ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ || ಪ ||
ಕಾಲನ ದೂತರು ನೂಲು ಹಗ್ಗವ ತಂದು
ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರುವಾಗ
ಪಾಲಿಸುವರುಂಟೆ ಜಾಲವ ಮಾಡದೆ || ೧ ||
ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಡೆಗೆ ಕೊಂಡೊಯ್ದು
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ || ೨ ||
ಅಂಗಳಿಗೆ ಡಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ
ಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ || ೩ ||
***
Chittajanayyana chintisu manave | hottu kaleyade purushottamana nenemanave || pa ||
Kaalanaa dootaru noolu haggava tandu | kaalu kaigala katti mele kutti ||
kaala paashadi sutti shooladindirivaaga | paalisuvaraaruntu jaalavanu maadadale || 1 ||
Dandadharana bhataru chandakopadi bandu | kendadaa nadi tadige kondoydu ninna ||
khanda khandava kitti kendadoliduvaaga | hendiru makkalu bandu bidisuvareno || 2 ||
Angulige dabbanangala cucci taaveradu | kangalige seesavanu kaasihoytiralu ||
tangi akka bandu bhangabidisuvareno | angavidu sthiravalla rangaviththalanenno||3||
****