ಕಂಡವರ ತೊಂಡ ನೆನಿಸ ಬೇಡ ಹರಿಯೇ ಪ
ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ.
ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು
ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು
ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು
ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ 1
ಆಶೆಯ ತೊರೆದು ನಿಜ ದಾಸನಾಗಲಿಬಹುದು
ದೇಶ ದೇಶವ ತಿರುಗಿ ಕಾಸುಗಳಿಸಲಬಹುದು
ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು
ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ 2
ಹೀನ ಜನರಾ ಸಂಗ ಮಾನವಂತರಿಗಲ್ಲ
ದೀನಜನಮಂದಾರ ಕೊಡಬೇಡ ಇದು ಎನಗೇ
ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ
ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ 3
****