Showing posts with label ದೊರಕುವದೆ ಹರಿನಾಮ vijaya vittala ankita suladi ಹರಿನಾಮ ಪ್ರಶಂಸನಾ ಸುಳಾದಿ DORAKUVADE HARINAMA HARINAMA PRASHAMSANA SULADI. Show all posts
Showing posts with label ದೊರಕುವದೆ ಹರಿನಾಮ vijaya vittala ankita suladi ಹರಿನಾಮ ಪ್ರಶಂಸನಾ ಸುಳಾದಿ DORAKUVADE HARINAMA HARINAMA PRASHAMSANA SULADI. Show all posts

Monday, 4 January 2021

ದೊರಕುವದೆ ಹರಿನಾಮ vijaya vittala ankita suladi ಹರಿನಾಮ ಪ್ರಶಂಸನಾ ಸುಳಾದಿ DORAKUVADE HARINAMA HARINAMA PRASHAMSANA SULADI


 Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀಹರಿನಾಮ ಪ್ರಶಂಸನಾ ಸ್ತೋತ್ರ ಸುಳಾದಿ 

( ಹರಿನಾಮ ದೊರಕುವುದೇ ಕಠಿಣ. ದೊರಕಿದರೂ ನಿಲುಕದು , ನಿಲ್ಲದು. ಹರಿನಾಮ ದೊರಕಿದವನು ಸಪ್ತದ್ವೀಪಾಧಿಪತಿಗಿಂತಲೂ ಸುಖಿಯು. ಹರಿನಾಮ ನೆನೆದವನ ವಂಶೀಕರು ನರಕದಲ್ಲಿದ್ದರೂ ಪಾರಾಗುತ್ತಾರೆ. ನಿಷ್ಕಾಮನಾಗಿ ಹರಿನಾಮವನ್ನು ನೆನೆದರೆ ಜೀವನ ಪಾವನ. ಹರಿನಾಮಕ್ಕೆ ಸರಿಯಾದ ಕುರುಹು ಬೇರೊಂದಿಲ್ಲ ಎಂಬ ಮುಂತಾದ ವಿಷಯಗಳನ್ನು ಈ ಸುಳಾದಿಯಲ್ಲಿ ಹೇಳಿದ್ದಾರೆ.) 


 ರಾಗ ತೋಡಿ 


 ಧ್ರುವತಾಳ 


ದೊರಕುವದೆ ಹರಿನಾಮ ದೊರಕಿದರೆ ನಿಲುಕದು

ದೊರಕಿದರೆ ಅವ ಬಲು ಧೊರಿಯೇ ಧೊರಿಯೇ

ದೊರಕುವದನಂತ ಧರಣಿಸುರ ಜನ್ಮಗಳು

ದೊರಕದಲ್ಲದೆ ನಾಮ ದೊರಿಯದಯ್ಯಾ

ದೊರೆತವನ ಸುಖಕೆ ವಿಸ್ತರಿಸಲೇನು ಸಪ್ತ -

ಶರಧಿ ದ್ವೀಪಸಹಿತ ಆಳುವಂಥ

ಧೊರಿಯ ಸುಖಕಿಂತ ನೂರ್ಮಡಿ ಮಿಗಿಲು ಅಧಿಕವು

ಮೊರೆಮೊರೆದು ಕೂಗುತಿವೆ ಬಿರಿದು ಘೋಷಾ

ದೊರಿಯದೊ ದೊರಿಯದೊ ಧರಣಿಯೊಳು ಹರಿನಾಮ

ಸ್ಮರಣಿ ಮಾಡಿದವನ ನೋಡಲಾಗಿ 

ಧರಾಧರ ಬಲ್ಲ ಧರಾಧರನ ನಾಮ ರುಚಿ -

ಕರವಾಗಿ ಸವಿದು ಸುಂದರವೆಂಬದು 

ಅರಿಧರ ಸಂಕ್ಷಿಪ್ತ ವಿಜಯವಿಟ್ಠಲನ್ನ 

ಸ್ಮರಣಿ ಒಂದಕ್ಕೆ ಎಲ್ಲ ಸರಿ ಎಂದೆನಿಸಾದು ॥ 1 ॥ 


 ಮಟ್ಟತಾಳ 


ಕಾಲಸೂತ್ರವಾದ ಮೇಲಾದ ನರಕದಲಿ

ಗೋಳಿಡುತಲಿ ವಂಶಾವಳಿ ಮಿಡುಕುತಿರೆ

ಭೂಲೋಕದಲಿ ಓರ್ವ ಬಾಲಕನು ಪುಟ್ಟಿ

ಶೀಲಗುಣನಾಗಿ ಕಾಲಕಾಲಕೆ ಹರಿಯಾ

ನಾಲಿಗಿಂದಲಿ ನೆನೆಸಿ ಶ್ರೀಲೋಲಾರ್ಪಿತವ

ವ್ಯಾಳೆ ವ್ಯಾಳೆಗೆ ಯಿಂದ ಘಾಳಿ ಬೀಸಲು ನರಕ

ಶೀಳಿ ಅವನ ಕುಲಕೆ ವಾಲಯವಾಗುವದು

ವಾಲಯದಲ್ಲಿ ವಿಶಾಲ ವೈಕುಂಠದಲಿ

ಶೀಲ ಬ್ರಹ್ಮನ ಪ್ರೀಯಾ ವಿಜಯವಿಟ್ಠಲರೇಯಾ 

ಬೀಳಲೀಸನು ತನ್ನ ಆಳುಗಳಾ ನರಕದಲಿ ॥ 2 ॥ 


 ತ್ರಿವಿಡಿತಾಳ 


ನಾಮವೆ ಜೀವನ ನಾಮವೆ ಪಾವನ

ನಾಮವೆ ಸಕಲಾಘ ಹೋಮವೆ ವೆಂಬೋದು

ನಾಮವೆನಲು ಸುರಸ್ತೋಮವೆ ಭಜಿಸುವದು

ನೇಮವೆ ತಿಳಿವದು ಪ್ರೇಮವೆ ಎನುತಲಿ

ನಾಮವೆ ಉತ್ತಮ ಹೇಮವೆಂದು ಕಾಯಾ

ಧಾಮವೆ ಮಾಡಿ ಸಕಾಮವೆ ಬಯಸದೆ

ಸಾಮವೇದಲೋಲ ವಿಜಯವಿಟ್ಠಲನ್ನ 

ನಾಮವೆ ನೆನಿಯೆ ನಿಷ್ಕಾಮವೆ ನುಡಿವುತ್ತಾ ॥ 3 ॥ 


 ಅಟ್ಟತಾಳ 


ಅಪ್ಪ ತಿಮ್ಮಪ್ಪನ ನಾಮವೆ ನೆನಿಸಲು

ತುಪ್ಪ ಸಕ್ಕರೆ ಹಣ್ಣು ಹರಿವಾಣದಲ್ಲಿ

ಒಪ್ಪಾಚಾರದಿಂದ ಸವಿದಂತೆ ಕಾಣಿರೊ

ಅಪ್ತಾಕೃತದ ರಸಕೆ ಪಡಿಯುಂಟೆ

ಸುಪ್ರಸಾದನಾಮ ವಿಜಯವಿಟ್ಠಲನ್ನ 

ತಪ್ಪದೆ ನಾಮಾ ಗುಪ್ತದಲಿ ನೆನಿಸೊ ॥ 4 ॥ 


 ಆದಿತಾಳ 


ನಾಮ ಒಂದು ಬಲವಾಗಿ ಸೀಮೆಯೊಳಗುಳ್ಳ ಬಲು

ತಾಮಸರು ಬಂದು ಎನ್ನ ರೋಮ ಬಾಗಿಸುವರೆ

ಗೋಮತಿ ಮಿಕ್ಕಾದ ನದಿಯ ಮಿಂದು ಬಂದರೇನು

ನಾಮಕ್ಕನಂತ ಕಡಿಮೆ ಫಲವಧಿಕವಿಲ್ಲ

ಈ ಮಾತು ಮನ್ನಿಸೆ ಸುಕಾಮಿಸಿ ಹರಿಯ ಪಾದ

ನಾಮವೆ ಬಿಡದೆ ನೆನಿಸೆ ರೋಮರೋಮ ದುರಿತನಾಶ

ಕ್ಷೇಮಕೃತೆ ವಿಜಯವಿಟ್ಠಲನ ನಾಮ ಮುದ್ರಾಂಕಿತದವಗೆ

ಭೂಮಿಯಾಕಾಶಕ್ಕೆ ಒಂದೇ ಸುಮಾರ್ಗವೆಂದು ಪೇಳೋ ॥ 5 ॥ 


 ಜತೆ 


ಹರಿನಾಮಕೆ ಸರಿಯಾದ ಕುರುಹು ನಾನರಿಯೆನು

ಅರಿದವರಿಗೆ ನಮೋ ಶ್ರೀಶ ವಿಜಯವಿಟ್ಠಲಾ ॥

*******