ankita ವಿಠಲೇಶ
ರಾಗ: ಸಿಂಧುಕಾಪಿ ತಾಳ: ಕವ್ವಾಲಿ
ಮೂರ್ತಿಮಂತ ಮೋದಚಂದ್ರಾ
ಕೀರ್ತಿಕಾಂತಿ ರಾಘವೇಂದ್ರಾ ತೋರು ದಾರಿಯ ದೇವಾ ಪ
ಘನಘೋರಭವಕೆ ಬಲಿಯಾಗಿ
ಮನಸಿಜನ ಬೇಟೆಮೃಗವಾಗಿ
ತನುಮನದಾವಾಗ್ನಿ ಬಲುತಾಗಿ
ಹೊಣೆಗಾಣದೆ ಕಣ್‍ಕುರುಡನಾದೆ. . . . ತೋರು 1
ದಿನದಿನಕೆ ಮೋಸ ಮನೆಮಾಡಿ
ಧನಕಾಗಿ ತನುವನೀಡಾಡಿ
ಕೊನೆಯಲಿ ಮೃತ್ಯುವೆಡೆ ನೋಡಿ
ಮನನಡುಗಿತು ಶ್ರೀಗುರುರಾಜಾ. . . . ತೋರು 2
ಹಗಲಿರುಳು ಪಾಪಕರ್ಮದಲಿ
ಮಿಗೆ ದ್ರೋಹಿಯಾದೆ ಮುನಿರಾಯಾ
ಬಗೆಯಾವುದಯ್ಯಾ ಸುಗುಣೇಂದ್ರಾ
ನಿಗಮಾರ್ಥಮಹನ್ಮತಿಸಾಂದ್ರಾ. . . . ತೋರು 3
ಅಪರಾಧಿ ಎಂದು ಕುಪಿಸಿದೊಡೆ
ಉಪಜೀವಿ ಎನಗೆ ಬಾಳುವೆಯೇ
ಅಪರೋಕ್ಷಜ್ಞಾನಿ ಕೃಪೆಮಾಡೈ
ಅಪಣಾರ್ಯಗೊಲಿದ ಗುರುರಾಯಾ. . . . ತೋರು 4
ನಿನ್ನೊರತು ಅನ್ಯಗತಿ ಯಾರೈ
ಎನ್ನೊಡೆಯ ದಾಸಕುಲದೈವಾ
ಚಿನ್ಮಣಿ ವಿರಾಜ ವಿಠಲೇಶಾ
ಇನ್ನಾದರು ಜ್ಞಾನವನೀಡೈ. . . . ತೋರು 5
***