ಶ್ರೀಗೋಪಾಲದಾಸಾರ್ಯ ವಿರಚಿತ ಉಪಾಸನಾ ಸುಳಾದಿ
(ಶ್ರೀಹರಿಯ ಗುಣೋಪಸಂಹಾರ ಉಪಾಸನೆಯಿಂದ, ಜೀವನು ಆಯಾ ದೋಷಗಳಿಂದ ಮುಕ್ತನಾಗುವನು. ಹರಿ ಸರ್ವೋತ್ತಮನೆಂದು ತಿಳಿದು ನಿಶ್ಚೈಸಿದ ಭಕ್ತನಿಗೆ ನಿರಯವಿಲ್ಲ ಇತ್ಯಾದಿ ಪ್ರಮೇಯ, ತ್ರಿವಿಧ ಬಿಂಬ ವಿಚಾರ ಮತ್ತು ಸಾಧನ ವಿಚಾರ)
ರಾಗ ಷಣ್ಮುಖಪ್ರಿಯ
ಧ್ರುವತಾಳ
ಎಲಲ್ಯಾ ದೋಷಂಗಳೆ ನಾ ನಿರ್ದೋಷನಾಶ್ರಿತನು
ಎಲೆಲೆ ದುರಿತವೆ ನಾನು ಬಲ ಪೂರ್ಣಾಶ್ರಿತನು
ಎಲೆಲೆ ಸುಖವೆ ನಾನು ಪೂರ್ಣಾನಂದನ ಆಳು
ಎಲೆಲ್ಯಾ ಅಜ್ಞಾನವೆ ನಾ ಜ್ಞಾನಪೂರ್ಣನಾಶ್ರಿತನು
ಎಲೆಲೆ ಕಾಮವೆ ನಾನು ಪೂರ್ಣಕಾಮನ ಆಳು
ಎಲೆಲಾ ಕ್ರೋಧವೆ ನಾನು ಅಚ್ಚ ಕರುಣಾಕರನಾಳು
ಎಲೆಲಾ ಮೋಹವೆ ನಾನು ವ್ಯಾಪ್ತ ವಿಷ್ಣುವಿನ ಆಳು
ಎಲೆಲಾ ಲೋಭವೆ ನಾನು ಸಾರ್ವಭೌಮನ ಆಳು
ಎಲೆಲಾ ಮದವೆ ನಾನು ನಿರಹಂಕಾರಿಯಾಶ್ರಿತನು
ಎಲೆಲಾ ಮತ್ಸರವೆ ನಾನು ಕುಟಿಲರಹಿತನ ಆಳು
ಎಲೆಲಾ ನಿದ್ರಿಯೆ ನಾನು ಅನಿದ್ರಿಯನಾಳು
ಎಲೆಲಾ ಹಸಿವೆ ತೃಷಿಗಳೆ ನಾ ನಿತ್ಯತೃಪ್ತನ ಆಳು
ಸುಳಿಯ ಬೇಡಿನ್ನು ನೀವು ಸುತ್ತಲಾದರು ಎನ್ನ
ಬಲವಂತನಾದ ಹರಿಯ ಬಿಂಬಾಶ್ರಿತ
ಸ್ಥಳವಿಲ್ಲಾ ನಿಮಗೆನಿಲ್ಲಾ ಎನ್ನಲ್ಲಿ ನೋಡಲು
ತೊಲಗಿರಿ ತೊಲಗಿತ್ತ ಸುಳಿಯದಲೆ
ಮಲತಮಲ್ಲರ ಗಂಡ ಗೋಪಾಲವಿಟ್ಠಲ
ಹಲವು ಪರಿಯಲಿ ನಮ್ಮ ಸಲಹೊ ದೇವಾ ॥ 1 ॥
ಮಟ್ಟತಾಳ
ಗುಣಪೂರ್ಣ ಸುಖಪೂರ್ಣ ಅಣುಮಹಾದೊಳು ವ್ಯಾಪ್ತ
ಕ್ಷಣಲವ ತೃಟಿಕಾಲ ಕೊರತಿ ಯಿಲ್ಲವು ಕಾಣೆ
ಗುಣಬದ್ಧನು ಅಲ್ಲ ಕೇವಲ ನಿರ್ಗುಣಾ
ಅಣುಮಾತುರವನ್ನ ಭಿನ್ನ ವಿಷಯ ರಹಿತಾ
ಅನ್ಯೋನ್ಯವಾಗೆ ಜೀವ ಜಡದಲಿದ್ದು
ಇನ್ನು ಕ್ರೀಡೆಯು ಮಾಳ್ಪ ಚಿನ್ನುಮಯನಾಗಿ
ತನ್ನ ಆನಂದಕ್ಕೆ ಲೇಶ ಕೊರತೆ ಯಿಲ್ಲಾ
ಇನ್ನು ಜೀವರಿಗಾಗಿ ಸಕಲ ಕ್ರೀಡೆಯು ಮಾಳ್ಪಾ
ಪುಣ್ಯ ಪಾಪಗಳಿಂದ ವಿಲಕ್ಷಣನಯ್ಯಾ
ಇನ್ನೇನೊರ್ಣಿಸುವೆ ಇವನ ಮಹಾಮಹಿಮೆ
ಅನಂತ ಗುಣಪೂರ್ಣ ಲಕುಮಿಗಾಗೋಚರ
ಎನ್ನಾಳುವ ಸ್ವಾಮಿ ಗೋಪಾಲವಿಟ್ಠಲ
ತನ್ನ ನಂಬಿದವರ ತನ್ನ ಸದೃಶರ ಮಾಳ್ಪಾ ॥ 2 ॥
ರೂಪಕತಾಳ
ನಿತ್ಯತ್ವ ನಿರ್ದೋಷ ನಿರ್ಗುಣ ಶ್ರೇಯಸ್ಸು
ಚಿತ್ತಾ ಭೃತ್ಯ ಭಾವವನೆ ಆನಂದ ಬಲ
ಸತ್ವ ಜೀವರಲ್ಲಿ ಬಿಂಬ ಸದೃಶ ಉಂಟು
ನಿತ್ಯ ಸಂಸಾರಿಗೆ ನಿತ್ಯತ್ವದಲ್ಲಿ ಮಾತ್ರ
ಮತ್ತಾವ ತಾಮಸ ಜೀವರ್ಗೆ ಸಾದೃಶ್ಯ
ನಿತ್ಯತ್ವ ನಿರ್ಗುಣ ಎರಡು ವಿಧ ಉಂಟು
ಸತ್ಯಜ್ಞಾನಿಗೆ ಸುಖ ಮಿಥ್ಯಾಜ್ಞಾನಿಗೆ ದುಃಖ
ವ್ಯಕ್ತಿ ಆಹುದು ಕೇವಲ ನಿರ್ಗುಣದಾಗಾ
ಸತ್ಯಸಂಕಲ್ಪ ಗೋಪಾಲವಿಟ್ಠಲನ್ನ
ಭಕ್ತರಿಗೆ ಭಯವಿಲ್ಲ ಬಲು ಆನಂದಾ ॥ 3 ॥
ಝಂಪೆತಾಳ
ದ್ವೇಷಿ ಎಂತೆಂದುಪಾಸನೆಯ ಮಾಳ್ಪರಿಗೆ
ದ್ವೇಷಿಯಾಗಿ ದುಃಖ ಉಣಿಸುವನು
ದ್ವೇಷ ರಹಿತನೆಂದುಪಾಸನೆಯ ಮಾಳ್ಪರಿಗೆ
ಮೀಸಲಾನಂದ ಸುಖ ಮಿಗಿಲುಣಿಸುವಾ
ದೋಷವಾರದು ನೋಡು ಚೇತನ ಯೋಗ್ಯತೆ
ನಾಶ ಮಾಡದದರ ಬೀಜ ಮೂಲಾ
ಸಾಸಿವಿಯ ಬಿತ್ತಿನ್ನು ಸಾಸಿವಿಯ ಬೆಳೆವ ಕಾ -
ರ್ಪಾಸು ಬೆಳೆದರೆ ಇದು ದೋಷವಲ್ಲೆ
ವೈಷಮ್ಯ ನೈರ್ಘಣ್ಯ ಈಷನ್ಮಾತ್ರ
ದೋಷ ಚಿಂತನೆ ಜಗದೀಶಗಿಲ್ಲಾ
ವಾಸುದೇವ ಗೋಪಾಲವಿಟ್ಠಲ ನೆಂತು -
ಪಾಸನೆಯ ಮಾಳ್ಪರಿಗಂತಂತೆ ಫಲವೀವ ॥ 4 ॥
ತ್ರಿವಿಡಿತಾಳ
ಹರಿ ಎಂಬೊ ವನಧಿಯು ಕರುಣವೆಂಬೋ ಜಲಕ್ಕೆ
ಎರಡು ಧಡವು ಭಕುತಿ ವಿರಕುತಿಯನು ಮಾಡಿ
ವರ ಜ್ಞಾನವೆಂಬ ನಾವೆಯನು ಆಶ್ರೈಸಿ
ಪರಿಪರಿ ಗುಣವೆಂಬ ರತುನವ ಹುಡುಕುತ
ನಿರುತ ಅಲ್ಲಿಹ ದಿವ್ಯ ನೆರೆ ಕಥಾಮೃತ ಉಣುತ
ಮೊರೆ ಹೊಕ್ಕೆನ್ನಿರೊ ಕೃಷ್ಣನೆಂಬೊ ಶರಧಿ ಬಿದ್ದು
ಬರಬೇಡಿರೆನ್ನ ಗೊಡಿವೆ ದುರಿತ ಕಾಮಕ್ರೋಧಗಳೆ
ಹರಿದು ಹೋಗುವಿರಿತ್ತ ಬರಲು ಯೋಗ್ಯರಲ್ಲಾ
ಶಿರವ ಚೆಂಡಾಡುವೆಮ್ಮರಸು ಕಂಡರೆ ನಿಮ್ಮ
ಸರಿ ಹೋದ ಸ್ಥಳಗಳಲಿ ಇರ ಹೋಗಿ
ಶಿರಿ ಮಹಾರಾಜ ಗೋಪಾಲವಿಟ್ಠಲರೇಯನ
ಪರಿಚಾರಕರ ಪರಿಚಾರಕರಾಳು ನಾ ॥ 5 ॥
ಅಟ್ಟತಾಳ
ಕೋಪಂಗಳೆನ್ನ ಸಂತಾಪ ಪಡಿಸದಿರಿ
ಶ್ರೀಪತಿಗ್ಹೇಳಿ ನಾ ಕೊಲಿಯ ಕೊಲ್ಲಿಸುವೆನು
ಕೋಪಂಗಳ್ಯಾ ಪುಣ್ಯ ಲೋಪ ಮಾಡಿಸದಿರಿ
ವ್ಯಾಪಕನಾದ ವಿಷ್ಣುವಿಗ್ಹೋಗಿ ಪೇಳುವೆ
ರೂಪಂಗಳೆ ಅನ್ಯರೂಪ ನೋಡಲಿ ಬೇಡಿ
ಆ ಪುರುಷ ಹೃಷೀಕಪಗೆ ಪೇಳುವೆ
ತಾಪಸರೊಡಿಯ ಗೋಪಾಲವಿಟ್ಠಲ ಎನ್ನ
ಕಾಪಾಡುವನು ನಿಮ್ಮ ವ್ಯಾಪಾರ ನಿಲ್ಲಿಸಿ ॥ 6 ॥
ಆದಿತಾಳ
ಭಕುತ ಸಾರ್ಥ ಭಯ ನಿವಾರ್ಣಾ (ನಿವಾರಣಾ )
ಮುಕುತಿ ದಾತಾ ಮುಕುಂದಾ ನಂದಾ
ಶಕುತಾ ವ್ಯಕುತಾ ಸಾರ ಭೋಕ್ತಾ
ಸುಖಸಮುದ್ರ ಸುರನದಿ ಜನಕಾ
ಅಕುಟಿಲ ಅಷ್ಟಮುದ ಸಂಪನ್ನ
ಸ್ವಕುಲ ನಾಶಕ ಸ್ವಾರ್ಥ ರಹಿತಾ
ಸುಖಮಯ ಕಾಯಾ ಸುಲಭ ದೇವಾ
ಸಾಕಾರ ರೂಪ ಸರ್ವಜ್ಞನೆ
ಪ್ರಾಕೃತ ದೂರಾ ಪರಮ ಪುರುಷ
ನಾಕೇಶವಂದಿತ ಗೋಪಾಲವಿಟ್ಠಲ
ಸಾಕುವ ಸರ್ವದಾ ಸನ್ನಿಧಿಯಲ್ಲಿದ್ದು ॥ 7 ॥
ಜತೆ
ಹರಿಯೇ ಸರ್ವೋತ್ತಮನೆಂದು ನಿಶ್ಚಯದಿಪ್ಪ
ನರಗೆ ನಿರಯವಿಲ್ಲ ಗೋಪಾಲವಿಟ್ಠಲ ಬಲ್ಲಾ ॥
****