Showing posts with label ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ purandara vittala. Show all posts
Showing posts with label ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ purandara vittala. Show all posts

Tuesday 1 June 2021

ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ purandara vittala

 ಶ್ರೀಮತ್ಪುರಂದರದಾಸಾರ್ಯರು ತಿಳಿಸಿದ ತತ್ವ


ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ 

ಮುಕ್ಕಾ ನಿನ್ನೊಡನೆ ನೋಡೋ
ಸೊಕ್ಕಬೇಡವೆಲೊ ಮುಂದೆ
ಕಕ್ಕಸ ಪಡುವಿ ಕನ್ನಡಿ ಒಡೆದರೆ
ದಕ್ಕಿಸಿಕೊಂಬ್ಯಾ ಎಲ ಹುಚ್ಚು ಮೂಳ ...

ಗುರುಹಿರಿಯರ ನಿಂದೆ ಮಾಡಿ
ತಾಯಿತಂದೆಗಳ ಚರಣಸೇವೆಗಳ ಹೋಗಾಡಿ
ಪರಿಪರಿ ನೀನು
ಬರಿದೆ ಆಲಸ್ಯವನ್ನೆ ಮಾಡಿ
ಎಲೊ ಎಲೊ ಖೋಡಿ
ಭರದಿಂದೆಳೆವರು ಕಾಲೆಮದೂತರು
ಕೊರಳ ಕೊಯ್ವರೊ ಎಲ ಹುಚ್ಚು ಮೂಳ ...

ನಿನ್ನ ದೇಹವ ನೋಡಿಕೊಂಬೆ
ನಿನಗೆ ನೀನೇ
ಚೆನ್ನಾಗಿದ್ದೇನೆಂತೆಂಬೆ
ಭ್ರಮಿಸಿ ಹುಚ್ಚು
ಕುನ್ನಿಯಂದದಿ ಹೊಗಳಿಕೊಂಬೆ
ಬಲು ಜಾಣನೆಂಬೆ
ಇನ್ನೇನು ಹೇಳಲಿ ಕಾಲೆಮದೂತರು
ಬೆನ್ನ ಕೊಯ್ದು ನರ ತೆಗೆದು ಎಳೆವರೊ ....

ಹೆಂಡಿರ ಕಂಡು ಹಲ್ಲ ಕಿರಿವೆ
ಹಾಕಿದ ಚೌರಿ
ಗೊಂಡೆ ರಾಕಟಿ ನೋಡಿ ಬೆರೆವೆ
ಅಲ್ಲಲ್ಲಿ ಕಂಡ
ಕಂಡ ವಿಷಯಕ್ಕೆ ಮನವಿಡುವೆ
ನಿನಗೇನು ಪರಿವೆ
ಚಂಡೆಮದೂತರು ಕಂಡೆಳಕೊಂಡು
ಹಿಂಡಿಹಿಪ್ಪೆ ಮಾಡಿಸುವರೊ ನಿನ್ನನು ....

ಬಾಲೇರ ಸುತರ ನಂಬಿದೆಲ್ಲೊ
ಮೂಗುತಿಗೊಪ್ಪು-
ವಾಲೆ ಮಾಡಿಸಿ ಇಟ್ಟೆಯಲ್ಲೊ
ಸಂಪತ್ತು ಸಿರಿ
ಬಾಳಿಗೆ ವ್ಯರ್ಥವಾಯಿತಲ್ಲೊ
ಕಡೆಗೆ ಬಲ್ಲೊ
ಸೀಳುವೆನೆನುತಲಿ ಕಾಲೆಮದೂತರು
ನಾಲಿಗೆ ಕೊಯ್ವರೊ ಎಲೆ ಹುಚ್ಚು ಮೂಳ ....

ನಿನ್ನೊಳು ನೀ ತಿಳಿದು ನೋಡೊ
ಗುರುಗಳ ಚರಣ-
ವನ್ನೆ ಚೆನ್ನಾಗಿ ಧ್ಯಾನ ಮಾಡೊ
ದುರಿತ ಮದಗ-
ಳನ್ನೆ ತರಿತರಿದೀಡಾಡೊ
ಭಕ್ತರ ಕೂಡೊ
ಚೆನ್ನ ಚಿದಾನಂದ ಸ್ವಾಮಿ ಪುರಂದರವಿಠ-
ಲನ್ನ ಪದಾಬ್ಜವ ನೆರೆನಂಬಿ ಬದುಕೊ .....
***

pallavi

mukkA ninnoDane nODo mukkA

anupallavi

mukkA ninnoDane nODO sokkabEDavelo munde kakkasa paDuvi kannaDi oDedare takkisikombyA ela huccu mULa

caraNam 1

guru hiriyara ninde mADi tAyi tandegaLa caraNa sEvegaLa hOgADi paripari nInu baride
Alasyavanne mADi elo elo gODi bharadindeLevaru kAlemadUtaru koraLa koivaro ela huccu mULa

caraNam 2

ninna dEhava nODikombe ninage nInE cennAgiddEnentemba bhramisi huccu kunniyandadi
hogaLikombe balu jANanembe innEnu hELali kAlemadUtaru benna koidu nara tegedu eLevaro

caraNam 3

heNDira kaNDu halla kirive hAkida cauri goNDe rAkaTi nODi bereva allalli kaNDa kaNDa viSayakke
manaviDuve ninakEnu parive kaNDemadUtaru kaNDeLa koNDu hiNDihippe mADisuvaro ninnanu

caraNam 4

bAlEra sutara nambidello mUgudi koppu vAle mADisi iTTeyallo sampattu siri bALike
vyarttavAyitallo kaDege ballo sILu venenutali kAlemadUtaru nAlige koivaro ele huccu mULa

caraNam 5

ninnoLu nI tiLidu nODo gurugaLa caraNa vanne cennAgi dhyAna mADo durita madagaLanne
taritaridIDADo bhaktara kUDo cenna cidAnanda svAmi purandara viTTalanna padAbjava nerenambi baduko
***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಹರಿವಾಯುಗುರುಗಳ ಅನುಗ್ರಹದಂತೆ ಸಂಕ್ಷಿಪ್ತ ಅರ್ಥ ವಿವರಣೆ...

ನನ್ನಲ್ಲಿ ನಿಂತು ಸಕಲ ಕರ್ಮಗಳಿಗೂ ಪ್ರೇರಕಶಕ್ತಿಯಾಗಿ ನನ್ನ ಸ್ವಾಮಿ ಎನಿಸಿದ ಆ ಪರಮಾತ್ಮನೇ ಸಕಲ ಜೀವರಾಶಿಗಳಲ್ಲಿ ನಿಂತು ಸಕಲ ವ್ಯಾಪಾರಗಳಿಗೂ ಪ್ರೇರಕನಾಗಿ ನಿಯಾಮಕನಾಗಿ ಸಕಲ ಜೀವರಾಶಿಗಳಿಗೂ ಸ್ವಾಮಿ ಎನಿಸಿಕೊಂಡಿದ್ದಾನೆ... 

ಅರ್ಥಾತ್ ಮಮ ಸ್ವಾಮಿ ಹರಿಃ ನಿತ್ಯಂ ಸರ್ವಸ್ಯ ಪತಿರೇವ ಚ ಅನ್ನುವುದನ್ನು ತಿಳಿದು ಎಲ್ಲವೂ ಪರಮಾತ್ಮನೇ ನೀಡಿದ್ದು ಎಂದು ತಿಳಿದು ಬದುಕಬೇಕು ಅಂತಾರೆ ಶ್ರೀಮತ್ಪುರಂದರದಾಸಾರ್ಯರು

 ಮುಕ್ಕಾ ಅನ್ನುವ  ಶಬ್ದದಲ್ಲಿ ಇಲ್ಲಿ ಎರಡು ಮೂರು ಅರ್ಥಗಳನ್ನ ಇಟ್ಟಿದ್ದಾರೆ...

   ಮೊದಲನೆಯದು ಮುಕ , ಅಥವಾ ಮುಕ್ಕಾ ಅಂದರೇ ಕನ್ನಡಿ.. 

ಮನುಷ್ಯ ತನ್ನ ಮುಖವನ್ನು ತಾನೇ ಸ್ವತಃ ನೋಡಿಕೊಳ್ಳಲು ಸಾಧ್ಯವಿಲ್ಲವಲ್ವಾ ?  ಅದಕ್ಕಾಗಿ ಕನ್ನಡಿ ಬೇಕೇ ಬೇಕು.. ಅಂದರೇ ಮನುಷ್ಯನಾದವನು ತನ್ನ ಮುಖವನ್ನ ತಾನೇ ನೋಡಿಕೊಳ್ಳದಷ್ಟೂ ಅಸ್ವತಂತ್ರ ಎಂಬುದಾಗಿ ಸೂಚಿಸಿದ್ದಾರೆ ಇಲ್ಲಿ... ಪರಮಾತ್ಮನೊಬ್ಬನೇ ಸ್ವತಂತ್ರ... ಸ್ವರಾಟ್ ಆತನ ಕೈ ಗೊಂಬೆಗಳೇ ನಾವು ಹೊರತು, ಪರಮಾತ್ಮನ ವ್ಯಾಪಾರದಲ್ಲಿ ನಮ್ಮದೇನೂ ಇಲ್ಲ, ಕರ್ಮಾನುಸಾರೇಣ ಅನುಭವಿಸುವದೊಂದೆ ನಮ್ಮ ಕರ್ತವ್ಯ...

ಇನ್ನು ಎರಡದನೆಯದು 
ಮುಕ್ಕಾ ಅಂದರೇ ಮೂರ್ಖ ಅಂತಲೂ ಅರ್ಥ.. ಮೂರ್ಖ ಶಬ್ದದ ತದ್ಭವ ರೂಪವೇ ಮುಕ್ಕಾ...  ಹೇ  ಮೂರ್ಖನಾದ ಮನುಷ್ಯನೇ! ನೀನು ಸ್ವಂತಂತ್ರ ಅಂತ ತಿಳ್ಕೋಬೇಡ ನಿನ್ನಲ್ಲಿ ಸರ್ವತಂತ್ರ ಸ್ವತಂತ್ರನಾದ  ಪರಮಾತ್ಮನು ನಿಂತು ಸಕಲ ವ್ಯಾಪಾರಗಳನ್ನು ತಾನೇ ಮಾಡಿ,  ನಿನ್ನಿಂದ ಮಾಡಿಸುತ್ತಾನೆ, ಹೀಗಾಗಿ  ನೀನು ಮಾಡ್ತಿ ಅಷ್ಟೇ  ಹೊರತು, ನಿನ್ನದೇನೂ ಇಲ್ಲ... 

ಅದಕ್ಕೆ ಮುಕ್ಕಾ ನಿನ್ನೊಡನೆ ಪರಮಾತ್ಮ ಇದ್ದುಕೊಂಡು ನಿನ್ನನ್ನ ಪ್ರೇರೇಪಿಸುತ್ತಿದ್ದಾನೆ ಅನ್ನೋದನ್ನ ಸರಿಯಾಗಿ ನೋಡಿ ತಿಳಿದುಕೋ ಎಂದಿದ್ದಾರೆ ತೇನ ವಿನಾ ತೃಣಮಪಿ ನ ಚಲತಿ  ಎನ್ನುವುದೇ ಸೂಕ್ಷ್ಮ...
      
ಮತ್ತೆ ಮೂರನೆಯದು-  ಬಿಂಬ ಪ್ರತಿಬಿಂಬ ಭಾವ ಸರಿಯಾಗಿ ತಿಳಿದುಕೋ , ಕನ್ನಡಿಯ ಎದುರಿಗೆ ನಿಂತಾಗ ನಾವು ಏನು ಮಾಡ್ತೀವೋ ಅದನ್ನ ಪ್ರತಿಬಿಂಬ ಮಾಡುತ್ತೆ  ಅಲ್ವಾ ? ಅದೇ ರೀತಿ ಬಿಂಬರೂಪಿಯಾದ ಪರಮಾತ್ಮ ನಮ್ಮಲ್ಲಿ ನಿಂತು ನಮ್ಮ ಯೋಗ್ಯತಾನುಸಾರ ತಾನು ಕರ್ಮಗಳನ್ನು ಮಾಡಿ ನಮ್ಮಿಂದ ಮಾಡಸ್ತಿರ್ತಾನೆ , ಆದರೆ ಆ ಕರ್ಮಗಳು ಆತನಿಗೆ ಮಾತ್ರ ಎಳ್ಳಷ್ಟೂ ಲೇಪವಿಲ್ಲ, ಆತನಿಗೆ ತಾಕುವದಿಲ್ಲ ಅನ್ನೋದನ್ನ ಇಲ್ಲಿ ತಿಳಿಸಿದ್ದಾರೆ ದಾಸಾರ್ಯರು...

ಗುರು ಹಿರಿಯರಿಗೆ, ಸ್ವೋತ್ತಮರಿಗೆ ನಿಂದೆ ಮಾಡಿ, ತಾಯಿ ತಂದೆಗಳಿಗೆ ನೋವನ್ನು ನೀಡಿ ನಾನೇ ಉತ್ತಮ ಎನ್ನುವ ಅಹಂಕಾರದಿಂದ ಮೆರೆಯುತ್ತಿ.. ಆದರೆ ಆ ಪಾಪ ಕರ್ಮದ ಫಲವಾಗಿ ನಿನ್ನನ್ನು ಯಮದೂತರು ಎಳೆದು ಹಾಕುವರಲ್ಲವೋ ಮೂರ್ಖನೆ ತಿಳಿ ನಿನ್ನೊಳು ನೀ ಅಂತಾರೆ...

ಸೌಂದರ್ಯ ತುಂಬಿದ ಈ ನಿನ್ನ  ದೇಹ ಶಾಶ್ವತವೆಂದು ತಿಳಿದು, ಭ್ರಮಿಸಿ, ನಾನೇ ಸೌಂದರ್ಯವಂತನೆಂದು, ಜಾಣನೆಂದು, ಪ್ರತಿಭಾವಂತನೆಂದು ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತಿರುವಿ..  ಏನು ಈ ದೇಹ ಶಾಶ್ವತ ಎಂದು ತಿಳಿದು ಮೆರೆಯುತ್ತಿರುವೆ ಮೂರ್ಖ ಖೋಡಿ ಮೂರ್ಖನೆ, ಯಾವುದೂ ಶಾಶ್ವತವಲ್ಲ, ಕೊನೆಗೆ ಕಾಲಯಮದೂತರು ಬೆನನ್ನು ಕೊಯ್ದು, ನರ ಎಳೆದು ಸಾಯಿಸುವರು ನೋಡು ಅಂತಾರೆ, ಅಂದರೆ ನಿಸ್ಸಾರವಾದ ದೇಹದಿ ಸಾಯುವೆ ಮೂರ್ಖನೆ ಎಂದರ್ಥ...

ಹೆಂಡತಿ ಬಂದಳೆಂದು ಅವಳ ಸೌಂದರ್ಯಾತಿಶಯಕ್ಕೆ ಮರುಳಾಗಿ, ಅವಳು ಹಾಕಿದ ಚೌರಿಯನ್ನು, ರಾಕಟಿಯನ್ನು (ತಲೆಯ ಮೇಲಿನ ಆಭರಣ) ನೋಡಿ ಪರವಶನಾಗಿ ಸುಖಕ್ಕಾಗಿಯೇ ಅಲೆದಾಡುತ್ತಿರುವೆ... ಮೂರ್ಖನೇ ಈ ಹೆಂಡತಿಯೂ ಶಾಶ್ವತಳಲ್ಲ , ಸುಖವೂ ಅಲ್ಲ, ಕೊನೆಗೆ ಸಾವಿಶ ಪಾಶಕ್ಕೆ ನೀ ಸಿಕ್ಕದೇ ಇರುವಿಯಾ? ಇವೆಲ್ಲದರ ಹಿಂದೆ ಬೀಳದೆ ಬಿಂಬನನ್ನು  ಕನ್ನಡಿಯಲಿ ಅರ್ಥಾತ್ ಹೃದಯದಲಿ ನೋಡುವುದನ್ನು ಕಲಿ ಅಂತಾರೆ..

ಹೆಂಡತಿಯ  ಮಕ್ಕಳ ಮೋಹದಲ್ಲಿ ಬಿದ್ದು ನೀ ಒಡವೆ , ವಸ್ತ್ರ ಮಾಡಿಸಿ , ಸಂಪತ್ತನ್ನು ಗಳಿಸಿ, ಮನೆ ಕಟ್ಟಿಸಿ ಇಟ್ಟಿಯಲ್ಲೋ ಹುಚ್ಚು ಮೂಳನೆ, ಕೊನೆಗೆ ಆ ಯಮದೂತರು ಬಂದು ನಾಲಿಗೆಯನ್ನು ಕೊಯ್ಯುವ ಮುನ್ನ ಆ ನಾಲಿಗೆಯಿಂದ ಕಿಂಚಿತ್ ಹರಿನಾಮ ಸ್ಮರಣೆ ಮಾಡೋ ಮೂರ್ಖ ಮನುಜನೆ ಅಂತಾರೆ..

ಒಟ್ಟಿನಲ್ಲಿ ನಿನ್ನನ್ನು ನೀನು ಅರಿತು, ಗುರುಪ್ರಸಾದೋ ಬಲವಾನ್ ಎಂಬಂತೆ ಗುರುಗಳ ಪಾದವನ್ನು ಹಿಡಿದು, ಗುರುಮುಖೇನಾ ಜ್ಞಾನವನ್ನು ಪಡೆದು, ದುರಿತ ಮದಗಳನ್ನು ಓಡಿಸೋ, ಸಜ್ಜನರ ಸಂಗವನ್ನು ಮಾಡೋ , ಆ ನೈಜ ಜ್ಞಾನದಿಂದ ನಮ್ಮ ಶ್ರೀ ಪುರಂದರವಿಠಲನ ಪದಾಬ್ಜವನ್ನು ಸದಾ ನಂಬಿ ಬದುಕುವ ಹಾದಿ ನೋಡೋ.. ಶರಣಾಗತರನ್ನು ಪಾಲಿಪ ಭಕ್ತಪರಾಧೀನ ನಮ್ಮ ಪರಮಾತ್ಮನು ನಮ್ಮನ್ನು ಸದಾ ಕಾಯುವನು ನೋಡೋ ಅಂತಾರೆ ಶ್ರೀಮತ್ಪುರಂದರದಾಸಾರ್ಯರು..

ಇಂಥಹಾ ಅದ್ಭುತ ಜೀವನದ ತತ್ವಗಳನ್ನು ತುಂಬಿಸಿ ನಮಗೆ ಪರಮಾತ್ಮನ ಸೇರುವ ಸುಲಭ ಹಾದಿಯನ್ನು ತೋರಿದ ಶ್ರೇಷ್ಠ ದಾಸಾರ್ಯರೆಲ್ಲರಿಗೂ ಜೀವದ ಭಕ್ತಿಯಿಂದ ನಮಸ್ಕಾರ ಮಾಡುತ್ತಾ...

ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ
ಶ್ರೀ ಕೃಷ್ಣಾರ್ಪಣಮಸ್ತು 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
****