ankita ವಿಠಲೇಶ
ರಾಗ: ತೆಲಂಗ್ ತಾಳ: ತ್ರಿ
ಶೃಂ. . .ಗಾ. . ರ ವದನಾ ಪ್ರಭುವರ
ಮಂಗಳಾಂಗ ನರಸಿಂಗ ಪ್ರಿಯತಮಾ ಪ
ಸುಜನರ ಶುಭೋದಯ ಭಾಸ್ಕರಾ
ಭಜಕರ ಹೃದಾಂಗಣ ಚಂದಿರಾ
ಧ್ವಜಪತಾಕೆ ಮೊದಲಾದ ವೈಭವ
ವಿಜಯಮೂರ್ತಿ ರಾಜಾಧಿರಾಜ ಗುರು 1
ರಘುಪತಿಪದಾಶ್ರಯಸಂಪದಾ
ಮೊಗದೊಳು ಸರಸ್ವತಿ ಶುಭಪದಾ
ನಿಗಮಶಾಸ್ತ್ರ ಸಂಗೀತ ಜಾಣ್ಮೆಯಿಂ
ಜಗದಿ ಖ್ಯಾತ ಶ್ರೀ ರಾಘವೇಂದ್ರಗುರು 2
ಮುದಮುನಿ ಮಹಾಸನಮಂಡಿತಾ
ಬುಧರಿಗೆ ಸುಧಾರಸಸಂಚಿತಾ
ಹೃದಯವಾಸ ವಿಠಲೇಶನೊಲ್ಮೆಯಿಂ
ಮುದಿತನಾದ ಪ್ರಹ್ಲಾದರಾಜ ಗುರು 3
***
ankita ವಿಠಲೇಶ
ತಿಲಂಗ್ ತಾಳ: ದಾದರಾ
ಶ್ರೀಸುಧೀಂದ್ರತನಯ ನಿನ್ನ
ದಾಸ ಜನರೊಳಾಡಿಸೆನ್ನ
ದೋಷ ತೊಳೆದು ಕಾಯೊ ಘನ್ನ
ವಾಸುದೇವನೊಲಿದ ಧನ್ಯ ಪ
ಏಸು ಜನುಮ ಭಾಗ್ಯ ನಿನ್ನ
ಈಸು ಸೇವೆಗೆಳೆಸಿತೆನ್ನ
ವಾಸವಾಗಿ ಮನದೊಳಿನ್ನು
ಲೇಸುಗೊಳಿಸು ದಿನಗಳನ್ನು 1
ಮುನ್ನಗೈಯ್ದ ನಿನ್ನ ಪಾಪ
ಇನ್ನು ತೀರಿತೆನ್ನಬೇಡ
ಪುಣ್ಯರಾಶಿ ನಿನ್ನ ಎಡೆಯೊ-
ಳನ್ಯಗತಿಯೆ ಘನ್ನ ಮಹಿಮೆ 2
ಆಗ ಈಗ ಎನ್ನಬೇಡ
ಯೋಗಿಚಂದ್ರ ರಾಘವೇಂದ್ರ
ಬೇಗ ವಿಠಲೇಶನೊಲ್ಮೆ
ಯೋಗ ಭಕುತಿ ಭಾಗ್ಯ ತೋರೊ 3
***