ಶೇಷಾಚಲ ಮಂದಿರ-ಇಂದಿರೇಶ ಪ.
ಪೋಷಿಸೊ ನಿನ್ನಯ ಪಾದ ಸ್ಮರಣೆಯಿತ್ತು ಅ.ಪ
ಕರಣಕ್ರಿಯಕರ್ಮಂಗಳೆಲ್ಲವು ಜಡವು
ಕರಣಕ್ರಿಯ ಕರ್ಮ ನಿನ್ನ ನಿಯಮನವಿಹುದು
ನಿರುತ ಪರವಶನಾಗಿ ನಾ ಮಾಳ್ಪೆನೆಂಬ ಈ
ದುರಭಿಮಾನದಿ ನಾ ಭವಕೊಳಗಾದೆನೊ 1
ವಿಷಯಂಗಳೆಲ್ಲ e್ಞÁನಗೋಳಕದಿ ಬಂದು ಎನ್ನ
ವಿಷಮಗೊಳಿಸಿತು ಮನ ಅಭಿಮಾನದಿಂದಲಿ
ಹೃಷೀಕಪನೆ ಎನ್ನ ಮನವಿಷಮತೆಯ ಹರಿಸಿ
ಪೋಷಿಸೊ ನಿರುತ ಕೃಪಾಕರ ಮೂರುತೇ 2
ಈಷಣತ್ರಯ ದೋಷಕ್ಲೇಶದಿ ನೊಂದು ನಿಂದೆ
ದೋಷದೂರನೆ ನಿನ್ನ ವಿಸ್ಮರಣೆಯಿಂದಲಿ
ವಾಸುಕೀಶಯನ ನೀ ಭೂತಾವಾಸ ನೀನಾಗಿರೆ
ಮೋಸಹೋದೆನ್ನನು ಪೋಷಿಸಬೇಕಯ್ಯ 3
ಹಟದಿ ಕಪಟಾಚಾರದಿ ನಿಂದು ನಾ
ಕುಟಿಲ ಮನದಲಿ ನಿನ್ನ ಭಕುತನೆಂದೆನಿಸಿದೆ
ವಟಪತ್ರಶಾಯಿ ನೀ ಹಟ ಸಾಧನಕ್ಕೆ ಒಲಿಯೆ
ದಿಟಭಕುತಿಯ ಕೊಟ್ಟು ಕಡೆ ಹಾಯಿಸಯ್ಯ 4
ತನುಛಾಯೆ ಕ್ರಿಯೆಯು ತನ್ನ
ತನುವನಾಶ್ರೈಸಿದಂತೆ ನಾ ನಿನ್ನ ಪ್ರತಿಬಿಂಬನಾಗಿರಲು ಸದಾ
ಎನ್ನ ಕ್ರಿಯೆಗಳೆಲ್ಲಾ ನಿನ್ನ ಆಣತಿಯಂತಿರೆ
ಘನಮಹಿಮನೆ ನಿನ್ನಾಕ್ರಿಯವನರಿಯದೆ ಹೋದೆ5
ಪನ್ನಗಾಚಲನಿಲಯ ಆಪನ್ನರಕ್ಷಕ ನೀನಿರೆ
ಬನ್ನಬಡಲ್ಯಾಕಯ್ಯ ಅನ್ಯರನಾಶ್ರಯಿಸಿ
ಮನೋವಾಕ್ಕಾಯ ಕರ್ಮವನರ್ಪಿಸಲು
ಸನ್ಮತಿಯನೆ ಇತ್ತು ಸತತ ಸಲಹಯ್ಯ 6
ಸರ್ವಸತ್ತಾಪ್ರದನೆ ಸರ್ವಪ್ರವೃತ್ತಿಪ್ರದನೆ
ಸರ್ವರಂತರ್ಯಾಮಿ ಮಮಕುಲಸ್ವಾಮಿ
ಉರಗಾದ್ರಿವಾಸವಿಠಲ ನಿನ್ನಯ ದಿವ್ಯ
ಚರಣಸ್ಮರಣೆಯನಿತ್ತು ಕಾಯೊ ಕಮಲಾಕಾಂತ7
****