ankita ಭೂಪತಿವಿಠಲ
ರಾಗ: ವಿಭಾಸ ತಾಳ: ಭಜನಠೇಕಾ
ಕರುಣದಿ ಪಿಡಿ ನಮ್ಮ ಕೈಯ್ಯಾ ಗುರುರಾಯಾ pa
ನಿನ್ನ ಹೊರತು ನಮಗೆ ಇನ್ನಾರು ಗತಿ ಇಲ್ಲಾ ಅ.ಪ
ಕರುಣಾ ಸಾಗರನೆಂಬ ಬಿರುದು ನಿನ್ನದು ಕೇಳಿ
ವರೆಗೆ ಹಚ್ಚಲು ನಾವು ಬಂದೆವಯ್ಯಾ
ಸರ್ವ ಪಾಪಗಳ ಸಾಕಾರ ಮೂರುತಿ ನಾವು
ಶರಣು ಬಂದೆವು ನಿನಗೆ ಕರುಣಾ ಸಮುದ್ರಾ 1
ಕಂಡ ಕಂಡದ್ದು ತಿಂದು ಕಂಡಲ್ಲಿ ತಿರುಗಾಡಿ
ಕಂಡವರ ಬೆನ್ಹತ್ತಿ ದಣಿಕೊಂಡೆವಯ್ಯಾ
ಇಂದು ತವ ಪಾದಕ್ಕೆ ಬಂದು ಬಿದ್ದಿರುವೆವು
ಅಪರಾಧವೆಣಿಸದೆಲೆ ಕೃಪೆಮಾಡು ತಂದೆ 2
ನಾನು ನನ್ನದು ಎಂಬ ಭ್ರಾಂತಿಯ ಬಿಡಿಸಯ್ಯಾ
ಮೌನದಿಂ ಸತ್ಕಾರ್ಯಗಳ ಮಾಡಿಸು
ಏನಾದರದು ಶ್ರೀಹರಿಯ ಪ್ರೇರಣೆ ಎನಿಸು
ಸುಜ್ಞಾನಿ ಜನರ ಸಂಗದೊಳೆನ್ನ ಇರಿಸಯ್ಯಾ 3
ಪಾಪಾದ್ರಿ ಸಂಭೇದನದೃಷ್ಟಿ ವಜ್ರ ನೀ
ಪಾಪ ಪರ್ವತ ಒಡೆದು ಪುಡಿ ಪುಡಿ ಮಾಡು
ಕೈ ಪಿಡಿದೆಮ್ಮನು ಮುಕ್ತಿ ಮಂಟಪಕೊಯ್ದು
ಭೂಪತಿವಿಠಲನ ಅಪರೋಕ್ಷ ಮಾಡಿಸು 4
***