Showing posts with label ಅರ್ಚಾ ಅರ್ಚನೆ ಮಾಡು vijaya vittala ankita suladi ಅಧ್ಯಾತ್ಮ ಸುಳಾದಿ ARCHA ARCHANE MAADU ADHYATMA SULADI. Show all posts
Showing posts with label ಅರ್ಚಾ ಅರ್ಚನೆ ಮಾಡು vijaya vittala ankita suladi ಅಧ್ಯಾತ್ಮ ಸುಳಾದಿ ARCHA ARCHANE MAADU ADHYATMA SULADI. Show all posts

Saturday, 3 July 2021

ಅರ್ಚಾ ಅರ್ಚನೆ ಮಾಡು vijaya vittala ankita suladi ಅಧ್ಯಾತ್ಮ ಸುಳಾದಿ ARCHA ARCHANE MAADU ADHYATMA SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ ಅಧ್ಯಾತ್ಮ ಉಪಾಸನೆ ಸುಳಾದಿ 


(ಸ್ವದೇಹದಲ್ಲಿಪ್ಪ ಪಂಚಭೌತಿಕ ತತ್ವ , ತತ್ವಪತಿ ತನ್ನಿಯಾಮಕ ರೂಪ, ಅಂತಃ ಬಹಿರ್ಬ್ರಹ್ಮಾಂಡದಿ ಕ್ರಮವಾಗಿಪ್ಪ ಪಂಚಭೂತಗಳಲ್ಲಿಪ್ಪ ಹರಿಯ ಬಿಂಬೈಕ್ಯ ಚಿಂತನೆ, ಅರ್ಚನೆಯ ವಿಸ್ತಾರ ಕ್ರಮ.) 


ರಾಗ ಸಾವೇರಿ 


ಧ್ರುವತಾಳ 


ಅರ್ಚಾ ಅರ್ಚನೆ ಮಾಡು ಅಧಿಕಾರ ಭೇದದಿಂದ

ನಿಚ್ಚಾ ವರ್ಜಿತ ಕಾಮನಾಗಿ ಬಾಗೀ

ಅಚ್ಯುತ ದೈವವೆಂದು ಆಹ್ಲಾದದಿಂದ ಸದಾ

ಸಚ್ಚಿದಾನಂದಾತ್ಮಾದಿ ಗುಣಗಳಿಂದಾ

ಮೆಚ್ಚಿಸು ಮನಸು ಪೂರ್ವಕದಿಂದ ಯೋಗ್ಯತಾದನಿತು

ಮೆಚ್ಚಿಸು ಹರಿಯ ವೊಳಗೆ ಹೊರಗೆ ತಿಳಿದು

ಸಚ್ಚಿದಾನಂದಾದಿಗಳ ಗುಣಗಳಿಂದ ಧ್ಯಾನಗೈದು

ಎಚ್ಚರನಾಗು ನಿನ್ನ ಯೋಗ್ಯತಾದನಿತು

ನೆಚ್ಚಿದವರ ಪ್ರಾಣ ಪ್ರಕೃತಿ ರಮಣ ಹರಿ

ಸುಚ್ಚರಿತ್ರನು ಕಾಣೋ ತನ್ನ ತೋರಿ

ಅರ್ಚರಾದಿ ಲೋಕ ಐದಿಸಿ ತಾತ್ವಿಕರ

ಹೆಚ್ಚು ಹೆಚ್ಚಾಗಿ ವೊಳಗೆ ಪೊಳೆವ ದ್ವಿವಿಧ

ಅಚ್ಯುತಾನಂತ ರೂಪಗಳಾನಂತ 

ನಿಚ್ಚಳವಾಗಿವೆ ನೋಡಿದಲ್ಲಿ

ಬಚ್ಚಿಡತಕ್ಕದ್ದು ಈ ಪ್ರಮೇಯ ಕಂಡಲ್ಲಿ

ಬಿಚ್ಚುವದಲ್ಲ ಬೀದಿ ಬೀದಿ ತಿರುಗಿ

ಅಚ್ಚಟ ಜ್ಞಾನಿಗಳಿಗೆ ಕೇಳಿದಾಕ್ಷಣ ಬೆಲ್ಲ -

ದಚ್ಚಾಗಿ ಯಿಪ್ಪದು ಸವಿದೋರುತಾ

ಸುಚ್ಚಿತ್ತದಲ್ಲಿ ನಿತ್ಯ ವಿಚಾರಿಸಿ ಕೊಳುತ

ಚಚ್ಚರದಲ್ಲಿ ಗುಣವಂತರಹರೋ

ಕೊಚ್ಚಿ ಪೋಗುವದಘ ಘೋರ ದೈತ್ಯರಿಗೆದಿ -

ಗಿಚ್ಚಾಗಿ ಯಿಪ್ಪೊದು ಸರ್ವಕಾಲಾ

ಹುಚ್ಚು ಹುರುಳು ಮಾತಿನಿಂದ ಫಲವಿಲ್ಲಾ

ಮುಚ್ಚು ಬಾಗಿಣದಂತೆ ಸುಕೃತವುಂಟು

ಇಚ್ಚಕನಾಗು ಹರಿದಾಸರಲ್ಲಿ

ಅಚ್ಚ ಸುಖ ಬರುವದು ವರ್ಣಾಶ್ರಮ ಧರ್ಮ

ಸಚ್ಚರಾಚರದೊಳು ಲೇಶ ಮಾಡೆ

ವೆಚ್ಚವಾಗದು ಕಾಣೋ ಒಂದನಂತಾ

ಚೊಚ್ಚಲ ಮಗನಂತೆ ಪಾಲಿಸುತಿಹರು

ಪಚ್ಚದ ಮಣಿಗೆ ಸರಿಯೆ ಗಾಜು ಮಣಿಹಾರ

ಹಚ್ಚಿದ ಕಾಲಕ್ಕೆ ಶೋಭಿಸುವದೇ

ನುಚ್ಚುಗಳ್ಳ ದೇವರ ಎಂತ ಪೂಜಿಸಲೇನು

ಬಚ್ಚಲ ಮೋರಿ ನೀರು ಕುಡಿದಂತೆವೋ

ಕುಚ್ಚಿತವಲ್ಲದೆ ಜಗದೊಳು ಜನನವಿಡಿದು

ರಚ್ಚೆಯಲ್ಲದೆ ಭಂಡು ಭೂತ ಪೂಜೆ

ಅಚ್ಯುತ ಪದವಿಗೆ ಇದೆ ಇದೆ ಉಪಾಯ

ಬೆಚ್ಚದೆ ಮಾಡಿರಯ್ಯಾ ಮನದಲಿಟ್ಟು

ಬೆಚ್ಚಿಸಿದಂತೆ ಮನಸು ಹರಿಪಾದ ಪೊಂದುವದು

ಸಚ್ಛಾಸ್ತ್ರ ಶ್ರವಣ ಮನನ ಧ್ಯಾನೋಪಾಸನದಿಂದ

ತಚ್ಛಬ್ಧವಾಚ್ಯ ಹರಿಯ ನೋಡಬೇಕು

ಎಚ್ಚರ ದೈವ ನಮ್ಮ ವಿಜಯವಿಟ್ಠಲರೇಯನ್ನ

ನಿಚ್ಚ ಈ ಪರಿಯಿಂದ ಚಿಂತಿಸಬೇಕು ಸತತ ॥ 1 ॥ 


ಮಟ್ಟತಾಳ 


ಧರಣಿ ಉದಕ ವೈಶ್ವಾನರ ಮಾರುತ ಗಗನ

ಎರಡೆರಡು ಒಂದು ಭೂತಗಳಿದ್ದಲ್ಲಿ

ಹರಿಯ ವ್ಯಾಪಾರಗಳು ಚಿಂತಿಸು ಚನ್ನಾಗಿ

ಪರಿಪರಿ ಬಗೆಯಿಂದ ಗುಣಿಸುವದು ಬಿಡದೇ

ವರ ಗುಣ ರೂಪ ಕ್ರೀಯಗಳಾನಂತ

ಚರಿಸುವ ಬಗೆ ತಿಳಿದು ಚತುರತೆ ನೀನಾಗೊ

ಇರಳು ಹಗಲು ಭೂತಾ ಭೂತಾಭಿಮಾನಿಗಳ

ಶರೀರ ತಧಿಷ್ಠಾನ ಸಿರಿ ನಾರಾಯಣ 

ಸಿರಿ ಲಕುಮಿ ಬೊಮ್ಮ ಹರ ಮಿಕ್ಕಾದ ನಿ -

ರ್ಜರಗಣ ನಾನಾ ತರತಮ್ಯದಿಂದಲಿ ಜ್ಞಾನೇಚ್ಛಾ 

ಪ್ರಯತ್ನ ಸ್ವಾಭಾವಿಕವೆಂದು

ನಿರುತ ತದಾಕಾರ ನಿಃಸಂಗರು ಯೆಂದು

ಅರಿತು ಸಂತಸನಾಗು ಸಜ್ಜನರನೊಡನಾಡಿ

ದುರಿತಾಂಬುಧಿ ತಾರಿ ವಿಜಯವಿಟ್ಠಲರೇಯ

ಕರುಣಾಕರ ಮೂರ್ತಿಯ ಚರಣವ ನೆರೆ ನಂಬಿ ॥ 2 ॥ 


ರೂಪಕತಾಳ 


ಹೃದಯಾಕಾಶ ರೋಮ ಕೂಪಗಳೊಂದೊಂದು

ಉದರನಾಸ ಶ್ರವಣ ನಯನ ರಾಜಿಸುವ

ವದನ ಹಸ್ತ ಚರಣ ಸಂಧಿಗಳ ವಿವರ

ಹೊದರು ಗುಹ್ಯ ಒಂಭತ್ತು ದ್ವಾರ ಕ್ಷುದ್ರ ಛಿದ್ರ

ಮುದದಿಂದ ಘಟ ಮಠಾಕಾಶ ಜಾಲ ರಂಧ್ರ

ಮದುವೆ ಛಪ್ಪರ ಯಜ್ಞಶಾಲಿ ಮುಡಿಗೆ ಮರು -

ತ್ಪದ ಚತುರ್ವೀಥಿಗಳು ತತ್ತತ್ತು ಶ್ರೇಣಿಗಳು

ಚತುರಂಗಾಕ್ಷ ಮನೆ ಗಾವುದ ಹರ -

ದಾರಿ ಲೆಖ್ಖದ ಬೈಲು ವರಣಾವರಣ ಗರ್ಭ ದಿಗ್ಭಾಗಾ

ಹದಿನಾಲ್ಕು ಲೋಕ ವಿರಾಡ್ರೂಪ ವೈಕುಂಠ

ಪದುಮ ಭವಾಂಡ ಸಪ್ತಾವರಣ ಮೇಲೆ

ತದನಂತರ ಅವ್ಯಾಕೃತಾಕಾಶ ಭೂತ ಈ

ತುದಿ ಮೊದಲು ಗುಣಿಸೋದು ಆಕಾಶ ಪ್ರಭೇದ

ಇದರಲ್ಲಿ ಹರಿ ಚಿಂತನೆ ಮಾಡು ಪರಿಪರಿ

ಹೃದಯಾರಂಭಿಸಿಕೊಂಡು ಅಲ್ಲಿ ಪರಿಯಂತ

ತದಕಾರ ತನ್ನಾಮ ವಿಜಯವಿಟ್ಠಲರೇಯಾ

ವಿಧಿದೂರ ತದ್ಭಿನ್ನಾತನ್ನ ತನ್ಮಧ್ಯಾ ಎನ್ನು ॥ 3 ॥ 


ಝುಂಪೆತಾಳ 


ನಾಸ ಮೊದಲಾದ ಶ್ವಾಸೋಚ್ಛ್ವಾಸ ಮತ್ತೆ ಉಪ -

ಶ್ವಾಸ ಸರ್ವ ಜೀವರಾಶಿಯಲ್ಲಿ

ಬೀಸುವ ವ್ಯಜನ ಚಾಮರ ನವಿಲುಗರಿ

ಕೋಶ ವಾರಿಧಿ ಥೆರೆ ಊದುವ ವಾದ್ಯ

ಲೇಸು ಪಕ್ಷಯಗರಿ ಯಿಂದ ಬರುವ ಗಾಳಿ

ಗ್ರೀಷ್ಮ ಋತು ಬಿರಿಸುತ್ತ ವಾಯುಪಟ ಮಿಕ್ಕ

ಈ ಸಮೀರ ಭೂತ ತತ್ತ ಲೋಕದ ಗತಿ

ಶೇಷ ವಿಶೇಷ ವಿರಾಟ ಬ್ರಹ್ಮಾಂಡದಲ್ಲಿ

ಭೂ ಸಲಿಲಭಾಗ ಮೇಲಾವರಣಾಚೆಯಲಿ

ಸೂಸಿಕೊಂಡಿದ್ದ ಮಾರುತ ಚಂಡವಾತಗಳ

ಈಸು ಬಗೆಯನು ಪೂರ್ವದಂತೆ ಎ -

ಣಿಸುವದು ವಾಯು ಪರಮಾಣುಗಳಲ್ಲಿ

ವಾಸುದೇವನೆ ಯಿಪ್ಪನೆಂದು ಚಿಂತಿಸು ಮನುಜಾ

ದೋಷದೂರನಾಗು ಇದರಿಂದಲಿ

ಈಶ ಸರ್ವೇಶ ನಮ್ಮ ವಿಜಯವಿಟ್ಠಲರೇಯನ್ನ

ಬೇಸರದಲೆ ಮನದೊಳಗೆ ನಿಲಿಸೋ ॥ 4 ॥ 


ತ್ರಿವಿಡಿತಾಳ 


ನೇತುರಾಗ್ನಿ ಜಠರಾಗ್ನಿ ಪಾವಕ ಕಣ

ಜ್ಯೋತಿ ಜ್ವಾಲೆ ದೀಪ ಪಂಚವಿಧ ಪಂಚಾಗ್ನಿ

ಜಾತಕರ್ಮ ವಿವಾಹ ವೈಶ್ವದೇವ ಉಪ -

ನೀತ ಶಾಂತಿಕರ್ಮ ಅಭಿಚರಾಗ್ನಿ ಪಿತೃ

ನೀತಾ ನಿತ್ಯಾಗ್ನಿ ಹೋತ್ರ ನಾನಾ ಬಗೆ ಯಾಗಾ

ಜಾತವೇದ ದಾವಾ ವಡಬಾಗ್ನಿ ಧೂಮ್ರಾದಿ

ಭೂತಳ ವಿಡಿದು ವಿರಾಟ ಪರಿಯಂತ

ಜ್ಯೋತಿ ಪ್ರಕಾಶಗಳು ಪದ್ಮಜಾಂಡ ತೃತಯ

ಭೂತಾವರಣ ಸಹ ಚಿಂತಿಸು ಪರಮಾಣು

ಮಾತುರಾ ತೇಜೋ ಬಿಂದುಗಳನ್ನು ಪ್ರತಿ ಪ್ರತಿ

ಭೀತರಹಿತಾ ನಮ್ಮ ವಿಜಯವಿಟ್ಠಲರೇಯಾ

ಈ ತೆರದಲ್ಲಿಪ್ಪ ಬಲ್ಲವಗೆಲ್ಲೆಲ್ಲಿ ॥ 5 ॥ 


ಧ್ರುವತಾಳ 


ರಸನೆ ಮಿಕ್ಕಾದೋದಕ ಶೀಕರ ವರುಷಾಧಾರಿ

ಬೆಸನೆ ಅಗ್ರೋದಕ ನೈವೇದ್ಯ ವಾರಿ ತೃಷಿ

ಬಿಸಿನಿಧಿ ನದಿ ಕ್ಷುದ್ರ ನದಿ ತಟಾಕ ವಾಪಿ

ಕುಶಲ ಕೂಪ ದೇವಖಾತ ವರತೆ ಮಡವು

ಪ್ರಸರ ಸರೋವರ ಕ್ರೀಡಾಜಲವ ಸಂ -

ದಿಸಿ ಪೂರ್ವ ಪ್ರವಹ ಸುಳೆಫೇನ ಬುದ್ಬುದ

ಎಸೆವ ಥೆರೆ ಬಹುರಸ ಸಮಸ್ತ ಬೊಮ್ಮಾಂಡ

ಮುಸುಕಿದ ಸುತ್ತು ಮಿತಿ ತಿಳಿದು ಕೊಂಡಾಡುವದು

ವಸುದೇವ ಪುತ್ರನಿದೇ ರೂಪದಿಂದಿಪ್ಪನೆಂದು

ನಸುನಗುತ ತಿಳಿವದು ಯೋಗ್ಯಜನಕ್ಕೆ

ಅಸಮ ಸಾಹಸ ನಮ್ಮ ವಿಜಯವಿಟ್ಠಲರೇಯ

ವಶವಾಗಿ ಯಿಪ್ಪ ಸಾಕಾರ ಸರ್ವೋತ್ತಮ ॥ 6 ॥ 


ಝಂಪೆತಾಳ 


ಪುರಿ ಗೋಪುರ ದುರ್ಗ ಸಾಲಿ ಪ್ರಾಸಾದ ಮಂ -

ದಿರ ಸಭೆ ಸಮಸ್ತ ದೇವಾಲಯ

ಪುರ ಅಗ್ರಹಾರ ಖೇಟಕ ಘೋಷ ವೇದಿಕ

ಅರವಂಟಿಗೆ ಆಸ್ಥಾನ ರಾಜಧಾನಿ

ಶರ ನಿಧಿ ನದಿ ಕೂಲ ದ್ವೀಪ ಪರ್ವತ ನಿಮ್ನ

ತರು ಮೊದಲಾದ ಭೂರುಹ ಜಾತಿ

ಮರಕತ ಮಿಕ್ಕಾದ ನವರತುನ ರಜತ ಸ್ವರ್ನ

ಪರಿ ಲೋಹಕಾಂಶ ತಾಂಬ್ರಾದಿ ಧಾತು

ಪರಶು ನೇಗಲು ಶಕ್ತಿ ಗದ ಶಂಖ ಚಕ್ರ ತೋ -

ಮರ ಪರೀಘ ಚಾಪ ನಾನಾ ಶಸ್ತ್ರವು

ಪರಿ ಪರಿ ಧಾನ್ಯ ರಥ ಫಲ ಪುಷ್ಪ ಹದಿನಾಲ್ಕು

ಧರಿಣಿತಳ ಉಪದ್ವೀಪ ಎಂಭತ್ತು ನಾಲ್ಕು ಲಕ್ಷ

ಶರೀರ ಧಾರಿಗಳ ಗಾತ್ರ ಚಿತ್ರ ಲೆಖ್ಖ ನಿಂ -

ದಿರದೆ ಬೊಮ್ಮಾಂಡ ಖರ್ಪರ ದ್ವಿಗುಣ

ಧರೆ ಮೀರಿ ಮೂಲ ಪ್ರಕೃತಿ ತನಕ ಯೋಚಿಸು

ಪರಮಾಣು ಮೂರುವಿಧ ಅಂಶಿ ಅಂಶಾ -

ಭರಿತವಾಗಿವೆ ನೋಡು ಜಗವೆಲ್ಲ ಸರ್ವದಾ

ಇರುತಿಪ್ಪವು ಶುಭ್ರ ರಕ್ತ ಕಪ್ಪು

ಹರಿಯ ಚಿಂತಿಸು ಅಲ್ಲಿ ಒಂದೊಂದು ಭಾವದಲಿ

ಮೆರೆವ ಆತುಮ ಜಗದಾತುಮನ್ನಾ

ಮರಿಯದಿರು ಆವಾವ ಕ್ರೀಯೆ ಮಾಡುವಾಗ

ಹೊರಗೆ ಒಳಗೆ ನೆನೆದು ಸುಖಿಸು ಸತತಾ

ಚರರಿಗೆ ಬದ್ಧವಾಗಿಪ್ಪ ಲಿಂಗ ಗಾ -

ತುರದ ಸ್ಥಿತಿ ತಿಳಿದು ತಿಳಿದು ತಿಳಿಯೋ

ಪರಿಪೂರ್ಣ ಗುಣಪೂರ್ಣ ವಿಜಯವಿಟ್ಠಲರೇಯ

ಸುರ ನರೋರಗರಲ್ಲಿ ಇನಿತಿನಿತು ನಿರ್ನೈಸಿ ॥ 7 ॥


ಅಟ್ಟತಾಳ 


ಭೂತ ಪಂಚಕದಲ್ಲಿ ಬಹುವಿಧ ತಿಳಿದು ಗು -

ಣಾತಿಶಯದಿಂದ ತತ್ತದ್ಗುಣಂಗಳ

ಮಾತುರ ಕರ್ಮ ಜ್ಞಾನ ತತ್ವ ಹುದುಗಿಸಿ

ಪ್ರೀತಿಯಿಂದಲಿ ಪ್ರಾಣ ಅನ್ನಮಯ ಕೋಶವು

ಈ ತೆರದಲಿ ಏಳು ವೊಂದೇಳು ತತುವವೊ

ಭೂತದಲ್ಲಿ ವುಂಟು ಐದು ಸ್ಥಾನದಲ್ಲಿ

ಶ್ರೋತರ ತ್ವಕು ಚಕ್ಷು ರಸನ ನಾಶಿಕವನ್ನು

ಮಾತು ಮಾತಿಗೆ ಕೇಳಿ ನೀಕ್ಷಿಸಿ ಧ್ಯಾನಿಸಿ

ಕೌತುಕ ಯೈದುವ ಕಾಲಜ್ಞರ ಕೇಳಿ

ಧಾತು ಮೊದಲಾದ ಪ್ರತಿಮೆಯಲ್ಲಿ ಈ

ಭೂತಗಳಿಟ್ಟು ಒಂದೊಂದು ಬಗೆಯಿಂದ

ಶ್ರೀ ತರುಣೀಶನ್ನ ರೂಪಂಗಳಾನಂತ

ಜ್ಯೋತಿ ಪ್ರಕಾಶಮಯವಾದ ದೇವನ

ನೀತಿಯಿಂದಲಿ ನಿನ್ನ ಯೋಗ್ಯತಾ ಪ್ರಕಾರ

ಸೋತ್ತಮರಿಂದ ಉಪಾಸನೆ ಚಿಂತಿಸಿ

ಓತ ಪ್ರೋತದಂತೆ ಹರಿವ್ಯಾಪ್ತಿ ನಿಜವಾಗಿ 

ಭೂತಕ್ಕೆ ಒಂದೊಂದು ಹೆಚ್ಚು ಕಡಿಮೆಯಿಂದ

ಧೌತ ಪಾಪನಾಗು ಪಾರಮಾರ್ಥಿಕದಲ್ಲಿ

ಶ್ವೇತದ್ವೀಪ ಸೂರ್ಯಮಂಡಲ ತನ್ನಯ

ಗಾತ್ರ ಸಾಲಿಗ್ರಾಮ ಪಂಚಭೇದ ಸ್ಥಾನ

ವಾತ ಪ್ರತೀಕದೊಳರ್ಚನೆ ಮಾಡು

ಆತುಮ ಮೂರುತಿ ವಿಜಯವಿಟ್ಠಲ ಸರ್ವಾ -

ತೀತನು ಮೂರ್ತ್ಯಾಮೂರ್ತಿಯಲ್ಲಿ ನಿಲಿಸೋ ॥ 8 ॥ 


ಆದಿತಾಳ 


ಏಕೇಕಾ ಭೂತದಲ್ಲಿ ಲೌಕಿಕಾ ವೈದಿಕಾ -

ನೇಕ ವ್ಯವಹಾರದಲ್ಲಿ ಶ್ರೀಕಾಂತನ ಮೂರ್ತಿಯ

ಸಾಕಾರವಾಗಿ ತಿಳಿ ಬೇಕಾದ ಪುರುಷಾರ್ಥಾ

ತಾ ಕೊಡುವನು ಜಗದೇಕ ವಂದ್ಯನು ಪುಣ್ಯ -

ಶ್ಲೋಕ ಶೋಭನ ದೇವನಾಕಿ ವೃಂದರ ಸಹಿತ

ಆಕಾಶ ಮೊದಲಾದ ತತ್ವಂಗಳೆಲ್ಲಾ ಸರ್ವ

ಲೋಕವೆ ತುಂಬಿದೆ ಪರಮಾಣು ದ್ಯಣುಕವು ಎಂದು

ಅಕಾರ ಮಿಗಿಲಾದ ಎಂಟು ವರ್ಗದಿಂದ

ವೈಕುಂಠವಾಗುವದು ದೇಶಕಾಲಾದಿ ವಿಡಿದು

ಪ್ರಾಕೃತ ರಹಿತನೆ ಹರಿಯೆಂದು ಕೊಂಡಾಡಿ

ಭೂತಳದೊಳು ಚರಿಸು ಸತ್ಕರ್ಮದಲ್ಲಿ

ವಾಕು ಬರಿದೆ ಮಾಡಿ ಬಾಳದಿರೆಲೊ ಮನುಜ

ಏಕಾಂತದ ವರ ಕೇಳು ಸುಖದಲ್ಲಿ ಬಾಳು ಬಾಳು

ಈ ಕಲಿಯುಗದಲ್ಲಿ ಇದನೆ ಕೈಕೊಂಡರೆ

ಶೋಕನಾಶನ ಜನ್ಮ ಜನ್ಮಾಂತರದಲ್ಲಿದ್ದ

ಏಕ ಚತುರಗುಣಾವಿಡಿದು ಪೂಜಿಸಿ ವಿ -

ವೇಕನಾಗೆಲೊ ಪಂಚವಿಧರೊಳು ಒಬ್ಬನೆನಿಸಿ

ಕಾಕುಲಾತಿ ಬಿಟ್ಟು ವಿಜಯವಿಟ್ಠಲರೇಯನ್ನ

ಬಾಕುಳಿಗನಾಗಿ ಭಕ್ತಿಯಿಂದ ನಲಿದಾಡು ॥ 8 ॥ 


ಜತೆ 


ಹರಿಯ ಚಿಂತಿಸು ಪಂಚಭೂತದಲ್ಲಿ ನಿತ್ಯ

ಕರುಣಾಳು ವಿಜಯವಿಟ್ಠಲನೆ ಏಕೀಭೂತಾ ॥

*****