..
Audio by Mrs. Nandini Sripadಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ದೇಹ ಅನಿತ್ಯ, ಅಸ್ಥಿರ. ಸಂಸಾರ ಅಸಾರವಾದುದು. ಆದ್ದರಿಂದ ಸಂಸಾರದಲ್ಲಿ ಮುಳುಗದೆ ವೈರಾಗ್ಯ ಪೊಂದು. ನಿರಂತರ ಪರೇಶನನ್ನು ಭಜಿಸು.)
ರಾಗ ಬೇಹಾಗ್
ಧ್ರುವತಾಳ
ಈಗಲೊ ಇನ್ನಾಗಲೊ ಈ ಗಾತ್ರ ಸ್ಥಿರವಲ್ಲ
ಭೋಗದಾಶೆಯ ಬಿಡು ಜಾಗು ಮಾಡದಲೆ
ಭಾಗವತರ ಸಂಯೋಗದಿಂದಲಿ ವೀ -
ರಾಗ ನೀನಾಗು ಬಲು ಜಾಗರತನದಲಿ
ಭಾಗದೆಯರ ಗೆಲ್ಲು ತ್ಯಾಗಿಯಾಗು ಸರ್ವದಲಿ
ಬಾಗಿ ಜ್ಞಾನಿಗಳಿಗೆರಗು ದಾಸನೆನಿಸೀ
ತಾಗುಣದಲಿ ಬ್ಯಾಸಿಗೆ ಬಿಸಲೊಳಗೆ
ಪೋಗುವನು ಮನುಜ ತಂಪಾಗುವನೆಂದು ಒಂದು -
ನಾಗನ ಫಣದ ಕೆಳಗೆ ಕುಳಿತಂತೆ
ಆಗುವದು ಭವಸಾಗರದ ಸುಖವೊ
ಹೀಗೆಂದು ತಿಳಿ ಜನ್ಮರೋಗ ಹಿಂದುಗಳಿಯೋ
ನೀಗು ಸತ್ಕರ್ಮವು ಚನ್ನಾಗಿ ಸಾಧನ ಬಯಸಿ
ಭಾಗೀರಥಿ ಜನಕ ವಿಜಯವಿಟ್ಠಲನ್ನ ಲೇ -
ಸಾಗಿ ಕಾಣುವದು ಇಂಪಾಗಿ ಸಂಚರಿಸುತ್ತ ॥ 1 ॥
ಮಟ್ಟತಾಳ
ನಾಚಿಕಿಲ್ಲದ ಮನವೆ ಯೋಚಿಸಿ ನೀ ನೋಡು
ಪ್ರಾಚೀನಕರ್ಮ ಆಚರಿಸದೆ ಬಿಡದು
ವಾಚದಲ್ಲಿ ಕೇಳು ನೀಚಮಾರ್ಗವೆ ಕಳಿಯೊ
ಈ ಚರಾಚರದಲ್ಲಿ ಯೋಚನೆ ಪರನಾಗಿ
ಪಾಚಿ ತೆರನಾದ ಪೋಚೆ ಸಂಸಾರದಾ -
ಲೋಚನೆ ತೊರೆವದು ಸೂಚಿಸುವೆನು ನಿನಗೆ
ಕೀಚಕಾರಿ ಪ್ರೀಯ ವಿಜಯವಿಟ್ಠಲ ಭವ
ಮೋಚಕನೆಂದು ಶ್ರೀಚರಣವ ನೆನಿಸೊ ॥ 2 ॥
ತ್ರಿವಿಡಿತಾಳ
ಚಂಚಲ ಮನವೆ ನಿನಗೆಷ್ಟು ಪೇಳಿದರೇನು
ವಂಚನೆ ಬಿಡದಲೆ ಚರಿಸುತಿಪ್ಪೆ
ಹಂಚು ನೋಡಿಕೊಂಡು ಮೊಗವ ತಿರುಹಿದಂತೆ
ಕಿಂಚಿತ್ತುವಾದರು ಸುಖ ಬಪ್ಪುದೇ
ಸಂಚಗಾರಕೆ ಭಕುತಿ ಸಂಪಾದಿಸು ಹುಲ್ಲು -
ಗುಂಚೆಯಿಂದಲಿ ಮೋಕ್ಷವಾಗುವದೇ
ಮಿಂಚುವ ಶರೀರ ವಿಜಯವಿಟ್ಠಲ ಹರಿಯ
ಪಂಚಭೇದವೆ ತಿಳಿದು ಕೊಂಡಾಡೆ ಬರುವಾ ॥ 3 ॥
ಅಟ್ಟತಾಳ
ಸಂಕಟವಾದ ಸಂಸಾರದೊಳು ಬಿದ್ದು
ಪಂಕ ಮತಿಯಿಂದ ನೋಯದಿರು ಮನವೆ
ಲೆಂಕಾಲಂಕಾನಾಗು ಶ್ರವಣವ ಲಾಲಿಸಿ
ಶಿಂಕಳ ನೀಡಾಡು ಶುದ್ದ ನಡತಿಯಿಂದ
ಶಂಕೆಯ ಬಿಡು ಬಿಡು ಹೀನನಾದರೆ ನಿನ್ನ
ಕೊಂಕತಿದ್ದರು ಕಾಣೊ ಕಲುಷವೆ ಬಡುವದು
ಕುಂಕುಮಾಂಕಿತ ಭೂಷ ವಿಜಯವಿಟ್ಠಲನ
ಅಂಕಿತದವನಾಗಿ ಆನಂದವಾಗೊ ॥ 4 ॥
ಆದಿತಾಳ
ಮಾಯಾದೊಳಗೆ ಬಿದ್ದು ಮರುಳಾಗದಿರು ನಿನ್ನ
ಬಾಯ ಮುಚ್ಚದಲೆ ಶ್ರೀ ಹರಿಯ ನೆನೆಸುವದು
ಕಾಯದಲ್ಲಿದ್ದ ಕರ್ಮ ನಾಶನವಾಗಿ
ನ್ಯಾಯಲೋಕದಲಿ ಸಂಚರಿಸೋದು ಸತತದಲ್ಲಿ
ಮಾಯಾರಮಣ ನಮ್ಮ ವಿಜಯವಿಟ್ಠಲರೇಯ
ತಾಯಿ ತಂದೆ ಸಾಕುವನೆಂದು ನಂಬು ನಮಿಸಿ ॥ 5 ॥
ಜತೆ
ಕಾಲ ನಿನ್ನದಲ್ಲ ವ್ಯಾಳಿವ್ಯಾಳಿಗೆ ಸಿರಿ -
ಲೋಲ ವಿಜಯವಿಟ್ಠಲನ್ನ ಪೂಜಿಸು ಭಕುತಿಲಿ ॥
***