..
kruti by ವರದೇಶ ವಿಠಲರು varadesha vittala dasaru
ಯಾಚಿಸುವೆನು ನಿನ್ನನಿದಕೆ ಕರುಣಸಾಗರ
ಖೇಚರೇಶ ಗಮನ ಜಗತ್ಪಾಲ ಪ್ರಭುವರ ಪ
ದೈನ್ಯರಾಹಿತ್ಯ ರಹಿತ ಜಾಡ್ಯರಹಿತವು
ನಿನ್ನ ಪಾದ ಕಮಲರತಿ ಸದಾವಕಾಲವು 1
ಪ್ರಭುವೆ ನಿನ್ನ ಭೃತ್ಯನಾನಾದಿಕಾಲದಿ
ಅಭಯವಿತ್ತು ಪಾಲಿಸೆನ್ನ ಹೇ ದಯಾನಿಧೆ 2
ತುಷ್ಟನಾದರೇನುರುಷ್ಟನಾರೇನೊಲೊ
ಇಷ್ಟದೈವ ನಿನ್ನ ಹೊರತು ಗತಿಯ ಇಲ್ಲೆಲೊ 3
ತುಷ್ಟನಾದ ಬಳಿಕ ನೀನೆ ಹೇ ಕೃಪಾಕರ
ಬಿಟ್ಟುನಿನ್ನ ಭಜೀಸಲ್ಯಾಕೆ ಯಿತರಕಾಯ್ವರ 4
ನೀನೆ ರೋಷವನ್ನು ತಾಳೆ ಸುಜನಬಂಧುವೆ
ದೀನನನ್ನು ಕಾಯ್ವರಾರು ನೀನೆಯಲ್ಲವೆ 5
ದೋಷ ಕ್ಷಮಿಸುವಲ್ಲಿ ನಿನ್ನ ಪೋಲ್ವ ಅರಸರು
ದೇಶಸರ್ವಗಳಲಿ ಪುಡುಕಲಲ್ಲೆ ದೊರಕರು 6
ಎನ್ನಸರಿ ಕೃತಘ್ನ ವಂಚನೀಯ ಮಾಳ್ಪನ
ವನ್ನಜಾಭವಾಂಡದೋಳಾವಲ್ಲಿ ಕಾಣೆನಾ 7
ದೀನ ದಾಸ ನಿನಗೆ ನಾನು ಹೇ ಜಗತ್ಪತೆ
ಮಾಣದೆಲ್ಲಿರಲ್ಲಿ ತೋರಿ ಪ್ರೇಮ ಸಾಮ್ಯತೆ 8
ಎನ್ನ ವಿಷಯ ಭಯವು ನಿನಗೆ ಲಕ್ಷವಾವುದು
ಮನ್ನಿಸೆನ್ನ ಪೊರೆವ ಸರ್ವಭಾರ ನಿನ್ನದು 9
ಈಶಪೂರ್ಣಕಾಯ ನಿನಗಸಾಧ್ಯವಾವುದು
ಆಶೆಯನ್ನದಾವಘನವು ನಿನಗೆ ತೋರ್ಪುದು 10
ದಾಸನಾಶೆಪೂರ್ತಿಸಲ್ಕಾಲಸ್ಯವುಚಿತವೋ?
ಅಶಿಶಿಸುವನು ದಾಶಗೈವುದೇನು ನೀತವೋ? 11
ಲೋಕನಾಥ ಕರುಣ ಪೂರ್ಣನೇ ಪರಾತ್ಪರ
ಯಾಕೆ ಯೊನ್ನೊಳಿನಿತು ನೀನು ನಿರ್ದಯಾಪರ 12
ಗರವತಾಯಿತನನುಜಗೀಯೆ ಅವುದೋಗತಿ
ತರುಳನಲ್ಲಿ ಕರುಣಿಸುವದು ಕೃಷ್ಣ ಮೂರುತಿ 13
ನೀನೆ, ಓರ್ವ ಜಗತ್ರಾತ ದಾತ ಜ್ಞಾತನು
ನಿನ್ನ ವಿನಹಾಭಿಷ್ಟಫಲದ ಕರ್ತೃ ಆವನು 14
ಲಕ್ಷ್ಮಿಪತಿಯ ಪೋಲ್ಪೋದಾರ ಸುಗುಣ ಶೀಲನ
ಈಕ್ಷಿಸಲ್ಕೆ ಜಗದೊಳಾರನೆಲ್ಲಿ ಕಾಣೆನಾ 15
ನಿನ್ನ ಔದಾರ್ಯ ಸರ್ವರಲ್ಲಿ ಸಾಮ್ಯವು
ಎನ್ನೊಳಿನಿತ್ತು ನಿನ್ನದ್ಯಾಕೆ ಕಾರ್ಪಣ್ಯವು 16
ಆರ್ತಬಂಧುವೆಂದು ನಿನಗೆ ಶರಣುಬಂದೆನು
ಸಾರ್ಥಕವನು ಮಾಡುವಿಯೊ ಜರಿದೆ ಬಿರುದನು 17
ದೀನ ಬಂಧು ಕರುಣಸಿಂಧು ಸುಹೃದ್ಬಾಂಧವ
ಹೀನ ಭವಾರ್ಣವದಿ ಮಗ್ನನಿರುವೆ ಭೂಧವ 18
ತಾರಿಸೈ ಭವಾಬ್ದಿಯಿಂದ ಇಂದಿರಾವರ
ಸೂರಿಜನರ ಸಂಗವೆನ್ನಗೀಯೋಗಿರಿಧರ19
ಶ್ರೀನೃಸಿಂಹ ಸತತ ನೀನು ಸದಯ ಮೂರುತಿ
ದೀನ ನನ್ನೊಳ್ಯಾಕೆ ನಿರ್ದಯವ ತೋರುತಿ 20
ಸಾಧುಗಳು ನಿರ್ಗುಣಿಗಳಲ್ಲಿ ದಯವÀ ಮಾಳ್ಪರು
ಸಾದರದಲಿ ಸರ್ವರಲ್ಲಿ ಸದಯರಿಪ್ಪರು 21
ಧನ್ಯಜನಕೆ ನಿನ್ನನೀವುದೇನು ಅಚ್ಚರ
ದ್ಯೆನ್ಯ ಬಡುವನನ್ನು ಪಾಲಿಸುವದು ಪರತರ 22
ಚಂದ್ರಚಾಂಡಾಲಗೃಹದ ಮೇಲೆಯಾದರು
ಚಂದ್ರಿಕೆಯ ಪ್ರಭೆಯ ಹರಹದಿಹನೆ ಸುರತರು 23
ಈತೆರ ಶ್ರೀ ಪತಿಯೆ ಎನಗೆ ಪ್ರೀತನಾಗೆಲೋ
ನೀತವಾಗಿ ಕರುಣದಿಂದ ಕರವಪಿಡಿಯಲೊ 24
ಪುನಃ ಪುನಃ ನಿನ್ನನಿದನೆ ಬೇಡಿಕೊಂಬೆನಾ
ಮನದೊಳು ಪ್ರಸನ್ನನಾಗು ಜನಕಜಾರಮಣ25
ಪಂಚರಾತ್ರಾಗಮೋಕ್ತ ಈಸ್ತುತಿಯನು
ಪಂಚವದನ ವಿನುತ ಶ್ರೀ ರಾಮಚಂದ್ರನು 26
ಮುದದಿ ಮನಸಿನೊಳಗೆ ತಾನೆವದಗಿ ಪೇಳಿದ
ಅದನೆ ಶ್ರೀವರದೇಶ ವಿಠಲ ನುಡಿಸಿ ಬರೆಸಿದ 27
***