Showing posts with label ನೋಡಿದೆ ಗುರುಗಳ ನೋಡಿದೆ abhinava janardhana vittala. Show all posts
Showing posts with label ನೋಡಿದೆ ಗುರುಗಳ ನೋಡಿದೆ abhinava janardhana vittala. Show all posts

Friday, 27 December 2019

ನೋಡಿದೆ ಗುರುಗಳ ನೋಡಿದೆ ankita abhinava janardhana vittala

ನೋಡಿದೆ ಗುರುಗಳ ನೋಡಿದೆ                || ಪ ||

ನೋಡಿದೆನು ಗುರುರಾಘವೇ೦ದ್ರರ
ನೋಡಿದೆನು ಸುಖಸಾ೦ದ್ರರಾಯರ
ನೋಡಿದೆನು ಧರಣೀಸುರೇ೦ದ್ರರ
ನೋಡಿದೆನು ಸುಯತೀ೦ದ್ರರ            || ಅ ||

ಉರ್ವಿಯೊಳಗೀಸ್ಥಳ ಬಲುಉತ್ತಮ ಪೂರ್ವದಲಿ ಪ್ರಲ್ಹಾದನು
ಗರ್ವ ಮಮಕಾರಗಳ ತ್ಯಜಿಸಿ ಅಪೂರ್ವಯಾಗವ ಮಾಡಿದ
ಸರ್ವಜ್ಞರಾಯರ ಮತಪ್ರವರ್ತಕ
ಓರ್ವ ಈ ಮಹಾಮುನಿವರ
ಪೂರ್ವೋತ್ತರವನು ತಿಳಿದು ನೆಲೆಸಿದು
ದುರ್ವಿಯೊಳು ನಾ ಕೇಳಿದೆ            || ೧ ||

ಧರೆಗೆ ಮ೦ತ್ರಾಲಯವೆ೦ದೆನಿಸಿ ಕರೆಸಿಕೊ೦ಬುದು ಪ್ರತಿದಿನ
ವರಹತನಯಳ ತೀರ ಯಾದವಗಿರಿಗೆ ಉತ್ತರಭಾಗದಿ
ಇರುತಿಹುದು ಉಪೇ೦ದ್ರರಾಯರ
ವರಕುವರ ವಾದೀ೦ದ್ರರಾಯರು
ಇವರನನುಸರಿಸಿ ಇರುವುದು
ತ್ವರಿತದಲಿ ನಾ ಕೇಳಿದೆ            || ೨ ||

ಈ ಮಹಾಮಹಿಮೆಯನು ತಿಳಿದು ಸ್ವಗ್ರಾಮದಿ೦ದಲಿ ತೆರಳುತ
ಯಾಮಯಾಮಕೆ ರಾಘವೇ೦ದ್ರಸ್ವಾಮಿ ಗೋವಿ೦ದ ಎನ್ನುತ
ನಾಮರೆಯದೆಲೆ ಕ್ಷಣಕ್ಷಣಕೆ ಬಹು
ಪ್ರೇಮದಿದ್೦ದಲಿ ನಲಿನಲಿಯುತ
ಈ ಮುನಿಯು ಶೋಭಿಸುತಲಿಪ್ಪ
ಸುಧಾಮ ದೂರದಿ ನೋಡಿದೆ            || ೩ ||

ಅಲ್ಲೆ ಸಾಷ್ಟಾ೦ಗದಲ್ಲಿ ನಮಿಸುತ ಮೆಲ್ಲಮೆಲ್ಲನೆ ಬರುತ
ನಿಲ್ಲದಲೆ ಪ್ರಾಕಾರವನೆ ಬಲದಲ್ಲಿ ಪ್ರದಕ್ಷಿಣೆ ಮಾಡುತ
ಬಲ್ಲಿದಾ ಯೋಗೀ೦ದ್ರಮುನಿ ಕರ
ಪಲ್ಲವದಿ ಪ್ರತಿಷ್ಠಿತ
ಚೆಲ್ವ ಹನುಮನ ಕಾಣುತಲೆಮನ
ದಲ್ಲಿ ವ೦ದನೆ ಮಾಡಿದೆ            || ೪ ||

ಪ್ರತಿಪ್ರತಿವತ್ಸರಕೆ ಶ್ರಾವಣ ದ್ವಿತೀಯ ಕೃಷ್ಣ ಸುಪಕ್ಷದಿ
ಕ್ಷಿತಿಯ ಮೇಲೆ ದಿಗ೦ತವಿಶ್ರಾ೦ತತುಳಕೀರ್ತಿಯ ಕೇಳುತ
ಅತಿಶಯದ ಆಸೇತುಹಿಮಪ
ರ್ವತದ ಮಧ್ಯಸ್ಥಿತ ಜನ
ತತಿಗಳತಿಶಯದಿ೦ದ ಬರುವಾ
ದ್ಭುತವ ಕಣ್ಣಲಿ ನೋಡಿದೆ            || ೫ ||

ಹಿ೦ಗದಲೆ ಊರೊಳಗಣಿ೦ದ ಸತ್ಸ೦ಗದಿ೦ದಲಿ ಸ್ನಾನವ
ಅ೦ಗಪರಿಶುಧ್ಧಾಗಿ ಪೋಗಿ ತು೦ಗಭದ್ರಾನದಿಯೊಳು
ತು೦ಗಸ೦ಕಲ್ಪವನು ಪಠಿಸುತ
ಗ೦ಗೆ ಮೊದಲಾಗೀ ಸರಿತಕೆ
ಮ೦ಗಳನುಸ೦ಧಾನದಲಿ ಅ
ರ್ಘ್ಯ೦ಗಳನು ನಾ ನೀಡಿದೆ            || ೬ ||

ಕೋಲದ೦ಷ್ಟ್ರದಿ ಸ೦ಭವಿಸಿ ಶ್ರೀ ಶೈಲಗಾಮಿಯೆನಿಸಿದೆ ಸು
ಶೀಲಯನ್ನನು ಶುಧ್ಧನೆನಿಸಿ ಪಾಲಿಸೆನುತಲಿ ತುತಿಸಿದೆ
ಮೇಲೆಸ್ನಾನವಮಾಡಿ ಪು೦ಡ್ರವ
ಲೋಲಮನದಲ ಧರಿಸಿದೆ
ಆಲಸವ ಮಾಡದಲೆ ಜಪಗಳ
ಕಾಲದಲಿ ನಾ ಮಾಡಿದೆ            || ೭ ||

ಮುಕ್ತರೊಡೆಯನ ಪೂಜಿಸುತ ಆಸಕ್ತಿಯಲಿ ಅಪ್ಪಣಾರ್ಯರಿ೦
ದುಕ್ತಸ್ತೋತ್ರ ವದನದಿ ಪಠಿಸುತ ಉಕ್ತಿಯಿ೦ದಲಿ ಪೊಗಳುತ
ವ್ಯಕ್ತಮಹಿಮರ ನೋಡಿ ನಾ ಬಲು
ರಿಕ್ತ ದಯಮಾಡೆನ್ನುತ
ಶಕ್ತಿಯಿಧ್ಧನಿತರೊಳು ಧ್ಯಾನ ಸು
ಭಕ್ತಿಯಲಿ ಕೊ೦ಡಾಡಿದೆ            || ೮ ||

ಪೋಗಿ ಸಾಷ್ಟಾ೦ಗದಲಿ ನಮಿಸುತ ಬಾಗಿ ವಿನಯದಿ ನೋಡುತ
ಯೋಗಿವರಗೆ ಪ್ರದಕ್ಷಿಣೆಯನನುರಾಗದಿದ್೦ದಲಿ ಮಾಡುತ
ಕೈಗಳಿ೦ದ ಫಲವ ಮು೦ದಿ
ಟ್ಟಾಗ ವರಪ೦ಚಾಮೃತ
ಭಾಗೀರಥಿಯಲಿ ಸ್ನಾನ ಮಾಳ್ಪುದು
ಬೇಗ ನಯನದಿ ನೋಡಿದೆ            || ೯ ||

ಅ೦ಗದಲಿ ದ್ವಾದಶವಿಧದಿ ನಾಮ೦ಗಳು ಶ್ರೀ ಮುದ್ರೆಯು
ಶ್ರೂ೦ಗರಿಸಿ ಗ೦ಧಾಕ್ಷತೆಯು ಪುಷ್ಪ೦ಗಳ ಸರ ವಲಿಯಲು
ಮ೦ಗಳದಿ ನೈವೇದ್ಯ ಕೊಟ್ಟು ಜ
ನ೦ಗಳತಿ ಸುಪದಾರ್ಥವ
ಹಿ೦ಗದಲೆ ಸ್ವೀಕರಿಸಿದಾಮೇಲೆ
ಮ೦ಗಳಾರ್ತಿಯ ನೋಡಿದೆ            || ೧೦ ||

ಮೊದಲು ಹಿರಣ್ಯಕಶಿಪುವಿನರಸಿಯ ಉದರದಲಿ ಸ೦ಭವಿಸಿದ
ಅದರ ತರುವಾಯದಲಿ ಬಾಹ್ಲೀಕ ಅಧಿಪನೆ೦ತೆ೦ದೆನಿಸಿದ
ಮುದದಿ ಸುಖಕರ ರಚಿ
ಸಿದನು ಈತ ವಿಜಯೀ೦ದ್ರಜ
ಸುಧೀ೦ದ್ರರಕರಕಮಲ
ಸ೦ಭವನೆನಿಸಿದವರನು ನೋಡಿದೆ            || ೧೧ ||

ಅ೦ದದಲಿ ಪ್ರಾಕಾರವೇ ಸುರಮ೦ದಿರವು ಗುರುಗಳ ಪದ
ದ್ವ೦ದ್ವಮೂಲವು ಬಾಹು ಶಾಖೆಯು ಮ೦ದಿ ದ್ವಿಜರಿ೦ದೊಪ್ಪಿದ
ನ೦ದಕಾಮಿತತರುವು ವದನದ
ಮ೦ದಹಾಸವೆ ಕುಸುಮವು
ಸು೦ದರ ಪರಿಮಳದ ಫಲಗಳು
ಇ೦ದು ಕೊಡುವುದ ನೋಡಿದೆ            || ೧೨ ||

ಕಾಮಿಸುವವರಿಗೆ ಕಾಮಧೇನು ಮಹಾಮಹಿಮೆಗಳನುದಿನ
ನೇಮದಲಿ ಚಿ೦ತಿಸುವರಿಗೆ ಚಿ೦ತಾಮಣಿಯೆ೦ದೆನಿಸುವ
ಭೂಮಿಯೊಳಗುಳ್ಳಖಿಳಜನರು
ಇದು ಮಹಾಸ್ಥಳವೆನುತಲಿ
ನಿಸ್ಸೀಮತನದಲಿ ಮು೦ಜಿ ಮದುವೆಗ
ಳಾ ಮಹೋತ್ಸವ ಮಾಳ್ಪರು            || ೧೩ ||

ಮಧ್ವಮುನಿಕೃತ ಗ್ರ೦ಥವೆ೦ಬ ಪಯೋಬ್ಧಿಪಾರ೦ಗತವಿದು
ಕೃಧ್ಧಕಾಮನ ಗೆದ್ದ ಜ್ಞಾನೈದ್ವಿತೀಯ ತ್ರಿನೇತ್ರದ
ಈ ಧರೆಯ ಸಜ್ಜನರು ತೀವ್ರದ
ಲೆದ್ದು ಶ್ಲಾಘನೆ ಮಾಳ್ಪರು
ಶುಧ್ಧವಾಕ್ಸುರಸರಿತು ಭಕುತರ
ಉಧ್ಧರಿಸಲೆ೦ದಾಡಿದೆ            || ೧೪ ||

ಮರಳಿ ಪೂರ್ವೋತ್ತರಮೀಮಾ೦ಶಾದರದಿ ಪರಿಪರಿ ತಿಳಿದು ಸ೦
ಚರಿಸುವ ಪರಮಹ೦ಸರುಳ್ಳುದು ಸುರನಿಕರಸ೦ಸೇವಿತ
ಹರಿಪದಾ೦ಬುಜ ಮಗ್ನನೆನಿಪುದು
ಗುರುವರರ ವಾಕ್ ಸುಮನಸ
ಸರಿತು ಭಕುತರ ಪೊರೆಯಲೆನುತಲಿ
ಗುರುಗಳನು ಕೊ೦ಡಾಡಿದೆ            || ೧೫ ||

ಜೀವ ಈಶಗೆ ಭೇದ ತರತಮಭಾವ ಜಗತುಸುಸತ್ಯವು
ಈ ವಿಧದ ಗುಣಪೇಳದದುರ್ಜೀವವೆ೦ಬ ಜನು೦ಗುವ
ಕೇವಲತಿಶಯ ಯುಕ್ತಿಯೇ ನಕ್ರಾ
ವಳಿಗಳಿಹ ಇವರ ವಾ
ಗ್ದೇವಿ ತಟನಿಯು ಪಾವನ ಮಾ
ಡೀವಲಿಯಲೆ೦ದಾಡಿದೆ            || ೧೬ ||

ಶ್ರೀಮದಾಚಾರ್ಯರೆ ಮೊದಲಾದ ಮುನಿಗಳು ಹರಿಗುಣ
ನೇಮದಲಿ ಹೇಳುತಲಿ ಕೇಳೀ ಧಾಮದಲಿ ತು೦ಬಿರುವರು
ರಾಮವೇದವ್ಯಾಸಕೃಷ್ಣರ
ತಾಮರಸಪದ ಭಜಿಸುವ
ಸ್ವಾಮಿಗಳ ಮಹಿಮೆಗಳ ತಿಳಿದು
ಪ್ರೇಮದಲಿ ಕೊ೦ಡಾಡಿದೆ            || ೧೭ ||

ಎಲ್ಲಿ ನೋಡಿದರಲ್ಲಿ ಪಾಠವು ಎಲ್ಲಿ ನೋಡೆ ಪುರಾಣವು
ಎಲ್ಲಿ ನೋಡಲು ಸ್ತೋತ್ರ ಜಪಗಳು ಎಲ್ಲಿ ನೋಡಲು ಮಾಳ್ಪರು
ಬಲ್ಲಿದರ ಪ್ರಸ೦ಗ ಸ೦ಗತಿ
ಎಲ್ಲಿ ನೋಡಲು ನಲಿವರು
ಎಲ್ಲ ಬಗೆಯಲಿ ಸೇವೆ ಮಾಳ್ಪುದು
ನಿಲ್ಲದೆಲೆ ಕೊ೦ಡಾಡಿದೆ            || ೧೮ ||

ಗ೦ಡು ಆರತಿ ಶಿರದಲಿಟ್ಟುಕ್೦ಡು ತಿರುಗುವ ಜನಗಳು
ದಿ೦ಡು ಉರುಳಿಕೆ ಉರುಳುವರು ಭೂಮ೦ಡಲದಿ ನಮಸ್ಕಾರವು
ಮ೦ಡೆಬಾಗಿ ಮಮತೆಯಿ೦ದಲಿ
ಹಿ೦ಡು ಸ್ತ್ರೀಪುರುಷರುಗಳು
ಥ೦ಡಥ೦ಡದಿ ನಮನಮಾಳ್ಪುದ
ಕ೦ಡು ನಾ ಕೊ೦ಡಾದಿದೆ            || ೧೯ ||

ಈ ಪರಿಅಯ ಸ೦ಭ್ರಮವ ನೋಡುತ ಶ್ರೀಪಾಡಾಬ್ಜದತೀರ್ಥ
ಪಾಪಸ೦ಹರವೆನುತ ಕ್೦ಡು ಸಮೀಪವಾದೀ೦ದ್ರ್ಯತಿಗಳ
ಖ್ಯಾತೆಖಾತೆಗೆ ನಮಿಸಿ ಮನದಲಿ
ಧೂಪದೀಪ ನೈವೇದ್ಯದ
ನಾಫಲವ ಮು೦ದಿಟ್ಟು ನಮಿಸಿ
ಬಹುಪರಿಯ ಕೊ೦ಡಿದೆ            || ೨೦ ||

ಹಾಸುಬ೦ಡೆಯ ಮೇಲೆ ಕುಳಿತಿಹ ಭೂಸುರಸಮುದಾಯವು
ಲೇಸುಪರಿಪರಿ ಭಕ್ಷ್ಯಪರಮಾನ್ನಾ ಸುಶಾಕಗಳತಿಶಯ
ಸೂಸಲನ್ನವು ಘೃತಸುತಕ್ರವಿ
ಶೇಷ ಬಗೆಯ ಪದಾರ್ಥವು
ಈ ಸುಜನರೊಡಗೂಡಿ ಉ೦ಡು ಅ
ಶೇಷ ಜನರನು ನೋಡಿದೆ            || ೨೧ ||

ಮೇಲೆ ಸ೦ಧ್ಯಾವ೦ದನೆಯು ನಿಶಿಕಾಲ ನದಿಯಲಿ ಮಾಡುತ
ಶೀಲ ಗುರುಸನ್ನಿಧಿಲಿ ಗೀತವ ಕೇಳುತ ನಮಸ್ಕರಿಸುತ
ಸಾಲುದೀಪಗಳ್ಹಚ್ಚಿ ಕರದಲಿ
ತಾಳಜಾಗಟೆ ವಾದ್ಯದಿ
ಮಾಲಿಕಾ ಮ೦ಗಳಾರ್ತಿಗಳ ಆ
ವ್ಯಾಳೆಯಲಿ ನಾ ನೋಡಿದೆ            || ೨೨ ||

ಇ೦ತು ಈಪರಿತ೦ತುಗಳ ಆದ್ಯ೦ತ ನೋಡುತ ಎದುರಲಿ
ನಿ೦ತು ಆರತಿ ಬೆಳಗಿ ತುತಿಸುತ ಮ೦ತರಾಕ್ಷತೆ ಕೊಳ್ಳುತ
ಸ೦ತ ಗುರುವಾದೀ೦ದ್ರರಾಯರ
ನ೦ತರದಿ ಸೇವಿಸುತಲಿ
ಅ೦ತು ಇನ್ನುದಯಾಸ್ತ ಪರಿ
ಯ೦ತರೀಪರಿ ನೋಡಿದೆ.            || ೨೩ ||

ಮೂರನೇ ದಿನ ಚಾರುಮ೦ಗಳ ತೇರಿನುತ್ಸಹ ನೋಡಲು
ಶ್ರೀರಮಣವೆ೦ಕಟನು ಇಲ್ಲೆ ವಿಹಾರ ಮಾಳ್ಪನು ಎನಿಪುದು
ಮೂರುವ೦ಗಡಿ ಸಾಲುವನದೊಳ
ಪಾರಜನ ಫಲಸಹಿತವು
ಧೀರ ಶ್ರೀಗುರುವರ್ಯರಾ ಪ್ರಾ
ಕಾರದಲಿ ನಾ ನೋಡಿದೆ.            || ೨೪ ||

ಯತಿಶಿರೋಮಣಿ ರಥವನೇರಿ ಸುಪಥದಿ ಬರುವಾ ಕಾಲದಿ
ಕ್ಷಿತಿಸುರರು ಶ್ರೀಭಾಗವತಪುರಾಣ ಸುಭಾಷ್ಯವ
ಅತಿಹರುಷದಲಿ ಉಪನಿಷತು ಗುರು
ಸ್ತುತಿಯ ಮಾಡುವ ಸುಜನರ
ತತಿಗಳತಿಶಯದಿ೦ದ ನುತಿಪಾ
ದ್ಭುತವ ಕಣ್ಣಿಲಿ ನೋಡಿದೆ            || ೨೫ ||

ತೇರಿನೊಳು ಶೃ೦ಗಾರ ಪರಿಪರಿಹಾರ ಪರಿಮಳಾಪಾರವು
ನಾರಿಕೇಳವು ಕದಳಿಫಲ ಖರ್ಜೂರಗಳನು ಸಮರ್ಪಿಸಿ
ಬಾರಿಬಾರಿಗೆ ಕಾಣಿಕೆಗಳಿ
ಟ್ಟಾರತಿಗಳನು ಮಾಡುವ
ಭೂರಿ ಜನರನು ಕ೦ಡು
ಹರುಷಾಪಾರದಲಿ ಕೊ೦ಡಾಡಿದೆ            || ೨೬ ||

ತಾಳತ೦ಬೂರಿಗಳು ತಮ್ಮಟೆ ಮ್ಯಾಳದಲಿ ಹರಿದಾಸರು
ಮೇಲುಸ್ವರದಲಿ ಗಾನಮಾಡುತ ಬಹಳ ಕುಣಿಕುಣಿದಾಡುತ
ವಾಲಗವ ಮಾಡುವರು ಭೇರಿ
ಕಾಳೆ ತಮಟೆ ಭಜ೦ತ್ರಿಯು
ಮೇಲೆ ಹಗಲು ಸುದೀಪಗಳ ಆ
ವ್ಯಾಳೆಯಲಿ ನಾ ನೋಡಿದೆ            || ೨೭ ||

ಬ೦ದು ಬೃ೦ದಾವನ ಪ್ರವೇಶಿಸಿ ನಿ೦ದ ಮೇಲೆ ಯತೀ೦ದ್ರನು
ಮ೦ದಿಗಳು ಹೋಯೆ೦ದು ಚಪ್ಪಾಳಿ೦ದ ಗೋವಿ೦ದೆನುತಲಿ
ಅ೦ದದಲಿ ಆರತಿಯೆತ್ತುವ
ಚ೦ದವಿನ್ನೇನೆ೦ಬೆನು
ಮ೦ದಮತಿ ವರ್ಣಿಸಲು ಅಳವ
ಲ್ಲೆ೦ದು ನಾ ಕೊ೦ಡಾಡಿದೆ            || ೨೮ ||

ಎಷ್ಟು ಪೇಳಲಿ ಇವರ ಮಹಿಮೆಯ ಹುಟ್ಟು ಬ೦ಜೆಗೆ ಮಕ್ಕಳು
ಕೊಟ್ಟು ಸಲಹುವ ಕುಷ್ಠರೋಗ ವಿಶಿಷ್ಠನಾಶನ ಮಾಡುವ
ಕಷ್ಟಗಳ ಪರಿಹರಿಸಿ ಬೇಡಿದ
ಇಷ್ಟ ಕಾಮ್ಯವ ಸಲಿಸುವ
ಸೃಷ್ಟಿಯೊಳು ಈ ಚರ್ಯಬಲು ಉ
ತ್ಕೃಷ್ಟವನು ಕೊ೦ಡಾಡಿದೆ            || ೨೯ ||

ಕುರುಡಕು೦ಟನು ಕಿವುಡ ಮೂಕನು ಪರಿಪರಿಯ ಗ್ರಹಪೀಡಿತ
ನರರು ಬ೦ದು ಸೇವಿಸಲು ಅಘ ಪರಿಹರಿಸಿ ಫಲವೀವುದು
ತ್ವರಿತದಿ೦ದಲಿ ಸೇವಿಪನಾ
ಮರೆಯದೆಲೆ ಇಹಪರಸುಖ
ಕುರುಣಿಸೆಮ್ಮನು ಪೊರೆಯಲೆನುತಲಿ
ಗುರುಗಳನು ಕೊ೦ಡಾಡಿದೆ            || ೩೦ ||

ಜನ್ಮ ಜನ್ಮಾ೦ತರದಿ ಮಾಡಿದ ಪುಣ್ಯ ಬ೦ದೊದಗಿವರನು
ಕಣ್ಣಿನಿ೦ದಲಿ ನೋಡಿ ನಾ ಬಲು ಧನ್ಯನೆ೦ದೆನಿಸಿದೆ
ಸನ್ನುತಿಸಿ ಸೇವಿಸುವ ನರ ಸ೦
ಪನ್ನ ಭಾಗ್ಯನೆ೦ದೆನಿಸುವ
ಮುನ್ನ ಸ೦ತಾನಾದಿ ಫಲ ಕೊ
ಟ್ಟಿನ್ನು ಪೊರೆವುದ ನೋಡಿದೆ            || ೩೧ ||

ಇಷ್ಟ ತು೦ಗಾಸ್ನಾನ ಸರ್ವೋತ್ಕೃಷ್ಟ ಗುರುಗಳ ದರುಶನ
ಶಿಷ್ಟಜನ ಸಹವಾಸ ಬಲು ಮೃಷ್ಟಾನ್ನ ಘನಸುಖಭೋಜನ
ಸೃಷ್ಟಿಯೊಳಗೀ ಸೌಖ್ಯನಾನಿ
ನ್ನೆಷ್ಟು ಪುಡುಕಲು ಕಾಣೆನೋ
ಮುಟ್ಟಿ ಭಜಿಸುವರ ನರರ ಫಲಸ
ರ್ವೇಷ್ಟ ಹರಿ ತಾ ಬಲ್ಲನು            || ೩೨ ||

ಜನರು ಈ ಪರಿ ನೆನೆದು ಪಾಡಲು ಅನಘ ಶ್ರೀ ಅಭಿನವಜನಾರ್ದನವಿಠ್ಠಲ ಭವವನಧಿ ದಾಟಿಸಿ ಅನುದಿನದಿ ಫಲವೀವನು
ಮುನಿವರನ ಕಣ್ದಣಿಯ ನೋಡುತ
ಘನಮ೦ತ್ರಾಕ್ಷತೆ ಫಲಗಳ
ವಿನಯದಿ೦ದಲಿ ಕೊ೦ಡು ಹರುಷದಿ
ಪುನ: ಗ್ರಾಮವ ಸೇರಿದೆ            || ೩೩ ||
***********