ಕಂಡ ಕಂಡಲ್ಲಿ ಮನ ಪೋಗದಂತೆ ಮಾಡೋ l
ಪುಂಡಲೀಕವರದ ಜಯಪಾಂಡುರಂಗ ll ಪ ll
ಚಕ್ಷುರಿಂದ್ರಿಯವು ನಿನ್ನ ನೋಡುತಲಿರಲಿ l
ಲಕ್ಷವಿರಲೆನ್ನಲ್ಲಿ ಜಿಷ್ಣು ಸಖನೆ l
ಪಕ್ಷಿವಾಹನ ನಿನ್ನ ನೋಡುತಲಿ ನೋಡುತಲಿ l
ಅಕ್ಷಯವಾಗಲಿ ಆನಂದ ಸಂತತ ll 1 ll
ಕಿವಿಯಿಂದ ನಿನ್ನ ಕಥೆ ಕೇಳುವಂತಾಗಲಿ l
ಸುವಿವೇಕಿಯನೆ ಮಾಡೋ ಧರಣೀರಮಣ l
ಭವವಿಮೋಚಕನು ನೀನೆಂದು ನಂಬಿದೆ ನಿನ್ನ l
ಅವಿವೇಕಿಗಳ ಸಂಗ ಬಿಡಿಸೋ ಸಜ್ಜನ ದೊರೆಯೇ ll 2 ll
ಅಲ್ಪಸುಖ ಸುಖವೆಂದು ಅನೇಕ ಸುಖ ಮರೆತೆನೋ l
ಕಲ್ಪಕಲ್ಪಗಳಲ್ಲಿ ನೀನೇ ರಕ್ಷಕನಹುದೋ l
ಸ್ವಲ್ಪವಾದರು ಮನವ ನಿನ್ನಲ್ಲಿ ಸೇರಿಸೊ l
ಮಲ್ಪೆಯಿಂದ ಬಂದ ಬಾದರಾಯಣವಿಟ್ಠಲಾ ll 3 ll
***