ಶ್ರೀವಿಜಯದಾಸಾರ್ಯ ವಿರಚಿತ ಶ್ರೀಹರಿನಾಮ ಪ್ರಶಂಸನಾ ಸುಳಾದಿ
(ಸಕಲೇಂದ್ರಿಯಗಳಿಂದಲೂ ಶ್ರೀಹರಿಯ ಸೇವೆಗೈದು, ಶ್ರೀಹರಿ ನಾಮಾಮೃತವನ್ನು ಸವಿ.)
ರಾಗ ಶಂಕರಾಭರಣ
ಧ್ರುವತಾಳ
ಮನವೆ ನಿನಗೆ ಸಾಧನವೆ ತೋರುವೆನು ಯಾ -
ತನೆಯಾಗದಂತೆ ಯಮನ ಪುರದಲ್ಲಿ
ಅನುದಿನದಲಿ ಮಾತನು ಮೀರದಲೆ ಈ
ತನುವ ಪಾಲಿಸುವದು ಎನಗೊಲಿದು
ದಿನ ರಾತ್ರಿಯೊಳಗೊಂದು ಕ್ಷಣವಾದರೂ ನಾರಾ -
ಯಣನ ಚರಣದ ಸ್ಮರಣೆಯನೆಸಗಿ
ಗಣನೆ ಕಾಣದೆ ಬಂದ ಜನುಮ ಜನುಮದ ಪಾಪ
ಗಣವು ಪೋಗೋದು ಚೇತನ ಉಳ್ಳಾಗ
ಘನಪುರುಷ ಯಜ್ಞಾಂಗ ವಿಜಯವಿಟ್ಠಲನ್ನ
ನೆನಹು ಬಾಹದಕೆ ಸಜ್ಜನರ ಒಡನಾಡು ॥ 1 ॥
ಮಟ್ಟತಾಳ
ತಿಳಿದಾದರೊಮ್ಮೆ ತಿಳಿಯದಾದರೊಮ್ಮೆ
ಇಳಿಯೇಶನ ನಾಮಾವಳಿಗಳು ಕೊನೆ -
ನಾಲಿಗೆಯಲಿ ನೆನದರೆ ಹಲವು ಜನ್ಮದಲ್ಲಿದ್ದ
ಹೊಲೆ ಪಾಪಗಳೆಲ್ಲ ಅಳಿವದು ನಿಶ್ಚಯವೊ ಉಳಿಯವು ಎಳ್ಳಿನಿತು
ಕಾಲ ಕಾಲಕೆ ಭರ್ತ ವಿಜಯವಿಟ್ಠಲನಿಗೆ
ತೊಳಲುವದು ನಿತ್ಯ ಸಲೆ ಸಲಹು ಎಂದು ॥ 2 ॥
ತ್ರಿವಿಡಿತಾಳ
ಪದದ್ವಯ ನೆನಸು ಪುಣ್ಯಕ್ಷೇತ್ರಂಗಳ ಮೆಟ್ಟಿ
ಉದರ ನೆನಸು ಹರಿಪ್ರಸಾದದಲ್ಲಿ
ಸದಾ ಕರಗಳ ನೆನಸು ವಿದಿತ ದಾನದಲಿ
ವದನ ನೆನಸು ಉತ್ತುಮ ವಚನದಲ್ಲಿ
ಪದೋಪದಿಗೆ ಸಂಗೀತದಲ್ಲಿ ನೆನಸು ಜಿಹ್ವೆ
ಸದಮಲ ಅಕ್ಷಿಯ ನೆನಸು ಶ್ರೀಹರಿ ಪಾದದಲ್ಲಿ
ಮುದದಿ ನೆನಸು ಎರಡು ಕರ್ಣ ಶ್ರವಣದಲ್ಲಿ
ಹೃದಯ ನೆನಸು ಬಿಂಬ ಧ್ಯಾನದಲ್ಲಿ
ಪದುಮನಾಭ ನಮ್ಮ ವಿಜಯವಿಟ್ಠಲನ
ಉದಯಾಸ್ತಮಾನದಲಿ ಈ ದೇಹ ನೆನಸೂ ॥ 3 ॥
ಅಟ್ಟತಾಳ
ವನದೊಳಗೆ ಪೋಗಿ ಮುಣಿ ಮುಣಿಗಿದರೆ
ತನುವಿನ ದುರ್ಗಂಧವದು ಪೋಗೋದಲ್ಲದೆ
ನೆನಿಯದೊ ಮನವು ಮನದ ಮಲಿನ ಹೊರ -
ಗಿನ ಜಲದಲ್ಲಿ ನಿರ್ಮಲಿನವಾಗದು ಕಾಣೊ ದಿನ ಪ್ರತಿ ತೊಳೆದರೆ
ದನುಜಾರಿ ವಿಶ್ವಧ್ರುತ್ ವಿಜಯವಿಟ್ಠಲನ್ನ
ವನಜ ಚರಣ ಧ್ಯಾನವನು ಮಾಡೊ ಮರುಳೆ ॥ 4 ॥
ಆದಿತಾಳ
ಶ್ರೀಧರನ್ನ ನಾಮವನ್ನು ಸಾಧಿಸಿ ನಾಲಿಗೆ ತುದಿಗೆ
ಆದರದಿಂದೆರಕ ಹೊಯ್ದು ತೋದು ತೋದು ನಾಭಿ ತನಕ
ಭೇದಿಸಿ ಪಾಪದ ಬಟ್ಟೆ ಛೇದಿಸಿ ಪುಣ್ಯಗತಿಯ
ಹಾದಿಯನ್ನು ಮೆಟ್ಟಿ ಅಹಲ್ಲಾದನಾಗೊ ನಿನ್ನೊಳಗೆ
ವೇದ್ಯ ನಾಮ ವಿಜಯವಿಟ್ಠಲ ಆದಿದೇವ ಸಾಸಿರಪ -
ರಾಧವಿರಲು ಹಿಂದುಕಳೆದು ಕಾದುಕೊಂಬ ಕರುಣದಲ್ಲಿ ॥ 5 ॥
ಜತೆ
ಎಲ್ಲಿ ನೆನೆದರೆ ಫಲವಿಲ್ಲ ನಿರುತದಲ್ಲಿ
ಬಲ್ಲಿದ ವಿಜಯವಿಟ್ಠಲನ ನೆನೆಯಲರ್ಥಿ ॥
****