Showing posts with label ಇಡಿ ಕುಂಬಳದಕಾಯಿ ಗೃಹದೊಳಗೆ ತರಬ್ಯಾಡ others traditional belief. Show all posts
Showing posts with label ಇಡಿ ಕುಂಬಳದಕಾಯಿ ಗೃಹದೊಳಗೆ ತರಬ್ಯಾಡ others traditional belief. Show all posts

Friday, 19 February 2021

ಇಡಿ ಕುಂಬಳದಕಾಯಿ ಗೃಹದೊಳಗೆ ತರಬ್ಯಾಡ others traditional belief

traditional belief
ಪೂರ್ವಜರಿಂದ ಬಳುವಳಿಯಾಗಿ ಬಂದ ನೂರೆಂಟು ರೀತಿ-ರಿವಾಜುಗಳನ್ನು ಇಲ್ಲಿ ಕೇಳಿ...ಇವುಗಳಲ್ಲಿ ಯಾವುದನ್ನು ನಂಬುತ್ತೀರೋ, ಯಾವುದನ್ನು ಬಿಡುತ್ತೀರೋ ನಿಮಗೇ ಬಿಟ್ಟಿದ್ದು.   


ಇಡಿ ಕುಂಬಳದಕಾಯಿ ಗೃಹದೊಳಗೆ ತರಬ್ಯಾಡ 
ಮನೆಯೊಳಗೆ ಉಗುರ ತೆಗಿ-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧ ||

ಮಧ್ಯಾಹ್ನ ಮೇಲೆ ತುಳಸಿಯ ಕೊಯ್-ಬ್ಯಾಡ
ಹೊತ್ತ್-ಮುಳ್ಗದ್ ಮ್ಯಾಲೇ ಗುಡಿಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೨ ||

ಉಪ್ಪು, ಮೊಸರುಗಳ ಕಡ ಕೊಡುವದೇ ಬ್ಯಾಡ
ಬಿಸಿ-ಅನ್ನಕೆಂದೂ ಮೊಸರ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೩ ||

ಮನೆ ಬಾಗ್ಲು ಹಾಕ್ವಾಗ ಚಿಲಕ ಶಬ್ದವು ಬ್ಯಾಡ
ಊಟ ಮಾಡ್ವಾಗ ಏಳ್ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೪ ||

ಸೋಮವಾರದ ದಿನದಿ ತಲೆಗೆಣ್ಣೆ ಹಾಕ್-ಬ್ಯಾಡ
ಒಂಟಿ ಕಾಲಲ್ಲಿ ನಿಲಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೫ ||

ಮಂಗ್ಳಾರ ತವರಿಂದ ಮಗ್ಳು ಮನಿಗೆ ಹೋಪ್ದ್-ಬ್ಯಾಡ
ಸೊಸೆ ಶುಕ್ರವಾರ ಕಳ್ಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೬ ||

ತಲೆ-ಕೂದಲೆಂದೂ ಒಲೆ-ಬೆಂಕಿಗ್ ಹಾಕ್ಬ್ಯಾಡ
ಹೊಸ್ತಿಲನು ಮೆಟ್ಟುತ ದಾಟ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೭ ||

ಮನೆ ಬಿಟ್ಟು ಹೊರಟಾಗ ಕಸ ಗುಡ್ಸುವದು ಬ್ಯಾಡ
ಗೋಡೆ ಮೇಲ್ ಕಾಲ್ಕೊಟ್ಟು ಮಲಗ್ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೮ ||

ರಾತ್ರಿಯ ಹೊತ್ತೆಂದೂ ಬಟ್ಟೆ ಒಗೆಯಲು-ಬ್ಯಾಡ
ಅಕ್ಕಿ ನೀರಿಗೆ ಹಾಕಿ ತೊಳಿ-ಬ್ಯಾಡ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೯ ||

ಒಂದು ಕಾಯಿಯ ನೀರ ಮೂರ್-ಮಕ್ಳಿಗ್ ಕುಡ್ಸ್-ಬ್ಯಾಡ
ಒಡಕು ಬಳೆಗಳನು ಧರಿಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೦ ||

ಮಲಗ್-ಕೊಂಡ ಚಾಪೆಯ ಮಡಿಸದೇ ಬಿಡಬ್ಯಾಡ
ಉಗುರು ಕಚ್ಚುವದ ಮಾಡ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೧ ||

ಅಣ್ಣ-ತಮ್ಮ ಒಂದೇ ದಿನ ಚೌರ ಮಾಡ್-ಬ್ಯಾಡ
ಕತ್ತರಿ, ಚೂರಿಗಳು ಕೈಗ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೨ ||

ಹುಟ್ಟಿದ ದಿನದಂದು ಮುಂಜಿ ಮಾಡ್ವದು ಬ್ಯಾಡ
ಒಂದೇ ಬಾಳೆಲೆಯ ತರಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೩ ||

ಹಿಡಿ-ಕಟ್ಟು ಮೇಲ್ಮುಖವ ಮಾಡಿ ನಿಲ್ಲಿಸಬ್ಯಾಡ
ಉಂಡ್ ಕೈ ಎಂದೂ ಒಣಗ್ಸ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ  || ೧೪ ||

ಸತ್ತವರ ಮೀಯಿಸಲು ಹಾಕುವದ ಮರೆ-ಬ್ಯಾಡ
ಹುಣ್ಮೆ-ಅಮವಾಸ್ಯೆಗೆ [ಗದ್ದೆ]ಹೂಡ್-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ  || ೧೫ ||

ಮುಸ್ಸಂಜೆ ಹೊತ್ತಿನಲಿ ಮಲಗಲು ಹೋಗ್-ಬ್ಯಾಡ 
ಉದ್ಧಾರವಾಗದು ನಿನ-ಪಾಡು ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೬ ||

ನೀರು ಕಾಲಿಗೆ ಹಾಕ್ತ(ಹಾಕುತ) ಮಡು-ನೆನೆಸ ಮರೆಬ್ಯಾಡ
ಮರೆತರೆ ಶನಿ ಕಾಟ ತಪ್ಪದಿರದು ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೭ ||

ಕೇಳು ನೀ ಹೊಸ್ತಿಲಿನ ಮೇಲೆ ಕೂಡಲು-ಬ್ಯಾಡ 
ನರಸಿಂಹ ಹಿರಣ್ಯನ ಸೀಳಿರುತಿಹ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೮ ||

ಒಂದ್ ಚಪ್ಲಿ ಹಾಕ್ಕೊಂಡು ಏಳ್-ಹೆಜ್ಜೆ ನಡಿ-ಬ್ಯಾಡ
ಸಾವ ನಿಮ್ಮನೆಗೆ ತರ-ಬ್ಯಾಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೧೯ || 

ಉಂಡಾದ ಮೇಲೆಂಟು ಹೆಜ್ಜೆ ಇಡದಿರ-ಬ್ಯಾಡ  
ಯಮ ಕಾಯುತಿರುವ ಸರಿ ನೋಡ ... ನನ ಕಂದ
ಪೂರ್ವಜರ ಮಾತಿದು ಮರಿಬ್ಯಾಡ || ೨೦ ||

ಹೀಗುಂಟು ನೂರೆಂಟು ನಮ್ಮ "ಬೇಕು-ಬ್ಯಾಡ"
ತಿಳಿದು ನೋಡುವದ ಬಿಡಬ್ಯಾಡ ... ನನ ಕಂದ
ನಂಬುವದೋ-ಬಿಡುವದೋ ನೀ ನೋಡ || ೨೧ ||
*********