..
ಶ್ರೀ ಮನೋಹರ ಸಲಹೋ ಎನ್ನ
ಕಾಮಿತ ಫಲವಿತ್ತು ಸಾಮಜಪತಿ
ಪರಿಪಾಲಕ ನಂಬಿದೆ ಪ
ಅಂಡಜಗಮನ ದಶರುಂಡವೈರಿ ರಾಜೀವಾಕ್ಷ
ಕುಂಡಲಿಶಯನ ಕೋದಂಡ ಪಾಣಿಯ
ತೋಂಡಮಾನಗೊಲಿದ ಮಾರ್ತಂಡ ತೇಜ
ನಿನ್ನ ಪಾದ ಪುಂಡರೀಕ ಸೇವಿಸುವ
ತೋಂಡರೊಳಿಡು ಪಾಂಡವಪಕ್ಷ1
ನಾಳಿತ ಸಂಭವಪಿತ ಶೈಲಜಾವಲ್ಲಭನುತ
ವಾಲಿಯ ಭಂಜನ ವನಮಾಲಿ ಭೂಲೋಲ
ಕಾಲಯವನನ ಕಾಲ ಕೋಲರೂಪಿ ಕೋಮಲಾಂಗ
ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ 2
ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ
ನಂದನಂದಾನಂದ ದಾತ ನಂದಕ ಹಸ್ತ
ನಂದಮುನಿವಂದಿತ ಸಂಕ್ರಂದನ ನಂದನವರದ
ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ 3
***