Showing posts with label ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು varaha timmappa. Show all posts
Showing posts with label ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು varaha timmappa. Show all posts

Friday, 27 December 2019

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ ಭೈರವಿ ಝಂಪೆತಾಳ

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು
ಹಾನಿಯಾಗಿಯೆ ಅವಮಾನ ತೋರುತಿದೆ ||ಪ||

ವಾಸುದೇವನೆ ಎನ್ನ ಈಸುದಿನ ಪರಿಯಂತ
ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ
ಈಸಾಡಿದೆನು ನಾನು ಈ ಗೃಹದೊಳೀಗೇನು
ದಾಸಿನವು ನಿನಗಾಯಿತು ಮೋಸ ಯೋಚಿಪರೆ ||೧||

ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ
ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ
ಹಗೆಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ
ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ ||೨||

ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ
ಪಾರಾಗಿ ನಾಚಿಕೆಯು ಬೇರೂರಿತು
ಘೋರ ಆಡವಿಯ ಒಳಗೆ ಗಾರುಗತ್ತಲೆ ಸುತ್ತಿ
ಮಾರಿದೆಯ ಚೋರರಿಗೆ ದಾರಿಗಾಣಿಸದೆ ||೩||

ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರಕರೆಯು
ಹರದಿಯೊಳು ನಂಬಿಗೆಯು ಕಿರಿದಾಯಿತು
ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ
ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ ||೪||

ಇನು ಬಂಧಿಸಬೇಡ ಎನ್ನಿಂದ ಅಳವಲ್ಲ
ಬನ್ನಬಡುವುದು ಎಲ್ಲ ನಿನ್ನ ಮನಕರುಹು
ಮುನ್ನ ಮಾಡಿದ ಕರ್ಮ ಬೆನ್ನ ಬಿಡುವಂದದಲಿ
ಪನ್ನಗಾದ್ರಿನಿವಾಸ ಪಾಲಿಸೈ ಲೇಸ ||೫||

ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ
ಕಾಸ ಕೊಟ್ಟೇಕೆ ನಿರಾಸೆ ಮಾಡುವಿಯೊ
ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ
ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ ||೬||

ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ
ಕಡೆಗೆ ಕೈಪಿಡಿದು ಎನ್ನ ರಕ್ಷಿಪನು ನೀನೆ
ಮಡದಿ ಮಕ್ಕಳನೆಲ್ಲ ಬಿದದೆ ಸಲಹುವ ನೀನೆ
ಪೊಡವಿಗಧಿಪತಿಯಾದ ವರಾಹ ತಿಮ್ಮಪ್ಪ ||೭||
*******