ಬೇಡಿದ್ದು ಕೊಡಬಾರದೇನೊ
ಬ್ಯಾಡಾದದ್ದು ಕೊಟ್ಟರೆ ಮಾಡಬೇಕೇನೊ ಪ
ಸಂಸಾರದಲ್ಲಿ ಸುಖವಿಲ್ಲಾ ತಿಲಾಂಶವಾದರು
ಯೆನಗದು ಬೇಕಾಗಿಲ್ಲ
ಕಂಸಾರಿ ಅದು ತಾನೇ ಬಲ್ಲಾ ಹಸನ್ಮುಖ
ಹಂಸರೂಪವ ಕಾಣಲಿಲ್ಲ 1
ಮಡದಿ ಮಕ್ಕಳ ವಲ್ಲೇ ನಾನು ಬಹುದುಡಿದು ದುಡಿದು
ಶ್ರಮ ಪಡಲಾರೆನಿನ್ನು
ಪೊಡವಿಪತಿಯೆ ನಿನ್ನ ಮರೆತೆನೋ ನಿನ್ನ
ಅಡಿಗಳಿಗೆರಗುವೆ ಕೊಡು ಮತಿಯನ್ನು2
ಉಂಡರೆ ಮನಿಯೊಳು ಸೇರರೊ ಮೈದುಂಡು
ಮಾಡಿಕೊಂಡು ಮೆರೆವೆನೆಂಬುವರೊ
ಕಂಡದ್ದಾಡಿದರೆ ಬೈಯುವರೋ ಬ್ರಹ್ಮಾಂಡಗೊಡೆಯ
ನಿನ್ನ ಮುಖವನ್ನು ತೋರೊ 3
ನೀನೆ ಗತಿಯೆಂದು ಬಂದರೆ ನಿನ್ನ ಚಾರು ಚರಣಗಳ
ತೋರದಿರುವರೆ
ನಿನ್ನ ಅಗಲಿ ಕ್ಷಣ ಇರಲಾರೆ ಪಾವನ್ನ ಮಾಡೋ
ಮುಕುಂದ ಮುರಾರೆ 4
ಜನನ ಮರಣವಲ್ಲೇ ನಾನು ಇಷ್ಟು ದಿನ
ಅನುಭವಿಸಿದ್ದು ಸಾಕಿನ್ನು
ತನುವನೊಪ್ಪಿಸಿದೆ ಹರಿ ನಿನಗಿನ್ನು ಹೇ ಹನುಮೇಶ
ವಿಠಲನೆ ಕೊಡು ಮುಕ್ತಿಯನ್ನು5
****