Showing posts with label ಮೂರುತಿ ಪುಟ್ಟ ಮೂರುತಿ ಕೀರುತಿ ಬಲು ಬಲು ವಾರುತಿ gopalakrishna vittala. Show all posts
Showing posts with label ಮೂರುತಿ ಪುಟ್ಟ ಮೂರುತಿ ಕೀರುತಿ ಬಲು ಬಲು ವಾರುತಿ gopalakrishna vittala. Show all posts

Monday, 2 August 2021

ಮೂರುತಿ ಪುಟ್ಟ ಮೂರುತಿ ಕೀರುತಿ ಬಲು ಬಲು ವಾರುತಿ ankita gopalakrishna vittala

ಮೂರುತಿ ಪುಟ್ಟ ಮೂರುತಿ ಪ.


ಕೀರುತಿ ಬಲು ಬಲು ವಾರುತಿ ಲೋಕರೊಳ್

ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ.


ತ್ರೇತೆಯ ಯುಗದಲಿ ಜನಿಸಿ | ರಾಮ

ದೂತಕಾರ್ಯಕೆ ಮನವಿರಿಸಿ

ಪ್ರೀತಿಯೊಳ್ ರವಿಜನ ಉಳಿಸಿ | ಬಹು

ಖ್ಯಾತಿಯ ವಾಲಿಯನಲ್ಲೇ ಅಳಿಸಿ

ವಾತವೇಗದಿ ವನಧಿಯ ದಾಟಿ ಉಂಗುರ

ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1

ದ್ವಾರಕಿನಿಲಯನ ಒಲಿಸಿ | ಬಲು

ಧೀರ ಭೀಮಸೇನನೆನಿಸಿ

ಸೋಮಕುಲದಲಿ ಜನಿಸಿ | ಬಲು

ಕಾಮಿ ಕೀಚಕನನ್ನು ವರೆಸಿ

ಕಾಮಿನಿಗೋಸುಗ ಕಾಮುಕ ಕುರುಕುಲ

ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2

ಪುಟ್ಟಯತಿಯ ರೂಪತಾಳಿ | ಬಲು

ಗಟ್ಟಿ ಗೋಪೀ ಗೆಡ್ಡೆ ಸೀಳಿ

ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ

ನಿಷ್ಟೆಯೊಳ್ ನೆತ್ತಿಯೊಳ್ ತಾಳಿ

ಇಟ್ಟು ಉಡುಪಿಯಲ್ಲಿ ಅಷ್ಟಯತಿಗಳ ನಿಲಿಸಿ

ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3

ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ

ಬೇಕಾಯಿತೇ ಮೌನಚರ್ಯಾ

ಆ ಕಾಲದ ಎಲ್ಲ ಶೌರ್ಯ ಉಡುಗಿ

ಏಕಾಂತದಲಿ ಹರಿಚರ್ಯಾ

ನೀ ಕಂಡು ಮನದಲ್ಲಿ ವಾಕು ಉಚ್ಚರಿಸದೆ

ಈ ಕುಧರಜೆ ತೀರ ಏಕಾಂತವಾಸನೆ 4

ಅಪಾರಮಹಿಮನೆ ಹಂಪೆ | ಯಲ್ಲಿ

ಈ ಪರಿ ಇರುವುದು ತಂಪೆ

ಶ್ರೀ ಪತಿ ಪದಕಂಜ ಕಂಪೆ | ಇಲ್ಲಿ

ನೀ ಪಾರಣೆಯೆ ಮಾಳ್ಪ ಸೊಂಪೆ

ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ

ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5

****