ಪೋಗಿ ಹೀನವಾಗುವದೂ
ಅನಂತ ದಿನಕೆ ನಿದಾನ ನಿಕ್ಷೇಪ ಸಂಪಾ -
ದನೆ ಸವಿಯದಂತೆ ಆನಂದವಾಗಿರಲು
ನಾನೋತ ಪುಣ್ಯದಿಂದಾಧೀನವಾಗಿರಸದೆ
ಮೇಣು ಪೋಗಾಡಿದೆನು ದೀನಬಂಧು
ಜೇನು ಕಾನನದೊಳು ತಾನಿಟ್ಟು ಉಣದಂತೆ
ನಾನುಂಡು ಸುಖಿಸದೆ ನಾನಿದ್ದೆ ಬರಿದೇ
ದಾನವಾಂತಕ ಎನ್ನ ಪ್ರಾಣ ವಿಜಯವಿಟ್ಠಲ
ಧೇನು ನೀನಿರಲು ಯೋಚನೆ ಎನಗಿಷ್ಟು ಮಾಡಸಲ್ಲಾ ॥ 1 ॥
ಮಟ್ಟತಾಳ
ನಾಯಿಗೆ ಶಾವಿಗೆ ಪರಮಾನ್ನದ ತುತ್ತು
ಬಾಯೊಳಗಿಡಲದು ಉಂಡು ಜೀವಿಸುವದೇ
ಶ್ರೀಯರಸೆ ನಿನ್ನ ಸೊಬಗಿನ ನಾಮದ
ಪೀಯೂಷವ ಕುಡಿಯೆ ದಕ್ಕುವದೇ ಎನಗೆ
ಅಯೋಗ್ಯನು ನಾನು ಅಪ್ರಬುದ್ಧನು ನಾನು
ಕಾಯದೊಳಗೆ ಭರಿತಾ ವಿಷ ಪುಂಜರ ನಾನು
ಪಯೋನಿಧಿ ಶಯನ ವಿಜಯವಿಟ್ಠಲ ಎನ್ನ
ಕಾಯುವ ಬಿರಿದುಳ್ಳ ಕಪಟನಾಟಕ ರಂಗಾ ॥ 2 ॥
ತ್ರಿವಿಡಿತಾಳ
ಉದ್ಧಾರ ಮಾಡುವಲ್ಲಿ ಜ್ಞಾನಿ ನೀನಿರಲಿಕ್ಕೆ
ಕುದ್ದು ವ್ಯಾಕುಲದಿಂದ ನಾನಳಲುವದ್ಯಾಕೆ
ಇದ್ದವಿಲ್ಲದವೆಲ್ಲಾ ನೀನೆ ಪೇಳಿಸಿ ಕೃತಿ
ಸಿದ್ಧವೆಂದೆನಿಸಿದೆ ಸಕಲರಿಂದಾ
ಪದ್ಮನಾಭನೆ ನಿನ್ನ ಕಾರುಣ್ಯವನು ಪಡೆದು
ಇದ್ದವನಿಗೆ ಇಲ್ಲ ಸುಲಭ ಕಾಣೋ
ಬಿದ್ದು ಹೋಹೆ ಪತ್ರದ ಮೇಲೆ ಬರೆದರೆ
ಪೊದ್ದಿರದೆ ಪೋಗೋವು ತನಗಲ್ಲದೇ
ಮುದ್ದು ಮೋಹನ ರಂಗ ವಿಜಯವಿಟ್ಠಲ ಕರು -
ಣಾಬ್ಧಿಯೆ ನೀನೊಲಿಯೆ ಯಾತರಾಲೋಚನೆ ॥ 3 ॥
ಅಟ್ಟತಾಳ
ಒಳಗೆ ಪ್ರೇರಕನಾಗಿ ಒಲಿಮೆಯಿಂದಲಿ ಕಾಲಾ
ಘಳಿಗಿರಗೊಡದಲೆ ತಿಳುಹಿ ಕೊಡುತ ಬಪ್ಪಾ
ಚಲುವ ನಿನ್ನಯ ಪಾದಜಲಜಕೆ ನಮೋ ನಮೋ
ಬಲು ದಯಾರಸ ಭಕ್ತಾವಳಿಗೆ ನೀನಲ್ಲಾದೇ
ಇಳೆಯೊಳು ಮತ್ತೊಂದು ನೆಲೆ ಬಲ್ಲ ದೇವತೆ -
ಗಳು ಎಲ್ಲಿ ಕಾಣೆನೋ ಕಲಕಾಲ ನೋಡಲು
ಬಲವಂತ ಜಗದಯ್ಯಾ ವಿಜಯವಿಟ್ಠಲರೇಯಾ
ಸುಳಿ ಸುಳಿದಾಡು ವಾಗ್ಗಳಿಯಾ ದೇವೇಶ ॥ 4 ॥
ಆದಿತಾಳ
ದಾತಾ ನೀನಾಗಿರೆ ಯಾತರಾಲೋಚನೆ
ಮಾತು ಮಾತಿಗೆ ಸಂಪ್ರೀತಿಯ ಬಡಿಸುತ
ಈ ತನುವ ಮನವ ಭೀತಿಗೊಳದ ತೆರದೀ
ತಾತ ನೀನಾಗಿರೆ ನೀ ತಡಿಯದಲೆ ಪೊರೆವುತಿರೆ ಎನಗೇನು
ಪಾತಕಹರ ನಮ್ಮ ವಿಜಯವಿಟ್ಠಲ ಎನಗೆ
ಮಾತಾಪಿತನು ನೀನೆ ಭೂತಳಾಧೀಶಾ ॥ 5 ॥
ಜತೆ
ಮುಗ್ಗಿದಲ್ಲಿಗೆ ಬಂದು ಒದಗುವ ಕರುಣಾಳು
ಕುಗ್ಗಗೊಡದೆ ಕಾಯೋ ವಿಜಯವಿಟ್ಠಲರೇಯಾ ॥
****