ರಾಗ - : ತಾಳ -
ನೋಡಿದೆ ವಿಟ್ಠಲನ ನೋಡಿದೆ ll ಪ ll
ನೋಡಿದೆನು ಕಂಗಳಲಿ ತನುವೀ
ಡಾಡಿದೆನು ಚರಣಾಬ್ಜದಲಿ ಕೊಂ
ಡಾಡಿದೆನು ವದನದಲಿ ವರಗಳ
ಬೇಡಿದೆನು ಮನದಣಿಯ ವಿಟ್ಠಲನ ll ಅ ಪ ll
ಇಂದಿರಾವಲ್ಲಭನ ತಾವರೆ
ಗಂದನಂಜಿಸಿ ತಪತಪಾವೆಂ
ತೆಂದು ಪೇಳ್ದನ ಯುವತಿ ವೇಷದಿ
ಕಂದು ಗೊರಳನ ಸ್ತುತಿಸಿದನ ಪು
ರಂದರಾನುಜನಾಗಿ ದಿವಿಯೊಳು
ಕುಂದದರ್ಚನೆಗೊಂಬ ಸನಕ ಸ
ನಂದಾದಿ ಮುನೀಂದ್ರ ಹೃದಯ ಸು
ಮಂದಿರನ ಮಮ ಕುಲದ ಸ್ವಾಮಿಯ ll 1 ll
ಯಾತುಧಾನರ ಭಾರ ತಾಳದೆ
ಭೂತರುಣಿ ಗೋರೂಪಳಾಗಿ ಸ
ನಾತನನ ತುತಿಸಲ್ಕೆ ಶೇಷ ಫ
ಣಾತ ಪತ್ರನು ನಂದಗೋಪ ನಿ
ಕೇತನದಲವತರಿಸಿ ವೃಷ ಬಕ
ಪೂತನಾದ್ಯರ ಸದೆದು ಬಹುವಿಧ
ಚೇತನರಿಗೆ ಗತಿನೀಡಲೋಸುಗ
ಜಾತಿಕರ್ಮಗಳೊಹಿಸಿ ಮೆರೆದನ ll 2 ll
ತನ್ನತಾಯ್ತಂದೆಗಳ ಹೃದಯವೆ
ಪನ್ನಗಾರಿಧ್ವಜಗೆ ಸದನವೆಂ
ದುನ್ನತ ಭಕುತಿ ಭರದಿ ಅರ್ಚಿಪ
ಧನ್ಯಪುರುಷನ ಕಂಡು ನಾರದ
ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರ
ಪನ್ನ ವತ್ಸಲ ಬಿರುದು ಮೆರೆಯಲು
ಜೊನ್ನೊಡಲು ಭಾಗದಿ ನೆಲೆಸಿದ ಜ
ಗನ್ನಾಥ ವಿಟ್ಠಲನ ಮೂರ್ತಿಯ ll 3 ll
***