..
kruti by ಬೇಲೂರು ವೈಕುಂಠ ದಾಸರು belur vaikunta dasaru
ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ
ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ
ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು
ನೆಲೆಯಾದುದಿಲ್ಲ ಜವ್ವನವೆಂಬುದೂ
ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು
ನೆಲೆಯಾಗಬಲ್ಲದೆ ಒಡಲು ನಿನಗೆ ಮರುಳೆ 1
ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ
ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ
ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ
ನೆಟ್ಟನೈದುವರು ನಿನಗೇನಹರು ಮರುಳೆ 2
ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ
ಏನಹರು ನಿನಗವರು ಮೃತವಾದ ಬಳಿಕಾ
ದೀನನಹೆ ಬಯಲಮಮತೆಗಳೆಂದು ತಿಳಿದುಕೊ
ನೀನೆತ್ತಲವರೆತ್ತಲಿಹರವರು ಮರುಳೆ 3
ಮಗನಾವ ತಂದೆಯಾವನು ಜೀವ ಜೀವರಿಗೆ
ಮಗನು ತಂದೆಯು ಕರ್ಮವಾಸನೆಗಳಾ
ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ
ಜಗದೊಳಾಡುವರು ನಿನಗೇನಹರು ಮರುಳೆ 4
ಅತಿಭಕ್ತನೆಂದು ವೈಕುಂಠ ವೇಲಾಪುರದ
ಪತಿ ಅರ್ಜುನಗೆ ನಿರೂಪಿಸಿದರ್ಥವ
ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ
ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ 5
***