Showing posts with label ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಸದ್ಗುರುವಿನಾ gurumahipati. Show all posts
Showing posts with label ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಸದ್ಗುರುವಿನಾ gurumahipati. Show all posts

Wednesday, 1 September 2021

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಸದ್ಗುರುವಿನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ | ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ 


ಶರಣು ಶರಣು ಗುರುವೇ ಶರಣರ ಸುರತರುವೆ | ಶರಣರ ಹೃದಯದೊಳಗಿರುವೇ ಕೋಲೆ | ಅನುದಿನ | ಕರುಣದ ಮಳೆಯಾಗರೆವುತ ಕೋಲೆ 1 

ಕರಣ ತೃಯದಿನಂಬಿ ಸ್ಮರಣೆಯ ಮಾಡಲು | ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ | ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ ಕರಣದೊಳಗೆ ಬಯಕೆ ನಿಲದಂತೆ ಕೋಲೆ 2 

ಚರಣ ಸರಸಿಜಕ ಶರಣ ಹೋಗಲು ಜನ್ಮ | ಮರಣದ ಭಯಕಂಜಿ ಜನರು ಕೋಲೆ | ಮರಣದ ಭಯಕಂಜಿ ಜನರು ಬರೆ ಕಂಡು | ಕರುಣಾ ಕಟಾಕ್ಷದಿ ನೋಡುವ ಕೋಲೆ 3 

ಕರದಿಂದ ಪಿಡಿದವನ ತರಣೋಪಾಯದ ಬೋಧಾ | ಭರದಿಂದ ಬೀರುವೆ ಮನಸಿಗೆ ಕೋಲೆ | ಭರದಿಂದ ಬೀರುವೆ ಮನಸಿಗೆ ಭವದೊಳು | ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ 4 

ಜ್ಞಾನವೆಂಬಂಜನೆ ಸೂನಯನಕ ಊಡಿ | ಹೀನ ಅಜ್ಞಾನವ ಹರಿಸೂವ ಕೋಲೆ ಹೀನ ಅಜ್ಞಾನವ ಹರಿಸುವೆ ಬೇಗದಿ | ಸ್ವಾನುಭವದ ಸುಖ ಬೀರುವೆ ಕೋಲೆ 5 

ನಾನಾ ಹಂಬಲವನ ಏನೆನುಳಿಯದ್ಹಾಂಗ | ತಾನಿದ್ದ ಬದಿಯಲಿ ಇಹಪರ ಕೋಲೆ | ತಾನಿದ್ದ ಬದಿಯಲಿ ಇಹಪರ ಸುಖಗಳ | ನೀನಿದಿರಿಡುತಿಹೆ ಸದಮಲ ಕೋಲೆ 6 

ಎಂಟು ಸಿದ್ಧಿಗಳು ಉಂಟಾಗಿ ಬಂದರೆ | ವೆಂಟಣಿಸಿ ಅದರ ಕಡೆಗೇ ಕೋಲೆ | ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ | ಬಂಟನೆಯ ಮಹಿಮೆಯ ಜಗದೊಳು ಕೋಲೆ 7 

ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು | ಎನ್ನಳವಲ್ಲಾ ಜಗಕಲ್ಲಾ ಕೋಲೆ | ಎನ್ನಳವಲ್ಲಾ ಜಗಕಲ್ಲಾ ಸದ್ಗುರು | ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ 8 

ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ | ಸಹಕಾರನಾಗಿ ಭಕ್ತರ್ಗೆ ಕೋಲೆ | ಸಹಕಾರನಾಗಿ ಭಕ್ತರ್ಗೆ ಅನವರತ | ಅಹಿತರವಂಡಣೆ ಮಾಡುತ ಕೋಲೆ 9 

ಮುನ್ನಿನಪರಾಧವ ಇನ್ನೇನು ನೋಡದೇ | ಎನ್ನನುದ್ಧರಿಸು ದಯದಿಂದ ಕೋಲೆ | ಎನ್ನನುದ್ಧರಿಸು ದಯದಿಂದ ಮತಿಕೊಟ್ಟು | ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ 10 

ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು | ಕುಂದ ನೋಡದೇ ಸಲಹಯ್ಯಾ ಕೋಲೆ ಕುಂದ ನೋಡದೇ ಸಲಹಯ್ಯಾ ಮಹಿಪತಿ | ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ 11

***