ankita ನರಸಿಂಹ
ರಾಗ: ಕೇದಾರ ತಾಳ: ಏಕ
ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ ಪ
ಸಹಜ ಕೃಪಾಸಾಗರ ಗುರು-
ಸಾರ್ವಭೌಮ ರಾಘವೇಂದ್ರರ ಅ.ಪ
ತುರುಗಳನ್ನು ಕಾಯುತಿದ್ದ
ತರಳ ವೆಂಕಣ್ಣಗೊಲಿದು
ಸ್ಮರಣೆ ಮಾತ್ರದಿಂದ ದಿವಾ-
ನ್ಗಿರಿಯ ಕೊಡಿಸಿ ಸಲಿಹಿದಂಥ 1
ಕ್ಷಾಮ ಡಾಮರಗಳಿಗೆ ಹೆದರಿ
ಭೂಮಿಪ ಶರಣೆನ್ನಲವನ
ಸೀಮೆಯನ್ನು ದ್ವಾದಶಾಬ್ಧ
ಕ್ಷೇಮದಿಂದ ಸಲಹಿದಂಥ 2
ಭೃತ್ಯನ ಸದ್ಭಕ್ತಿಗೊಲಿದು
ಮೃತ್ತಿಕೆಯನ್ನಿತ್ತು ಗೃ-
ಹಸ್ಥನ ಸಂತಾನ ಕಾಯ್ದು
ಉತ್ತಮ ಕನ್ಯೆ ಕೊಡಿಸಿದಂಥ 3
ಭ್ರಷ್ಟ ದ್ವಿಜನ ಶಂಖೋದಕದಿ
ಶ್ರೇಷ್ಠನೆನಿಸಿ ಭ್ರಮಿಸಿ ಬಂದ
ಶಿಷ್ಠ ಭೂಸುರರಿಗೆ ಅವ-
ರಿಷ್ಟದೂಟ ಉಣಿಸಿದಂಥ 4
ಸೇವಕನ ಸತಿಯು ಹೆರಿಗೆ
ನೋವಿನಿಂದ ಬಳಲುತಿರೆ ಕೃ-
ಪಾವನದಿ ಮಳಲ ಮಾರ್ಗದಿ
ಜೀವನವನು ತೋರಿ ಕಾಯ್ದ 5
ವ್ಯಾಸರಾಯ ಸಲಹೊ ಎಂದು
ದಾಸ ಕನಕ ತಂದು ಕೊಟ್ಟ
ಸಾಸಿವೆಯ ಸ್ವೀಕರಿಸಿ
ಆಶು ಮೋಕ್ಷ ಕರುಣಿಸಿದ 6
ಶಿಷ್ಯರಾದ ಅಪ್ಪಣಾ-
ಚಾರ್ಯರ ಸ್ತೋತ್ರಕ್ಕೆ ಮೆಚ್ಚಿ
ಭವ್ಯ ಬೃಂದಾವನದ ಮಧ್ಯೆ
ದಿವ್ಯ ರೂಪ ತೋರಿದಂಥ 7
ಮೇಜರ್ ಮನ್ರೋ ಎಂಬ ಆಂ-
ಗ್ರೇಜಿಗೊಲಿದು ಬೃಂದಾವನದಿ
ರಾಜಿಸುವ ರೂಪ ತೋರಿ
ಪೂಜನೀಯನೆನಿಸಿದಂಥ 8
ವರದ ನಾರಸಿಂಹಪ್ರೀಯ
ತರಳ ಪ್ರಹ್ಲಾದರಾಯ
ಧರೆಯ ಪಾಮರರ ಪೊರೆಯೆ
ಗುರುವಾರೇಣ್ಯರೆನಿಸಿ ಮೆರೆದ 9
***