Showing posts with label ಇಂತೀ ಸಂಸಾರದ ಭ್ರಾಂತಿ vijaya vittala ankita suladi ಸಾಧನ ಸುಳಾದಿ INTEE SAMSARADA BHRANTI SADHANA SULADI. Show all posts
Showing posts with label ಇಂತೀ ಸಂಸಾರದ ಭ್ರಾಂತಿ vijaya vittala ankita suladi ಸಾಧನ ಸುಳಾದಿ INTEE SAMSARADA BHRANTI SADHANA SULADI. Show all posts

Monday, 9 August 2021

ಇಂತೀ ಸಂಸಾರದ ಭ್ರಾಂತಿ vijaya vittala ankita suladi ಸಾಧನ ಸುಳಾದಿ INTEE SAMSARADA BHRANTI SADHANA SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ಸಂಸಾರ ಅಸಾರವೆಂದು ತಿಳಿದು ಧೃಢವಾಗಿ ಹರಿಪಾದ ನಂಬಿ , ಮದ್ದಾನೆ ಕರ್ದಮದೊಳಿದ್ದಂತೆ ಸಂಸಾರದಲ್ಲಿ ನಿರ್ಲಿಪ್ತನಾಗಿರುವಿಕೆ.) 


 ರಾಗ ಸಾರಂಗ 


 ಧ್ರುವತಾಳ 


ಇಂತೀ ಸಂಸಾರದ ಭ್ರಾಂತಿಗೊಳಗಾಗಿ ದು -

ಶ್ಚಿಂತಿಯಲ್ಲಿ ನೀ ಬಳಲದಿರು ಸಂತತದಲ್ಲಿ

ಸಂತಾಪದಲ್ಲಿ ಕುದಿದು ಕಿಂತು ಕಳೆಯದೆ ಭವದ

ಪಂಥಿದೊಳು ಹೊರಳಿ ಅಂತನು ಕಾಣದೆ

ಸಂತತಿ ಎನ್ನದ್ಯೆನ್ನದು ನೀನು ನಾನೆಂಬೊ

ಪಂಥದಲ್ಲಿ ತಿರುಗಿ ಮುಂತೆ ನೆನಿಯದೆ

ಪಾಂಥದರ ವಂಟಿಗೆಯಲ್ಲಿ ನಿಂತ ಜನರ ಕೂಟ -

ದಂತೆಲವೊ ಜೀವ ನೀನೆಂತು ಮರುಳೊ

ಕಂಥೆ ಪಟಕ್ಕೆ ಸುತ್ತ ತಂತಿ ಜೋಡಿಸಿದ ಪರಿ -

ತಂತ್ರವಿದು ನೆಚ್ಚದಿರು ಕಂಥೆ ಮಾಯಾ

ಶಾಂತ ಪಾರಾಯಣ ವಿಜಯವಿಟ್ಠಲ ಜಗ -

ದಂತರಯಾಮಿಯ ಮಂತ್ರವನ್ನು ಪಠಿಸೊ ॥ 1 ॥ 


 ಮಟ್ಟತಾಳ 


ಹೊಳೆಯ ಹರಿಯಿಂದ ಮಳಲು ಹರಿದು ಬಂದು

ಕೆಲವು ದಿನ ನೆಲೆಯಾಗಲು ಮತ್ತೆ

ಜಲವತ್ತಡಿಯಿಂದಾಗಲಿ ಪೋಗಿ ಮಳಲು

ಬಲು ಪರಿಯಾದಂತೆ ತಿಳಿವದು ನಿನ್ನಯ

ಕುಲದ ಉತ್ಪತ್ತಿಯು ಘಳಿಗೆಯೊಳಗೆ ಮೂ -

ದಲಿಸಿ ನುಡಿವರೂ ಮುಳವು ಮಾಡಿಕೊಳದೆ

ಹುಳಕು ಯೋಚನೆ ತೊರೆದು

ಕೆಲಕಾಲ ವಿರಾಮ ವಿಜಯವಿಟ್ಠಲನ್ನ 

ಒಳಗೆ ಮಾಡಿಕೊಂಡು ಸುಳಿದಾಡು ವಿಹಿತದಲ್ಲಿ ॥ 2 ॥ 


 ರೂಪಕತಾಳ 


ಸುಖವಿಲ್ಲ ಸುಖವಿಲ್ಲ ಸಂಸಾರಾಖ್ಯದಲ್ಲಿ

ದುಃಖವೆ ದುಃಖವೆ ಪ್ರಾಪ್ತಿ ಸಕಲ ಕಾಲದಲೀ

ತ್ವಕುವೇಂದ್ರಿಯಾದಿ ಮೋಹಕದೊಳು ಸಿಗಬಿದ್ದು

ಅಕಟ ಮಮತೆಯಲ್ಲಿ ವಿಕಳ ಮಾನವನಾಗಿ

ಭಕುತಿ ಶೂನ್ಯದಲ್ಲಿ ಬದುಕುವದೇನೊ ಜೀವ

ನಿಕರ ಬಂಧನದೊಳು ಪುಕ್ಕಟೆ ತಗಲಿಕೊಂಡು

ಮುಖಕೆ ಹೇಡಿಯಾಗದೆ ಕುಕ್ಕುಟ ಜ್ಞಾನದಲಿ ಶೋ -

ಧಕನಾಗು ಅನುಗಾಲ ಲಕುಮಿವಲ್ಲಭ ವಿ -

ಮುಕ್ತಾತ್ಮ ವಿಜಯವಿಟ್ಠಲನ್ನ ದಿವ್ಯ ಪಾ -

ದಕ್ಕೆ ನಮಿಸಿ ಪುಣ್ಯ ಸಾಧಕನಾಗಿ ಬಾಳೊ ॥ 3 ॥ 


 ಝಂಪೆತಾಳ 


ಸಂಕಲೆ ಎಂಬ ಸಂಸಾರ ಕಾಲಿಗೆ ತಗಲಿ

ಸಂಕಟ ಬಡಿಸುವದು ಕೇಳು ಪ್ರಾಣ

ಅಂಕುರವಾಗದು ಭಕ್ತಿ ಮಾರ್ಗಕ್ಕೆ ಕ -

ಳಂಕವಲ್ಲದೆ ಇನಿತು ಒಳಿತೇ ಇಲ್ಲ

ಡೊಂಕು ನಡತೆಯಲಿ ಅಂಧಕೂಪದಲ್ಲಿ ಕೆಡದಿರು

ಸುಂಕು ಮುಸುಕಿದಂತೆ ಮುಗ್ಧನಾಗಿ

ಪಂಕಜೋದರ ಕುಮುದ ವಿಜಯವಿಟ್ಠಲನ್ನ 

ಅಂಕಿತವ ಜರಿದು ದುರ್ಬಿಂಕದಲಿ ಮೆರೆದೆ ॥ 4 ॥ 


 ತ್ರಿವಿಡಿತಾಳ 


ಹಿಂದೆ ಸಂಸಾರ ದಾವವೆಂದೆಂಬೊ ಬಂಧನದೊಳು

ಪೊಂದಿ ಪಾಮರರಾಗಿ ಬಂದು ಪೋದವರೆಲ್ಲ

ತಂದೆ ತಾಯಿ ಭ್ರಾತೃ ಬಂಧು ಬಳಗ ಸಂ -

ಬಂಧಿಗಳೇನೊ ನಿನಗಿಂದು ನೆರೆದವರು

ಮುಂದೆ ನೀನವರಿಗೆ ಬಂಧು ಅತಿ ದೂರನೊ

ದ್ವಂದ್ವ ವಾರ್ತಿಯನು ನಿಸ್ಸಂದೇಹದಲಿ ಪೇಳು

ಇಂದಿರೇಶ ಸತ್ಯಮೇಧ  ವಿಜಯವಿಟ್ಠಲ 

ಎಂದೆಂದಿಗೆ ಪೊರೆವಾನೆಂದು ನಂಬೊ ॥ 5 ॥ 


 ಅಟ್ಟತಾಳ 


ಹಲವು ಯೋನಿಗಳಲ್ಲಿ ಸುಳಿದು ಸುಳಿದು ಸುತ್ತಿ

ಮಲಮೂತ್ರ ಹೊಲಸು ಹೊಲಿಯ ಸೂತಕದಲ್ಲಿ

ಕುಲವೆ ಸಾರಲಿ ಬಂದು ಚಲಿಸಿದ ದುಃಖವ

ನೆಲೆಯಾವದು ಜೀವ ಹುಳುತು ಪೋಗುವದು

ಬಲೆಯಲ್ಲಿ ಬಿದ್ದ ಸಿಂಬಳದೊಳು ನೊಣ ದೇಹ

ಕೆಳಗಾಗಿ ಮಲದಂತೆ ಬಳಲುವಿ ಕಲಕಾಲ

ತಿಲದರ್ಧನಿತು ಸತ್ಪಲವೀಗ ಒದಗವು

ಹಳವಾದೀ ಸಂಸಾರ ಹಲವು ರಂಧ್ರವು ಕಾಣೊ

ಬಲವಂತ ದುರ್ಗಮ ವಿಜಯವಿಟ್ಠಲ ನಿ -

ಶ್ಚಲ ಮೂರುತಿಯ ವೆಗ್ಗಳ ಮಹಿಮೆಯ ತಿಳಿಯೋ ॥ 6 ॥ 


 ಆದಿತಾಳ 


ಖತಿಗೊಂಬ ಸಂಸಾರಕತಿ ದೂರನಾಗಿ ನಿಲ್ಲೊ

ಮತಿಗೆಡಿಸುವ ಇಂದ್ರಿಯ ಜಿತನಾಗೊ ಧೈರ್ಯದಲ್ಲಿ

ಚತುರಾವಿತನದಲ್ಲಿ ಇತರ ದೈವವ ಬಿಟ್ಟು

ಕ್ಷಿತಿಗೊಬ್ಬನುತ್ಪತ್ತಿ ಸ್ಥಿತಿಲಯಕರ್ತನು ಶ್ರೀ -

ಪತಿಯೆಂದು ತಿಳಿದು ನಂಬಿ ಸತತಾರಾಧನೆ ಮಾಡಿ

ರತಿಯಾದ ಭಕುತಿಯಲ್ಲಿ ಲತೆ ಪಲ್ಲವಿಸಿದಂತೆ

ಪ್ರತಿದಿವಸದಲಿ ವಿಹಿತಧರ್ಮದಿಂದ ಸ -

ದ್ಗತಿಗಭಿಮುಖನಾಗ್ವದುಚಿತ ಕುಲದಲ್ಲಿ ಬಂದು

ದ್ಯುತಿಧರ ನಾಮಪ್ರೇಮ ವಿಜಯವಿಟ್ಠಲರೇಯನ 

ಕಥೆಕಲ್ಪ ಕೇಳಿ ನಿರ್ಗತನಾಗೊ ಚಕ್ರದಿಂದ ॥ 7 ॥ 


 ಜತೆ 


ಕರ್ದಮದೊಳಗಿದ್ದ ಮದ್ದಾನೆ ಇದ್ದಂತೆ

ಇದ್ದು ಭಜಿಸು ದುರ್ಧರ ವಿಜಯವಿಟ್ಠಲನಂಘ್ರಿ ॥

***