Showing posts with label ವಿಜಯರಾಯಗುರುವೆ ramachandra vittala ankita suladi ವಿಜಯದಾಸ ಸ್ತೋತ್ರ ಸುಳಾದಿ VIJAYARAYA GURUVE VIJAYADASA STOTRA SULADI STUTIH. Show all posts
Showing posts with label ವಿಜಯರಾಯಗುರುವೆ ramachandra vittala ankita suladi ವಿಜಯದಾಸ ಸ್ತೋತ್ರ ಸುಳಾದಿ VIJAYARAYA GURUVE VIJAYADASA STOTRA SULADI STUTIH. Show all posts

Wednesday, 25 November 2020

ವಿಜಯರಾಯಗುರುವೆ ramachandra vittala ankita suladi ವಿಜಯದಾಸ ಸ್ತೋತ್ರ ಸುಳಾದಿ VIJAYARAYA GURUVE VIJAYADASA STOTRA SULADI STUTIH

 

Audio by Vidwan Sumukh Moudgalya

ಶ್ರೀ ರಾಮಚಂದ್ರವಿಠಲದಾಸಾರ್ಯ ವಿರಚಿತ 

[ ಶ್ರೀವೇಣುಗೋಪಾಲವಿಠಲದಾಸರ ಶಿಷ್ಯರು ಶ್ರೀ ರಾಮಚಂದ್ರವಿಠಲದಾಸರು ] 


 ಶ್ರೀವಿಜಯದಾಸರ ಸ್ತೋತ್ರ ಸುಳಾದಿ 

( ಅಹಂಕಾರವನ್ನು ಖಂಡ್ರಿಸಿ ವೈರಾಗ್ಯವಿತ್ತು ಶ್ರೀಹರಿಯ ತೋರಲು ಪ್ರಾರ್ಥನಾ ) 


 ರಾಗ ಭೈರವಿ 


 ಧ್ರುವತಾಳ 


ವಿಜಯರಾಯಗುರುವೆ ನಿಮ್ಮ ಪಾದಾಬ್ಜದ

ರಜವು ಶಿರದಲಿ ಧರಿಸಿದವರ ದಾಸರ

ನಿಜವಾಗಿ ನಂಬಿದ ಬಗೆಯ ತಿಳಿಯದೆ ಎನ್ನ

ಸುಜನರಿಂದ ಬಲು ಕೊಂಡಾಡಿಸಿ

ಭಜಕರ ಪಾದಸೇವೆ ಸ್ವಲ್ಪವಾದರು ಕೊಡದೆ

ಕುಜನಶ್ರೇಷ್ಠನ ಮಾಡಿ ನೋಡುವರೇ

ಗಜರಾಜವರದ ರಾಮಚಂದ್ರವಿಟ್ಠಲನ್ನ 

ಧ್ವಜವಜ್ರಾಂಕಿತಪಾದ ಮನದಿ ನಿಲಿಸಿದ ಕರುಣಿ ॥ 1 ॥ 


 ಮಟ್ಟತಾಳ 


ನಿನ್ನ ನಂಬಿದೆ ಗುರುವೆ ಜ್ಞಾನಭಕುತಿ ಸಂ -

ಪೂರ್ಣ ವೈರಾಗ್ಯವನ್ನು ಕೊಟ್ಟು ಹರಿಪಾದ -

ವನ್ನಜದಲ್ಲಿ ಮನ ಎರಕಮಾಡೊದೆಂದು

ಬಿನ್ನಪ ಕೇಳದಲೆ ಸಕಲ ಸುಜನರಿಂದ

ಮನ್ನಿಸಿ ವಿಪರೀತ ಮಾಡಬಹುದೇನಯ್ಯ

ಎನ್ನಾಣೆ ಪುಶಿಯಲ್ಲ ಮೊದಲಿಗಿಂದಲಿ ನಾನು

ಚನ್ನಾಗಿ ಕೆಟ್ಟತೆರದಿ ತೋರುತಲಿಹುದು

ಸನ್ನ್ಯಾಯವಹುದೆ ರಾಮಚಂದ್ರವಿಟ್ಠಲನ್ನ ಭ -

ಜನೆಯಿಂದ ದೂರನ್ನ ಮಾಡುವದು ॥ 2 ॥ 


 ರೂಪಕತಾಳ 


ಜೋಳದನ್ನ ಮೊದಲು ಉಂಬುವ ಸಮಯ -

ದಲ್ಲಿ ಒಂದಿದ್ದಿಲ್ಲ ಮನ ಕೇವಲಾಸಕ್ತಿಯಲಿ

ಹೋಳಿಗೆ ತುಪ್ಪಾ ನೀನು ಈಗ ಬೇಡದೆ ಕೊಡಲು

ವಾಲಯ ಬಂದು ಸ್ನೇಹದಿಂದ ಭೋಜನಮಾಳ್ಪ

ವೇಳೆವೇಳೆಗೆ ದೊರಕಲು ಬಲು ಸುಖಿಸುವೆ

ತಾಳದೆನಗೆ ಸ್ವಲ್ಪ ವೈರಾಗ್ಯವಾರುತಿ

ಶೀಲಜನರಿಗೆ ಪಾದಕೆರಗಲು ಮೊದಲು ಬಹು

ಮೇಲು ಕರುಣದಿಂದ ವಂದಿಸಿಕೊಳುತಿದ್ದರು

ಕಾಲರಘಳಿಗೆ ತವ ಶರಣರ ಪಾದಾಬ್ಜದ

ಧೂಳಿ ಎನ್ನ ಶಿರಕೆ ಅತಿ ದೂರಾಯಿತು ಗುರುವೇ

ತಾಳಾರು ಸ್ವಲ್ಪ ಹತ್ತೆಸೇರಗೊಡರೆನ್ನ

ಘಾಳಿಗಂಜುವರು ಮುಂದೇನು ಗತಿಯೊ

ಧಾಳಿ ಬಂದು ಭಕುತಿ ಸೂರೆಹೋಗಿ ಗ್ರಾಮ

ಹಾಳುಬಿದ್ದಂತೆನ್ನ ಮನವಾಯಿತೊ

ಪೇಳಲೇನು ದುಃಖವುಂಡುಂಡು ಮದದಿಂದ

ಶ್ರೀಲೋಲನಂಘ್ರಿ ಸ್ಮೃತಿ ಅಡಗಿತಲ್ಲ

ಪಾಲಸಾಗರಶಾಯಿ ರಾಮಚಂದ್ರವಿಟ್ಠಲ -

ನೂಳಿಗರ ಕೊಂಡಾಡಲಾಹಂಕಾರ ಹೆಚ್ಚಿತು ॥ 3 ॥ 


 ಝಂಪಿತಾಳ 


ಪಡೆದ ಜನನಿ ಒಬ್ಬಳೆ ಧರ್ಮಕ್ಕೆ ವಿಘ್ನ

ಒಡಹುಟ್ಟಿದವನೆಂದು ಮಾಡುತ್ತಿಹ್ಯಳು

ಪೊಡವಿಯೊಳಗುಳ್ಳ ಜ್ಞಾನಿಗಳು ಈಗಲು ಆ

ಪಡೆದ ಜನನಿಕಿಂತ ಅಧಿಕವಾಗಿ

ಒಡಲಿಗೆ ಮೃಷ್ಟಾನ್ನ ಕೊಟ್ಟು ಪೋಷಿಸಿ ನಿತ್ಯ

ಸಡಗರದ ಸೇವೆ ಎನ್ನಿಂದ ಕೊಳ್ವದು

ತಡಿಯದು ಛಳಿಯೆಂದು ಹಿಮಪರ್ವತವ ಸೇರಿ

ಮಿಡುಕುವಾನಂತೆನ್ನ ಮಾಡಬಹುದೆ

ಕಡುಕರುಣಿ ನೀನೆಂದೂ ಪೊಂದಿದವಗೆ ಮುಂದೆ

ಬಡಿವಾರ ಕೊಡುವಂತೆ ಮಾಡಲೊಲ್ಲಿ

ದೃಢಶರಣರಿಗಿತ್ತದರಿಂದ ಬಾಧಿಲ್ಲಾ

ಕಡುಮೂರ್ಖ ನಾನೆಂದು ಬೋಧಿಸುವದೊ

ಮೃಡವಂದ್ಯ ಸಿರಿ ರಾಮಚಂದ್ರವಿಟ್ಠಲನಂಘ್ರಿ 

ಬಿಡದೆ ಪೊಗಳುವ ಶರಣ ಈ ಬಗೆ ತಿಳಿಯದೆನಗೆ ॥ 4 ॥ 


 ತ್ರಿವಿಡಿತಾಳ 


ಉಂಡುಂಡ ಪಾಪಕೆ ಎನ್ನನು ಬಾಧಿಪುದು

ತೋಂಡಗಧಿಕ ತಪಸು ಆಗಲೆಂಬ ಬಗೆಯೊ

ಹಿಂಡು ಮುಕ್ತರ ಮುಂದೆ ಮನ್ನಿಸುವರೆಂದು

ಪಂಡಿತಜನರಿಂದ ಘೋಷಿಸುವ ಸಾದೃಶವೂ

ಚಂಡವಿಕ್ರಮ ರಾಮಚಂದ್ರವಿಟ್ಠಲನಂಘ್ರಿ 

ಕಂಡು ಭಜಿಸುವ ಮಹಾಮಹಿಮೆಯು ತಿಳಿಯದೆನಗೆ ॥ 5 ॥ 


 ಅಟ್ಟತಾಳ 


ಏನಾದರು ಸರಿ ಪಾಪ ಎನಗಿಲ್ಲೆಂಬ -

ದಾನು ಮನಕೆ ತೋರುವದು ಗುರುವೆ

ಶ್ವಾನ ಬಹುಕಾಲ ಉಪವಾಸವಿದ್ದು ಕೊನೆಗೆ

ಏನು ಕದ್ದುಂಡರೂ ಪುಣ್ಯವಿಲ್ಲ

ಹೀನ ನಡತಿಯ ಕಂಡು ಕೊಲ್ಲದಿರುವರೆ

ಜಾನಕಿ ಶ್ರೀನಾಥ ಪಾದಾಬ್ಜಮಧುಪ

ಏನಾದರೊಂದು ಸಮ್ಮಂಧಾದ ಪುರುಷಗೆ

ಪಾಣಿಯಿಂದ ಕೊಟ್ಟು ಸಲಹಬೇಕಲ್ಲದೆ

ವಾಣಿಯಿಂದ ಉಪಚರ್ಯ ಮಾತುಗಳಾಡಿ

ಮೇಣು ಕರುಣವ ಮಾಡೆ ದಣಿಯರಲ್ಲ

ಜ್ಞಾನಿಶಿರೋಮಣಿ ಸ್ವಲ್ಪ ಕದ್ದಾಪತ್ತು

ಶ್ವಾನನಿಂದ ಪೇಳಲು ವಶವಲ್ಲವೊ

ಏನು ವುಂಡರೇನು ನಿನ್ನವರ ಪೊಂದಲು

ಹೀನ ಪಾಪದ ತಮ ಭಾನುಗೆದುರೆ

ಮೌನೀಶವಂದ್ಯ ರಾಮಚಂದ್ರವಿಟ್ಠಲನ್ನ 

ಧ್ಯಾನ ಮನದಿ ತೋರಿ ಸರಿಬಂದತೆರ ಮಾಡೊ ॥ 6 ॥ 


 ಆದಿತಾಳ 


ಉಣಿಸು ಉಪವಾಸದಲ್ಲೆಯಿರಿಸೊ ಮನ -

ಸಿನೊಳೀ ಅಹಂಕಾರದ ಮತ್ಸರ ಬಿಡಿಸೊ

ಅನುದಿನ ಹರಿದಾಸರ ಪಾದಾಬ್ಜದ

ಕಣಧೂಳಿಗೆ ಶಿರವು ನಮಿಸಲಿ

ಕ್ಷಣವಾದರು ಹರಿವಿಸ್ಮೃತಿ ಕೊಡದಲೆ

ಮನೆತನವೆಂಬ ದಯವಿರಲಿ

ಇನಿತು ಬಿನ್ನೈಸಿದೆ ಹ್ಯಾಗೆ ನೀ ಮಾಡಲು

ಕ್ಷೋಣಿಗೆ ಎನೆಸಪಕೀರ್ತಿ ನಿನ್ನದು

ವನಜಾಕ್ಷ ರಾಮಚಂದ್ರವಿಟ್ಠಲನ ದಾಸಾ -

ಗ್ರಣಿ ನೀ ಎನಗೆ ಚಿಂತಾಮಣಿ ॥ 7 ॥ 


 ಜತೆ 


ಸಮ್ಮಂಧವಾದ ಮೇಲೆ ನಿನಗೆನ್ನ ಚಿಂತೆ ತಪ್ಪದೊ

ಒಮ್ಮೆ ರಾಮಚಂದ್ರವಿಟ್ಠಲನ ಮೂರುತಿ ತೋರೊ ॥

********