Showing posts with label ತದಿಗೆ ಗೌರೀ ಸಂಪ್ರದಾಯ ಪದಗಳು traditional tadige gowri. Show all posts
Showing posts with label ತದಿಗೆ ಗೌರೀ ಸಂಪ್ರದಾಯ ಪದಗಳು traditional tadige gowri. Show all posts

Monday, 12 April 2021

ತದಿಗೆ ಗೌರೀ ಸಂಪ್ರದಾಯ ಪದಗಳು traditional tadige gowri

 check following

ಲಲಿತಾ ದೇವಿ ಹಾಡು:-  
ಮಂಗಳ ಶ್ಲೋಕ:- ಶ್ರೀ ಗುರುವಿನಡಿಗೆರಗಿ ಗಣಪತಿಗೆ ತಲೆಬಾಗಿ ಶಾರದೆಗೆ ಸೆರೆಗೊಡ್ಡಿ ಬೇಡುತೀಗ, ಸಾಗರಾವೃತ ಭೂಮಿಗಾಧಾರ ಶಕ್ತಿ ಸಂಪನ್ನೆ ದೇವಿಯ ಪೂಜೆ ಮಾಳ್ಪೆನೀಗಾ !! 

ಧ್ಯಾನ:-  ಶ್ರೀ ಲಲಿತ ಶುಭ ಗಾತ್ರ ಸರಸಿ ಜೋಪಮ ನೇತ್ರೆ ಕೋಟಿ ಸೂರ್ಯ ಪ್ರಭೆಯ ದೇವಿ ನೀನು, ಲಾಲಿಸುತಾ ಪೊರೆಯಮ್ಮ ಲೋಕ ಮೂರರ ಮಾತೆ ಎಂದು ಧ್ಯಾನಿಸುತಿರುವೆನೀಗ ನಾನು !! 

ಆವಾಹನ:- ವಿಶ್ವವಂದಿತ  ದೇವಿ ಸಕಲಕಲಾಧಾರೆ ನೀ ನೆಂದು ನಮಿಸುವೆ ನಿನ್ನ ಚರಣ ಯುಗವ, ವಿಶ್ವತೋಮುಖ ರೂಪೇ ಗಾವಾಹನೆಯ ಮಾಳ್ಪ ಧೈರ್ಯವಂ ಕ್ಷಮಿಸೆಂದು ಬೇಡುತಿರುವೆ ! 

ಆಸನ :- ನಿನ್ನ ಸೂತ್ರದೊಳಿಹುದು ಲೋಕ ನಾಟಕವೆಲ್ಲ ನೀನಿರುವೆ ವಿಶ್ವಕಾಧಾರವಾಗಿ, ಸನ್ನುತಂಗಿಯೆ ನಿನಗೆ ಆಸನವನೆಂತಿಡಲಿ  ಪೇಳೆ ಪಾಲಿಪುದೆನ್ನ ಲೋಕಮಾತೆ ! 

ಪಾದ್ಯ :- ಪಂಕಜೋದ್ಭವೆ  ದೇವಿ ವಾಗ್ದೇವಿ ಗಿರಿಜಾತೆ ಪಾಕಶಾಸನವಂದ್ಯ ಪಾದಪದ್ಮೆ , ಬಿಂಕವೆಲ್ಲವ ಬಿಟ್ಟು ಪಾದ್ಯವನ್ನರ್ಪಿಸುವೆ  ಸರ್ವಮಂಗಳೇ ನಿನ್ನ ಚರಣಕೀಗ ! 

ಅರ್ಘ್ಯ:- ಅಭಯ ಹಸ್ತವ ನೀಡು ಕಮಲಾಕ್ಷಿ ದೇವಿ ನೀನುರುತರದ ಪ್ರೇಮದಿಂ ಪೊರೆಯುತೆನ್ನ , ಸಭಯಭಕ್ತಿಯೊಳೀಗಳರ್ಪಿಸುವ ಅರ್ಘ್ಯವಂ
ಸ್ವೀಕರಿಸಿ ಪೊರೆಯಮ್ಮ ಲೋಕಮಾತೆ! 

ಆಚಮನ:- ವಿಮಲ ಗಂಗಾದೇವಿ ಪಾಪನಾಶಕತೇಜೆ  ಸರ್ವಪಾವನರೂಪೇ ಪುಣ್ಯಜನನಿ, ಕಮಲಾಕ್ಷಿ ದೇವಿ ನಾನಾ ಚಮನವನರ್ಪಿಸುವೆ ಪಾಪ ಪುಣ್ಯವ ಮರೆಸಿ ಪೊರೆಯೆ ತಾಯಿ! 

ಸ್ನಾನ:-  ಪಂಚ ತತ್ವದ ದೇಹವಿಂದು ನಿನಗರ್ಪಿಸುವೆ ವಂಚನೆ ಇಲ್ಲದೆ ನಿನ್ನ ಪಾದದೆಡೆಗೆ ಸಂಚಿತ ಪ್ರಾರಬ್ಧ- ವೆಂಬ ಪಂಚಾಮೃತವನಂತರಂಗದ  ಭಾವ ಶುದ್ದಿಯಿಂದ!
ಶುದ್ಧಸತ್ವಳು ನೀನು ಬದ್ಧ ಸತ್ವಳು ನಾನು ಬುದ್ಧಿಹೀನಳ ಸಲಹು 
ಪರಮಮಾತೆ, ಸದ್ಧರ್ಮ ಸಾಮ್ರಾಜ್ಯ ಪದವಿಯೊಳು ನಿಲಿಸೆಂದು ಸ್ನಾನ ಮಾಡಿಸುತಿರುವೆ  ದೇವಿ ನಿನಗೆ ! 

ವಸ್ತ್ರ:- ಜಗದಂಬೆ ಲಲಿತಾಂಬೆ ದೇವದೇವನ ಬೊಂಬೆ 
ಮೂಲೋಕವಾವರಿಸಿದಂಬರಾಖ್ಯೆ,  ಮುಗುಳುನಗೆಯೊಳಗೆನ್ನ 
ವಸ್ತ್ರಸೇವೆಯನೊಪ್ಪಿ ಸೌಭಾಗ್ಯ ಸುಖವಿತ್ತು ಪೊರೆಯ ತಾಯೆ! 

ಕಂಚುಕ:- ಮಾನ ಮರ್ಯಾದೆಗಳ ರೀತಿನೀತಿಗಳೆಲ್ಲ ಮಾನವರ ನಾಟಕದೊಳಂಗವೆಂಬ ಮಾನ ಸೋನ್ನತಿಯಿತ್ತು  ಪೊರೆಯಬೇಕೆಂದೇನುತ ಕಂಚುಕವನರ್ಪಿಸುವೆ ತಾಯಿ ನಿನಗೆ! 

ಮಂಗಳದ್ರವ್ಯ:- ಪರಮ ಮಂಗಳೆ ನೀನು ಶಿವಶಕ್ತಿ ಪರಿಪೂರ್ಣ ಸೌಭಾಗ್ಯ ಸಂಪದ ನೀಡೆನುತಲಿ. 

ಅರಿಶಿನ - ಕುಂಕುಮ:- ಅರಿಶಿಣವ ಕುಂಕುಮವ ನೀಡುತಿಂದು ಪೂಜಿಸುವೆ ದಾರಿದ್ರ್ಯ ನಾಶಿನಿಯೆ ಲೋಕಮಾತೆ. 

ಚಂದ್ರ:- ಸಿಂಧುಸಂಭವೇ ದೇವಿ ಪರಮ ಕರುಣಾ ಸಿಂಧು ಸಿಂಧುಶಯನನ ಪಟ್ಟದರಸಿಯೆಂದು ,ಸಿಂಧೂರವನ್ನಿಡುವೆ ಪಾಪ ಸಿಂಧುವಿನಿಂದಲೆನ್ನ ನೀ ಕೈ ಹಿಡಿದೆತ್ತಿ ಪೊರೆಯೆ ತಾಯೆ! 

ಗಂಧ:- ವಾಸನಾಕ್ಷಯ ರೂಪೇ ಅಪವರ್ಗಸುಖದಾತೆ ಸಚ್ಚಿತ್ಸುಖಾನಂದ ಪೂರ್ಣರೂಪೆ ವಾಸನಾದ್ರವ್ಯವನ್ನಿಡುವೆ ನಿರ್ವಾಸನೆಯ ಸುಖವನ್ನು ಕೊಡು
ಎಂದು ದೇವಿ ನಿನಗೆ! 

ಅಕ್ಷತೆ:- ಅಕ್ಷತೆಯನರ್ಪಿಸುವೆನಂಬುಜಾಕ್ಷಿಯೇ ದೇವಿ ಕಂಜನಾಭನ ರಮಣಿ ಪೂರ್ಣ ಪ್ರಜ್ಞೆ ,ಅಕ್ಷಯದ ಸುಖವಿತ್ತು ಸುಕ್ಷೇಮದಿಂದೆಮ್ಮ ರಕ್ಷಣೆಯ ಮಾಡಮ್ಮ ದೇವಿ ಸುಭಗೆ ! 

ಪುಷ್ಪ:- ಪುಷ್ಪ ದೊಳಗಡಗಿರ್ಪ ಪರಿಮಳದ ಸೌಗಂಧ ಶಕ್ತಿ ರೂಪಳೆ ನಿನಗೆ ವಂದಿಸುತಲಿ ಭಾಷ್ಪಲೋಚನಾಳಾಗಿ ಪ್ರೇಮಪೂರಿತ ಹೃದಯ 
ಪುಷ್ಪವನ್ನರ್ಪಿಸುವೆ ದೇವಿ ನಿನಗೆ ! 

ಧೂಪ :- ಸತ್ಕರ್ಮ ಸದ್ಧರ್ಮ ಸೌಗಂಧಯುಕ್ತದಾ ಶ್ರದ್ಧೆ-  ಭಕ್ತಿಯೊಳಿಟ್ಟ ಮನಸಿನಿಂದ ಸತ್ಕರಿಸಿ ಕೊಡುತಿರುವೆ ಪಾಪ ಪುಣ್ಯವ ನಿನಗೆ 
ಧೂಪರೂಪದೊಳಿಂದು ಪೊರೆಯೆ ತಾಯೆ ! 

ದೀಪ:- ಕೋಟಿ ಸೂರ್ಯ ಪ್ರಭೆಯ  ಚಿಚ್ಛಕ್ತಿರೂಪಿನೀ ಪರಬೊಮ್ಮನಾಧಾರವಲ್ತೆ ದೇವಿ, ಸಾಟಿಯಲ್ಲವು ನಿನಗೆ ನಾನೆಡುವ 
ದೀಪದಾ ಮಂಕು ಬೆಳಕಿದ ನೋಡಿ ನಗುವೆ ತಾಯೆ! 

ನೈವೇದ್ಯ:- ಅನ್ನಪೂರ್ಣ ದೇವಿ ವಾತ್ಸಲ್ಯ ಪರಿಪೂರ್ಣೆ 
ಜೀವಮಾತ್ರರಿಗನ್ನವಿಡುವ ತಾಯೆ, ಅನ್ನವನು ಮುಂದಿಟ್ಟು ಮಗಳೆ ಕೊಂಡೊಯ್ಯುತಿಹ  ನೈವೇದ್ಯ ನಗೆಗೇಡಿದಲ್ತೆ ? ಪೇಳೌ! 

ತಾಂಬೂಲ:- ಸೌಂದರ್ಯ ಗುಣರೂಪೆ ಸತ್ಕಾಮ ಪರಿಪೋಷೆ 
ಸೌಂದರ್ಯದಧಿದೇವಿ ಮದನಮಾತೆ, ಸೌಂದರ್ಯ ಸೌಭಾಗ್ಯ 
ವೃದ್ಧಿಮಾಳ್ಪಾ  ಪಚ್ಚ ಕರ್ಪೂರ ವೀಳ್ಯವನ್ನರ್ಪಿಸುವೆನು! 

ನೀರಾಜನ :- ಪಂಚ ವಿಷಯಗಳಿಂದ ಕೂಡಿದಿಂದ್ರಿಯಚಯವ 
ನುರಿಸುತ್ತಲಿಂದು  ಜ್ಞಾನಾಗ್ನಿಯೋಳಗೆ, ಪಂಚಾರತಿಯ ಮಾಡಿ 
ಬೇಡಿಕೊಂಬುವೆ ದೇವಿ ಭವತಾಪಪರಿಹಾರೆ ಭಕ್ತವರದೆ!
ಪುಷ್ಪಾಂಜಲಿ:- ಜನ್ಮಜನ್ಮಾಂತರದಿ ನಾಗೈದ  ಪಾಪ ಸಂಚಯವೆಲ್ಲ
ನಿನ್ನಡಿಯೊಳಿಡುತಲೀಗ,  ಜನ್ಮಮರಣದ  ನಾಶಗೈವ ನಿನ್ನುಡಿಯಲ್ಲಿ ಅರ್ಪಿಸುವೆ ಪುಷ್ಪದಂಜಲಿಯ ನಾನು! 

ಪ್ರದಕ್ಷಿಣೆ:- ಎಲ್ಲ ಕಡೆಯಲಿ ನೀನೇ ಎಡದಿ ಬಲದಿ ನೀನೆ ನಿನ್ನ ಸುತ್ತಲು ತಿರುಗಲೆಂತಟಹುದು, ಎಲ್ಲ ರೂಪದ ನಿನ್ನ ಸುತ್ತ ಮರೆಯದೆ ನಾನು ನನ್ನ ಸುತ್ತಲೂ ತಿರುಗುತಿಹೆನು! 

ನಮಸ್ಕಾರ:- ಜ್ಞಾನರೂಪಳೆ ಜಯತು ಜಯತು ಜ್ಞಾನಬೋಧೆ  ಭಕ್ತವತ್ಸಲೆ ದೇವಿ ಜಯತು ಜಯತು, ಜ್ಞಾನಕರ್ಮವು ಭಕ್ತಿಯೆಂಬ ದಾರಿಗಳೊಳಗೆ ನೈಜ ಜ್ಞಾನವನೀಡು ತಾಯಿ ಜಯತು! 

ನಾನು ಏನನು ಅರಿಯೆ ನೀನು ಎಲ್ಲವನರಿವೆ ನಾನು ನನ್ನದಿದೆಂಬ ಭಾವ ಮರೆಸಿ ನೀನೀಗಲೆನ್ನ ನಿನ್ನಡಿಯಲ್ಲಿ ಹಾಕಿಕೊಂಡಭಿಮಾನ ಬಿಡುವಂತೆ ಮಾಡು ತಾಯೆ! 

ಜಯತು ಕರುಣಾಸಾಂದ್ರೆ ಜಯತು ಮಂಗಳ ರೂಪೆ ಜಯತು ಜಯ ಮಹದಾದಿ ಮಾಯೆ ಜಯತು ಜಯತು ದೇವರ ದೇವಿ ಶ್ರೀ ಚಿದಂಬರ ರೂಪೇ ನೀಡು ನೀನೆನಗೀಗ ಸಕಲ ಸುಖವ! 

ಉಪಸಂಹಾರ:- ತಪ್ಪು ನೆಪ್ಪುಗಳೆಲ್ಲ ಕಾಪಾಡು ತಾಯಿ ನೀ
ಕ್ಷಮಿಸುತೆನ್ನಪರಾಧ ಸಂಚಯವನು, ತಪ್ಪು ಮಾಡದ ಬುದ್ಧಿ- ಪಾಲಿಸುತ್ತಲಿ ಎನ್ನ ಪೊರೆ ಕರುಣದಾ ಮಾತೆ ದಾತೆ! 

ಕಪ್ಪಿಟ್ಟದ್ದು:-
ಕಪ್ಪು ದುಃಖವು ಸುಖವಿದೆಂಬ ಭಾವವು ಕಪ್ಪು ಜನ್ಮ ಜನ್ಮಾಂತರದ ಪಾಪ ಕಪ್ಪು , ಕಪ್ಪು ಬಾಲ್ಯದ ಬ್ರಾಂತಿ ಯೌವ್ವನದ ಸುಖದಿಚ್ಚೆಯಿಂದ ಕೂಡಿದ 
ಮನವದದುವೆ ಕಪ್ಪು!
ಕಪ್ಪೆ ಚಿಪ್ಪನು ಬೆಳ್ಳಿ ಎಂದು ತಿಳಿವುದೇ ಕಪ್ಪು, ಕತ್ತಲೆಯು ಬೆಳಕೆಂಬ ಭ್ರಾಂತಿ ಕಪ್ಪು ಕಪ್ಪು ಹಗ್ಗದೊಳಿರ್ಪ ಸರ್ಪ ರಾಜನ ಭ್ರಾಂತಿ  ಜಗದಿ ದೇವನ ಕಾಣದಿಹುದೆ ಕಪ್ಪು! 
ಹರಿಯು, ಹರನೆಂತೆಂಬ ಭೇದ ಭಾವದಿ ಲೋಕಕೀಶದೇವನ ಮರೆವುದದುವೆ 
ಕಪ್ಪು ಗುರುದೇವನಂಘ್ರಿ ಪಂಕಜದ ಭಜನೆಯ ಮರೆತು ವಾದ ಮಾಡುವ ಬುದ್ಧಿಯದುವೆ  ಕಪ್ಪು!
ನೀರಿನಿಂದಲೇ ಬೇರೆಯಾಗಿ ತೋರುವ ಗುಳ್ಳೆ ರೂಪಬೇಧದಿ ನಿಜವ ಮರೆಸುವಂತೆ  ತೋರಿ ಭ್ರಾಂತಿಯನೀವ  ಜಗವೆ ನೀನೆಂತೆಂಬ ನಿಜವ ಮರೆಸುವುದದುವೆ  ದೊಡ್ಡ ಕಪ್ಪು!
ಕಪ್ಪುದೊಂದೆ ಜಗದಿ ನಾಟ್ಯವಾಡುತ  ನರನ ಕೋತಿಯಂದದಿ ಕುಣಿಸುತಲಿರುತಲಿಹುದು, ಕಪ್ಪು ಕಣ್ಣನು ಮುಚ್ಚುತೆನ್ನ ಮನವನು ಶತ್ರು ದುರ್ಗ ಮಧ್ಯದಿ  ಬಂಧಿಸಿಹುದು ತಾಯೆ! 

ಇಂತು ತೋರುತಲೆನ್ನ ಮನವ ಮೋಹಿಪ ಕಪ್ಪಿನೊಳಗೆ ಬೆರೆಸುತಲೀಗ ಜ್ಞಾನರಸವ ,ಸಂತಸದಿ ಕಾಡಿಗೆಯ ಮಾಡಿ ನಾನರ್ಪಿಸುವೆ 
ಕಂಜಲೊಚನೆ ನಿನ್ನ ನೇತ್ರಯುಗಕೆ!! 

ಪ್ರಸಾದ ಕೇಳುವುದು:- ಪ್ರೇಮ ಪುಷ್ಪವ ನೀಡು ಜಗದಂಬೆ ಎನಗೀಗ
ಅಕ್ಷಯದ ಸೌಖ್ಯವನ್ನು ಬೇಡುತಿಹೆನು ನೇಮದೊಳು ನಿನ್ನಲ್ಲಿ ಖಂಡವಿಲ್ಲದ ಭಕ್ತಿ ವೈರಾಗ ವಿಷಯದೊಳು ಪುಟ್ಟಿಸಮ್ಮ! 

ಆರೋಗ್ಯವೈಶ್ವರ್ಯದಧಿಕಾರ ಸಂಪತ್ತು ಪಾಪ ಪುಣ್ಯ ವಿಚಾರ
ಬುದ್ಧಿ - ಯೊಡನೆ ನಾರಾಯಣಾಂಘ್ರಿ ಪದ್ಮದೊಳಿಟ್ಟ ಮನವ 
ನೀನಿಂದು ಕರುಣಿಸುತೆನ್ನ ಪತಿಯ ಪೊರೆಯೆ! 

ಪತಿಯ ಪುತ್ರರನೆಲ್ಲ ನಿನ್ನ ರೂಪದಿ ಕಂಡು ನಾನು ನನ್ನದಿದೆಂಬ ಭಾವ 
ಮರೆದು  ನುತಿಸಿ ನಿನ್ನಡಿಗಳನು ಪೂಜಿಸುವ ಪರಮಾರ್ಥ ಬೋಧೆಯನು ಪಡೆವಂತೆ ಹರಸು  ತಾಯಿ ! 

ಈಗಿರುವ ಜನ್ಮದೊಳಗನುಭವಿಪ ಸುಖ ದುಃಖ ಭಾವದೊಳಗಡಗಿರ್ಪ ಚಂಚಲತೆಯ ನೀಗಿ ನಿನ್ನಡಿಯೊಳೆನ್ನನರ್ಪಿಪ ಪರಮ ಶಾಂತಿ ಮೋಕ್ಷದ
ಪದವ ನೀಡು ತಾಯೆ! 
***