ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ
ನ್ನೆರಡನೆಯದಾವುದುಂಟು ಪ.
ಪರಿಪರಿಯಲಿ ನೋಡೆ ಪರಮ ವೈಭವದಿಂದ
ಧರಣಿಯೊಳು ಮೆರೆಯುತಿಹುದು ಇಹುದುಅ.ಪ.
ಹಂಸನಾಮಕನಿಂದ ಹರಿದು ಬಂದಂಥ ಯತಿ
ಸಂಸ್ಥಾನ ಸುರನದಿಯೊ
ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ
ಹಂಸಗಳು ಸುರಿಯುತಿರಲು
ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ-
ದ್ವಂಶರಿಗೆ ಸಾರುತಿರಲು
ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ
ವಂಶದಲಿ ಉದಿಸಿ ಬರಲು ಬರಲು 1
ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ
ಹ್ಮಣ್ಯರಾ ಕರದಿ ಬೆಳೆದು
ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ
ಧನ್ಯಯತಿಯಾಗಿ ಮೆರೆದು
ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ
ಚನ್ನಾಗಿ ಮನನಗೈದು
ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ
ತನ್ನ ಭಕ್ತಿಯೊಳ್ ಕುಣಿಸಿ ನಲಿದು 2
ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ
ದುರುಳ ಮತಗಳನೆ ಮುರಿದು
ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು
ಹರಹಿ ಪ್ರಕಾಶಗೈದು
ಸರ್ವ ಸಜ್ಜನರ ಮನದಂದಕಾರವ ಕಳೆದು
ಸಿರಿವರನ ಪ್ರೀತಿ ಪಡೆದು
ತಿರುವೆಂಗಳೇಶನ ಪರಮ ಮಂಗಳ ಪೂಜೆ
ವರುಷ ದ್ವಾದಶವಗೈದು ಮೆರೆದು 3
ಆರಸನಿಗೆ ಬಂದಂಥ ಆಪತ್ಕುಯೋಗ ಪರಿ
ಹರಿಸಿ ಸಂಸ್ಥಾನ ಪಡೆದು
ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು
ಪರಮ ವೈಭವದಿ ಮೆರೆದು
ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ
ಅರಸನಿಗೆ ರಾಜ್ಯವೆರೆದು
ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು
ಮೊರೆಪೊಂದಿದವರ ಪೊರೆದು ಬಿರುದು 4
ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ
ನಿಲ್ಲಿಸುತ ಪೂಜೆಗೈದು
ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ
ದಲ್ಲಿ ಬಂಧನವಗೈದು
ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ
ನಿಲ್ಲಿಸದೆ ದೂರಗೈದು
ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ
ಯಲ್ಲಿ ಶಿಷ್ಯರನು ಪಡೆದು ನಿಂದು 5
ನವಕೋಟಿ ಧನಿಕ ವೈರಾಗ್ಯ ಧರಿಸುತ
ಭವದ ಬವಣೆಯಲಿ ನೊಂದು ಬಂದು
ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ
ಅವನಂತರಂಗವರಿದು
ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ
ನವ ಜನ್ಮವಿತ್ತು ಪೊರೆದು
ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ
ತ್ನವ ಪೂರ್ವಗುರುವಿಗೊರೆದು ಸುರಿದು 6
ಯತಿವಾದಿರಾಜ ಪುರಂದರ ಕನಕರೆಂ
ಬತುಲ ಶಿಷ್ಯರ ಕೂಡುತಾ
ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ
ಸ್ಮøತಿ ಮರೆದು ಕುಣಿದಾಡುತಾ
ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ
ಮತಿಯೊಳ್ ನಾಲ್ವರುಗೈಯುತಾ
ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ
ಯತಿವರರ ಸೃಷ್ಟಿಸುತ್ತಾ | ಸತತ 7
ಅಂದು ವಿಜಯೀಂದ್ರರನು ಯತಿವರರು ಬೇಡÉ
ಆನಂದದಲಿ ಭಿಕ್ಷವಿತ್ತ
ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ
ಮುಂದಾಳಲೆನುತಲಿತ್ತ
ಇಂದಿರೇ ಪತಿ ವೆಂಕಟೇಶನ್ನ ಪೂಜೆ ವರ
ಕಂದನಿಗೆ ಒಲಿದು ಇತ್ತ
ಒಂದೊಂದು ವೈಭವವು ಕೈ ಸೇರೆ ವೈರಾಗ್ಯ
ತಂದು ಅಭಿರೂಪ ಬಿಡುತಾ | ಕೊಡುತ 8
ನವವಿಧದÀ ಭಕ್ತಿಯಲಿ e್ಞÁನ ವೈರಾಗ್ಯದಲಿ
ಕವನದಲಿ ಶಾಂತತೆಯಲಿ
ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ
ಸವಿನಯವು ಸದ್ಗುಣದಲೀ
ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ
ಅವನಿ ಸಂಚಾರದಲ್ಲಿ
ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ
ಭುವನದಲಿ ಮೆರೆದ ಧನ್ಯಾ | ಮಾನ್ಯ 9
ಪಾಪಿಗಳ ಸಲಹಿ ಪಾವನ್ನಗೈಯುತ ಭವದ
ಕೂಪದಿಂದುದ್ಧರಿಸಿದಾ
ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ
ಶ್ರೀಪಾದ ಪದುಮ ರಜದಾ
ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು
ತಾ ಪಾಲಿಸುತ ನುಡಿಸಿದ
ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ
ಗೋಪ್ಯಸ್ಥಳದಲಡಗಿದಾ 10
***