Showing posts with label ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು mahipati. Show all posts
Showing posts with label ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು mahipati. Show all posts

Wednesday, 11 December 2019

ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ankita mahipati

ಪೂರ್ವಿ ರಾಗ ದೀಪಚಂದಿ ತಾಳ

ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ||ಧ್ರುವ||

ಎನ್ನೊಳು ಗುರು ತನ್ನ ಮರ್ಮವ ತೋರಿದ ಇನ್ನೇನಿನ್ನೇನು ||೧||

ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು ||೨||

ಎನ್ನೊಳು ಘನ ಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು ||೩||

ನಾನು ನಾನೆಂಬುದು ನೆಲೆಯು ತಾ ತಿಳಿಯಿತು ಇನ್ನೇನಿನ್ನೇನು||೪||

ಏನೆಂದು ತಿಳಿಯದ ಅನುಮಾನಗಳೆಯಿತು ಇನ್ನೇನಿನ್ನೇನು ||೫||

ಪರಮತತ್ವದ ಗತಿ ನೆಲೆನಿಭ ತೋರಿತು ಇನ್ನೇನಿನ್ನೇನು ||೬||

ಎನ್ನೊಳಾತ್ಮ ಖೂನ ಕುರುಹುವು ತಿಳಿಯಿತು ಇನ್ನೇನಿನ್ನೇನು ||೭||

ಕನಸುಮನಸು ಎಲ್ಲ ನಿನ್ನ ಸೇವ್ಯಾಯಿತು ಇನ್ನೇನಿನ್ನೇನು ||೮|

ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು ||೯||

ಅರಹು ಮರಹಿನ ಇರವು ಒಳಿತಾಗಿ ತಿಳಿಯಿತು ಇನ್ನೇನಿನ್ನೇನು ||೧೦||

ಭಾವದ ಬಯಲಾಟ ನಿಜವಾಗಿದೋರಿತು ಇನ್ನೇನಿನ್ನೇನು ||೧೧||

ಜೀವಶಿವದ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು ||೧೨||

ಅಯವುದಾಯವು ಸಾಹ್ಯವುದೋರಿತು ಇನ್ನೇನಿನ್ನೇನು ||೧೩||

ಜೀವನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು ||೧೪||

ಜನ್ಮಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು ||೧೫||

ಸಂದೇಹಸಂಕಲ್ಪಸೂತ್ರವು ಹರಿಯಿತು ಇನ್ನೇನಿನ್ನೇನು ||೧೬||

ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು ||೧೭||

ಸುಷುಮ್ನನಾಳದ ಸೂಕ್ಷ್ಮವುದೋರಿತು ಇನ್ನೇನಿನ್ನೇನು ||೧೮||

ಇಮ್ಮನವಿದ್ದದ್ದು ಒಮ್ಮನವಾಯಿತು ಇನ್ನೇನಿನ್ನೇನು ||೧೯||

ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು ||೨೦||

ಸದ್ಗುರು ಕೃಪೆಯಾದ ಸಾಧನವಾಯಿತು ಇನ್ನೇನಿನ್ನೇನು ||೨೧||

ಭವಕೆ ಗುರಿಯಾಗುವ ಬಾಧೆಯು ತಿಳಿಯಿತು ಇನ್ನೇನಿನ್ನೇನು ||೨೨||

ಅಂತರಾತ್ಮದ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು ||೨೩||

ಮಹಿಪತಿ ಜೀವನ ಪಾವನವಾಯಿತು ಇನ್ನೇನಿನ್ನೇನು ||೨೪||

ಎನ್ನೊಳು ಭಾಸ್ಕರ ಗುರುತಾನೆಯಾದನು ಇನ್ನೇನಿನ್ನೇನು ||೨೫||
**********