Showing posts with label ಪರಮ ಪಾವನಕಾಯ ಗುರುರಾಯ ಜೀಯ gopalakrishna vittala. Show all posts
Showing posts with label ಪರಮ ಪಾವನಕಾಯ ಗುರುರಾಯ ಜೀಯ gopalakrishna vittala. Show all posts

Monday, 2 August 2021

ಪರಮ ಪಾವನಕಾಯ ಗುರುರಾಯ ಜೀಯ ankita gopalakrishna vittala

ಪರಮ ಪಾವನಕಾಯ ಗುರುರಾಯ ಜೀಯ

ವರ ಭಾಗವತರ ಪ್ರಿಯ ಸುರರ ಸಹಾಯ ಪ.


ಶ್ರೀ ತಂದೆ ಮುದ್ದುಮೋಹನ ದಾಸರೆಂದೆನಿಸಿ

ವಾತ ಜನಕನ ಒಲಿಸಿ ವೈರಾಗ್ಯ ಧರಿಸಿ

ಖ್ಯಾತಿಯನು ಪಡೆದ ಅನಾಥ ರಕ್ಷಕ ಸ್ವಾಮಿ

ನೀತ ಗುರು ನಿಮ್ಮ ಪದಕೆ ನಾ ತುತಿಸಿ ನಮಿಪೆ 1

ಘನ ಅಂಶದಲಿ ನೆಲಸಿ ಅನವರತ ಸಲಹುವೊ

ಮನವ ಮಾಡಿರಬಲೆ ಅಂಜಿ ಬೆದರೆ

ಘನ ಜ್ಯೋತಿ ಸ್ವೀಕರಿಸಿ ತನುವಿಗಭಯ ತೋರಿ

ಮನದಿ ಪದವನೆ ನಂಬೆ ರಕ್ಷಿಸಿದ ಗುರುವೆ 2

ಅಪಮೃತ್ಯು ಬಂದು ಬಹು ಅಪರಿಮಿತ ಭಯಪಡಿಸಿ

ಸುಪಥ ಕಾಣದೆ ನಿಮ್ಮ ಪದವ ನಂಬಿರಲು

ಸ್ವಪ್ನದಲಿ ನಿಜರೂಪ ಗುಪ್ತದಿಂದಲಿ ತೋರಿ

ಆಪತ್ತು ಪರಿಹರಿಪೆನೆಂದಭಯವಿತ್ತ 3

ಪರಿಪರಿ ಅಪಮೃತ್ಯು ಪರಿಹಾರವನೆಗೈದು

ಪರಮ ಹರುಷದಿ ಕಾಯ್ದು ಆಯುವನೆ ಇತ್ತು

ಕರಕರೆಯ ಬಿಡಿಸಿ ಕಾಯ್ದಂಥ ಘನ ಚರಿತೆಯನು

ಅರಿತು ವರ್ಣಿಸಲರಿಯೆ ಪರಮ ಪ್ರಿಯ ದೊರೆಯೆ 4

ಈ ಪರಿಯ ಮಹಿಮರೆ ಆಪನ್ನ ರಕ್ಷಕರೆ

ಶ್ರೀ ಪತಿಯ ತೋರುವ ಘನಶಕ್ತರೆ

ಕಾಪಾಡುವೋ ಕರ್ತರೆಂದು ನಾ ನಂಬಿರುವೆ

ಗೋಪಾಲಕೃಷ್ಣವಿಠ್ಠಲನ ನಿಜ ಪ್ರಿಯರೆ 5

****