Showing posts with label ನೀನಾಳುವ ಬಂಟರ vijaya vittala ankita suladi ಸಾಧನ ಸುಳಾದಿ NEENAALUVA BANTARA SADHANA SULADI. Show all posts
Showing posts with label ನೀನಾಳುವ ಬಂಟರ vijaya vittala ankita suladi ಸಾಧನ ಸುಳಾದಿ NEENAALUVA BANTARA SADHANA SULADI. Show all posts

Monday, 7 June 2021

ನೀನಾಳುವ ಬಂಟರ vijaya vittala ankita suladi ಸಾಧನ ಸುಳಾದಿ NEENAALUVA BANTARA SADHANA SULADI


 Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ಹರಿಯೆ ಮುಖ್ಯಕರ್ತನು, ಸರ್ವೋತ್ತಮನೆಂಬ ತಿಳುವಳಿಕೆಯಿಂದ ಹರಿಯ ದಾಸ್ಯಭಾವ ವೊಹಿಸೆ ಸಕಲ ದೇವತೆಗಳು ಮನ್ನಿಸುವರು.) 


 ರಾಗ ಭೈರವಿ 


 ಧ್ರುವತಾಳ 


ನೀನಾಳುವ ಬಂಟರ ಕಣ್ಣೆತ್ತಿ ನೋಡಿ ಬದುಕಿ

ಬಾಳುವ ದುಷ್ಟ ದೇವತೆಗಳುಂಟೇ

ತ್ರಿಲೋಚನಾದಿಗಳು ನಿನ್ನವರೆಂದಡೆ

ಮೇಲಾಗಿ ಕಾವುತಿಪ್ಪರು ಭೀತಿ ತಿಳಿದು

ಪೇಳಲೇನಯ್ಯಾ ಕಟ್ಟಾಳೆ ಎಣಿಸುತ್ತ

ಕೇಳುತ್ತ ಕೇವಲ ಬೆರಗಾಹರೋ

ಏಳೇಳು ಲೋಕವನ್ನು ಆಳುವ ಸಮರ್ಥರು

ಶ್ರೀಲೋಲ ನಿನ್ನ ದಾಸರೆಂದರಾಗ ಪಾಲಿಸುತಿಪ್ಪರು

ಎಲ್ಲೆಲ್ಲಿ ಚರಿಸಿದರು ವಾಲಾಯ ಬೆನ್ನ ಬಿಡದೆ ನಿತ್ಯ

ಕೀಳು ದೈವಂಗಳ ಭೀತಿಗಂಜುವನಾರು

ಏಳಾಲವಲ್ಲದೆ ನಿನ್ನವರಿಗೆ ಊಳಿಗವೆಂದರೆ ಪೊಂದಿ ಮಾಳ್ಪ

ಊಳಿಗವಲ್ಲದೆ ಮತ್ತಾವುದಯ್ಯಾ

ತೇಲಿಸಬೇಕಾದರು ಈಸುಗಾಯಿಯಲ್ಲದೆ

ತೇಲಿಸುವದೇ ಕಲ್ಲು ಕಟ್ಟಿಕೊಳಲು

ಬಾಲ ಕ್ರೀಡೆಯಾಡುವ ವಿಜಯವಿಟ್ಠಲ ನಿನ್ನ

ಪೋಲುವ ದೈವ ಕಾಣೆ ಪೊಡವಿಯೊಳಗೆ ॥ 1 ॥ 


 ಮಟ್ಟತಾಳ 


ಪೃಥಿವಿ ಪಾಲನ ಪುತ್ರ ಶತಧಡ್ಡನಾದರು

ಪ್ರತಿದಿನದಲ್ಲಿ ಪಂಡಿತ ಪಾಮರರು

ಅತಿಶಯವಾಗಿ ಅಂಜುತಲಿಪ್ಪರು ಕೆಲವರು

ಸ್ತುತಿಸುವರು ಕೆಲವರು ಗತಿದಾತ ಲಕ್ಷುಮಿ -

ಪತಿ ನಿನ್ನ ಪಾದವ ನುತಿಸುವ ಮಾನವನು

ಚತುರನಾಗಲಿ ಅಚತುರನಾಗಲಿ ಅವನ

ಹಿತದೊಳಗೆ ದೇವತೆಗಳು ಇದ್ದು ಸಂ -

ತತ ಕೊಂಡಾಡುವರು ಖತಿಗೊಳಿಸುವ ದುರುಳ -

ತತಿಗಳು ಇವನ ಕಾಣುತಲೆ ಪಲಾಯನ 

ಪ್ರತಿ ಮಾತಾಡದಲೆ 

ಯತಿಗಳ ಮನೋಹರ ವಿಜಯವಿಟ್ಠಲ ನಿನಗೆ

ಸುತರೆಂಬರು ಭಕುತ ಜನವಲ್ಲದೆ ಇತರಾದಿಗಳಾರು ॥ 2 ॥ 


 ತ್ರಿವಿಡಿತಾಳ 


ನಡೆವದು ನುಡಿವದು ಕೊಡುವದು ಕೊಳುವದು

ಹಿಡುವದು ಬಿಡುವದು ಇಡುವದು ತಡೆವದು

ಕೊಡುವದು ತೊಡುವದು ಕೆಡುವದು ಉಳಿವದು

ಅಡಿಯಿಟ್ಟು ಮತ್ತಡಿ ತೆಗೆದು ಮುಂದಿಡುವದು

ಬಡತನ ಭಾಗ್ಯವು ಕಡು ದುಃಖ ಸುಖಂಗಳು

ಎಡಿಗಡಿಗೆ ನಾನು ಪಡೆದ ಕಾರಣಗಳು

ಕಡಲ ಥೆರೆ ಒಡಗೂಡಿ ಬರುತಿಪ್ಪ ಸಡಗರವೆಲ್ಲವು

ಒಡಿಯಾ ನಿನ್ನಾಧೀನ ಉಡಿಯಲ್ಲಿ ಶಿಶುವಿನ

ಕೆಡಹಿ ಕಟ್ಟಿಕೊಂಡು ಪಡೆದ ಜನನಿ ಸಾಕುತ್ತಡಿಗಡಿಗೆ ನಸುನಗುವಂತೆ

ಜಡಮತಿಹರ ನಮ್ಮ ವಿಜಯವಿಟ್ಠಲ ನೀನೆ

ದೃಢ ಭಕುತರಿಗೆ ಬಿಡದೆ ಲಾಲಿಸಿ ಪಾಲಿಪೆ ॥ 3 ॥ 


 ಅಟ್ಟತಾಳ 


ಮನೆಯ ಕಟ್ಟಿಸಲಿಲ್ಲ ಮಾಳಿಗೆ ತೊಯಿಸಲಿಲ್ಲ

ಹಣ ತರಿಸಲಿಲ್ಲ ಉಪವಾಸವಿಡಲಿಲ್ಲ

ಧನಿಕನೆನಿಸಲಿಲ್ಲ ಬಡವನ್ನ ಮಾಡಲಿಲ್ಲ

ವನಜನಾಭನೆ ನಿನ್ನ ನೆನೆದ ಭಕ್ತರಿಗೆ

ಅಣುಮಾತ್ರ ಪ್ರಯಾಸವನೆ ತಂದುಕೊಡದಲೆ

ಅನುದಿನ ಸಲಹುವ ಅನಿಮಿತ್ಯ ಬಂಧು

ಮನಮೆಚ್ಚಿ ಫಲವೀವ ವಿಜಯವಿಟ್ಠಲ ತನ್ನ

ಕನಸಿಲೆ ಕೊಂಡಾಡೆ ಮನಸಿಲಿ ನಿಲುವಾ ॥ 4 ॥ 


 ಆದಿತಾಳ 


ಸ್ವಾತಂತ್ರ ನಮ್ಮ ಸ್ವಾಮಿ ಮತ್ತಾವನಾದರುಂಟೆ

ಈತನ ಸೇವಕರಾಗಿ ಪಾತಕ ಕಳಕೊಳ್ಳಿ

ಯಾತಕೆ ಸಂಶಯ ಮಾಡುವದೇ ಸಲ್ಲ

ಭೀತಿ ನಿಮಗೆ ಇಲ್ಲ ಭೂತಳದೊಳಗೆಲ್ಲ

ಪೀತಾಂಬರಧರ ವಿಜಯವಿಟ್ಠಲರೇಯನ 

ದೂತನಾದವಂಗೆ ದುಷ್ಕರ್ಮ ನಿಲ್ಲುವವೆ ನೋಡಾ ॥ 5 ॥ 


 ಜತೆ 


ಧೊರೆ ಎಂದರೆ ನಮ್ಮ ಸಿರಿ ಅರಸನೆ ಧೊರೆ

ದೊರಕುವಂತೆ ಭಜಿಸಿ ವಿಜಯವಿಟ್ಠಲನ ಪಾದಾ ॥

*****